ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಗಾಳಿ ಬೀಸುತ್ತಿದೆ ಎಂದು ಸಚಿವ ಎಂ.ಬಿ.ಪಾಟೀಲ ಹೇಳಿದ್ದಾರೆ.
ಶನಿವಾರ ಬಬಲೇಶ್ವರ ತಾಲೂಕಿನ ಮಮದಾಪುರದಲ್ಲಿ ಜಿಪಂ ವ್ಯಾಪ್ತಿಯ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರೊ.ರಾಜು ಆಲಗೂರ ಪರ ಮತಯಾಚಿಸಿ ಅವರು ಮಾತನಾಡಿದರು. ಕಳೆದ ಲೋಕಸಭೆ ಚುನಾವಣೆ ವೇಳೆ ಪುಲ್ವಾಮಾ ಮೇಲೆ ದಾಳಿ, ಪ್ರತಿಯಾಗಿ ಭಾರತ ಕೈಗೊಂಡ ಏರ್‌ಸ್ಟ್ರೈಕ್‌ನಂಥ ಭಾವನಾತ್ಮಕ ವಿಚಾರಗಳು ಬಿಜೆಪಿಗೆ ವರವಾಗಿದ್ದವು ಎಂದರು.ಮೋದಿ ಅವರು ನೀಡಿದ್ದ ಕಪ್ಪುಹಣ ವಾಪಸ್ ತಂದು ಪ್ರತಿಯೊಬ್ಬರ ಖಾತೆಗೆ ₹ 15 ಲಕ್ಷ ಹಣ ಹಾಕುವ, ಪ್ರತಿವರ್ಷ 2 ಕೋಟಿ ಉದ್ಯೋಗ ಸೃಷ್ಟಿಸಿ ಅಚ್ಛೇ ದಿನ್ ಭರವಸೆಗಳು ಈಡೇರಿಲ್ಲ ಎಂದು ಆರೋಪಿಸಿದರು.
ಈಗ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಗಾಳಿ ಬೀಸುತ್ತಿದೆ. ಪಂಚ ಗ್ಯಾರಂಟಿ ಯೋಜನೆಗಳು ಜನರ ಜೀವನಮಟ್ಟ ಸುಧಾರಿಸಿವೆ. 2013-18ರ ಅವಧಿಯಲ್ಲಿ ಜಿಲ್ಲೆಯಲ್ಲಿ ನಾವು ಕೈಗೊಂಡ ನೀರಾವರಿ ಯೋಜನೆಯಿಂದಾಗಿ ಅಂತರ್ಜಲ ಹೆಚ್ಚಾಗಿದ್ದು, ರಾಜ್ಯದಲ್ಲಿ ಭೀಕರ ಬರವಿದ್ದರೂ, ಜಿಲ್ಲೆಯಲ್ಲಿ ಅಷ್ಟೊಂದು ಪರಿಣಾಮ ಬೀರಿಲ್ಲ ಎಂದರು.ಕಾಂಗ್ರೆಸ್ ಸರ್ಕಾರವಿದ್ದಾಗ ತೈಲಬೆಲೆ ಕೇವಲ 10 ಪೈಸೆ ಹೆಚ್ಚಳವಾದರೂ ಬಿಜೆಪಿಯ ಸ್ಮೃತಿ ಇರಾನಿ ಮತ್ತು ಶೋಭಾ ಕರಂದ್ಲಾಜೆ ಸೇರಿದಂತೆ ಎಲ್ಲ ಮುಖಂಡರು ಪ್ರತಿಭಟನೆ ನಡೆಸುತ್ತಿದ್ದರು. ಆದರೆ, ಈಗ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ₹ 50 ಮತ್ತು ಅಡುಗೆ ಅನಿಲ ದರ ₹ 800ರಷ್ಟು ಹೆಚ್ಚಾದರೂ ಮೌನ ವಹಿಸಿದ್ದಾರೆ. ಇವು ಬಿಜೆಪಿ ದೇಶದ ಜನರಿಗೆ ನೀಡಿರುವ ಅಚ್ಛೇ ದಿನ್ ಎಂದು ಬಿಜೆಪಿಯ ಕಾಲೆಳೆದರು.
ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ಮಾತನಾಡಿದರು. ಕಾಂಗ್ರೆಸ್ ಮುಖಂಡ ಸಂಗಮೇಶ ಬಬಲೇಶ್ವರ, ಜಿಪಂ ಮಾಜಿ ಅಧ್ಯಕ್ಷ ವಿ.ಎಸ್. ಪಾಟೀಲ, ಬಸವರಾಜ ದೇಸಾಯಿ, ಮುಖಂಡರಾದ ಮೌಲಾಸಾಬ ಜಹಾಗಿರದಾರ, ಎಂ.ಕೆ. ಕುಲಕರ್ಣಿ, ಕುಮಾರ ದೇಸಾಯಿ, ರಫೀಕ್ ಖಾನೆ ಮಾತನಾಡಿ, ಪ್ರೊ. ರಾಜು ಆಲಗೂರ ಅವರಿಗೆ ಮತ ನೀಡುವಂತೆ ಮನವಿ ಮಾಡಿದರು.ಈ ಸಂದರ್ಭದಲ್ಲಿ ಮುಖಂಡರಾದ ಕೃಷ್ಣಾಜಿ ಕುಲಕರ್ಣಿ, ಕಲ್ಲನಗೌಡ ಪಾಟೀಲ, ವಿ.ಎಚ್. ಬಿದರಿ, ಈರಣ್ಣ ಕೊಪ್ಪದ, ಆಶಾ ಕಟ್ಟಿಮನಿ, ಸುಮಿತ್ರಾ ಶಿರಬೂರ, ರೇಶ್ಮಾ ಮಲ್ಲಿಕಾರ್ಜುನ ಗಂಗೂರ, ಸುಖದೇವ ಕಟ್ಟಿಮನಿ, ರಮೇಶ ಜೈನಾಪೂರ, ಬಸವನಗೌಡ ಪಾಟೀಲ, ಕೌಸರ್ ನಿಯಾಜ್ ಅತ್ತಾರ, ಶೇಖು ಪೂಜಾರಿ, ಎಸ್.ಕೆ. ನಿಡೋಣಿ, ಬಸವರಾಜ ಮಲಕಗೊಂಡ, ಮಹಾದೇವ ಕಂತಿ, ಎಂ.ಎಂ. ಬಾಗವಾನ, ರೇಶ್ಮಾ, ಬಸಪ್ಪ ಬಾವಿಕಟ್ಟಿ ಮುಂತಾದವರು ಉಪಸ್ಥಿತರಿದ್ದರು. ಅಮರೇಶ ಹಾದಿಮನಿ ನಿರೂಪಿಸಿದರು.ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ಅವರಿಗೆ ಮತ ಹಾಕಿದರೆ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಮತ್ತು ಎಂ.ಬಿ. ಪಾಟೀಲರಿಗೆ ಹಾಕಿದಂತೆ. ಅವರಿಗೆ ಮತ ಹಾಕಿ ನಮ್ಮ ಕೈ ಬಲಪಡಿಸಿ. ಈ ಮೂಲಕ ಭಾವೈಕ್ಯತೆ ಕೆಡಿಸಿ ಜನರ ಭಾವನೆ ಹಾಳು ಮಾಡುವವರಿಗೆ ಪಾಠ ಕಲಿಸಿ.
-ಎಂ.ಬಿ.ಪಾಟೀಲ ಸಚಿವ