ಸಾರಾಂಶ
ಶಿವಕುಮಾರ ಕುಷ್ಟಗಿ ಗದಗ
ಗಾಳಿ ವಿದ್ಯುತ್ ಉತ್ಪಾದನಾ ಕಂಪನಿಯಿಂದ ಆಗಿರುವ ಹಾನಿಗೆ ಪರಿಹಾರ ಕೋರಿ ಸಲ್ಲಿಸಿದ ಮನವಿಗೆ ಜಿಲ್ಲಾಡಳಿತ ಮತ್ತು ತಾಲೂಕಾಡಳಿತ ಕೇವಲ ಪತ್ರ ವ್ಯವಹಾರದಲ್ಲೇ ಕಾಲಹರಣ ಮಾಡುವ ಮೂಲಕ ಅನ್ನದಾತನಿಗೆ ಅನ್ಯಾಯ ಮಾಡುತ್ತಿರುವ ಪ್ರಕರಣ ತಾಲೂಕಿನ ಕೋಟುಮಚಗಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.ಗಾಳಿ ವಿದ್ಯುತ್ ಕಂಪನಿಯ ಅವಾಂತರದಿಂದಾಗಿ ಮಳೆಗೆ ಕೊಚ್ಚಿಹೋಗಿರುವ ತನ್ನ ಭೂಮಿಗೆ ಪರಿಹಾರ ಕೊಡಿಸುವಂತೆ ಮನವಿ ಹಿಡಿದು ಬಂದ ರೈತನನ್ನು ಪೊಲೀಸರು, ತಹಸೀಲ್ದಾರರು ಸೇರಿ ಜಿಲ್ಲಾಧಿಕಾರಿ ಕಚೇರಿಗೆ ಅಟ್ಟಿದರೆ, ಇದೀಗ ಆ ಜಿಲ್ಲಾಧಿಕಾರಿಗಳು ಈ ಅನ್ನದಾತನನ್ನು ತಹಸೀಲ್ದಾರ ಬಳಿ ಹೋಗು ಎಂದು ಕಳಿಸುವ ಮೂಲಕ ಜವಾಬ್ದಾರಿಯಿಂದ ನುಣುಚಿಕೊಂಡಿದ್ದಾರೆ. ಹೀಗೆ ಕಚೇರಿಗಳನ್ನು ಅಲೆದಾಡಿದ ಈ ಅನ್ನದಾತನಿಗೀಗ ದೇವರೇ ದಿಕ್ಕು ಎನ್ನುವಂತಾಗಿದೆ.
ಅನಧಿಕೃತ ರಸ್ತೆ ನಿರ್ಮಾಣ:ರೈತ ಹುಚ್ಚೀರಯ್ಯ ಬಳಗೇರಮಠ, ಅಬ್ಬಿಗೇರಿ ಗ್ರಾಮ ವ್ಯಾಪ್ತಿಯಲ್ಲಿ ಸರ್ವೇ ನಂಬರ್ 464/1ಎ+/1ಬಿ+1ಸಿ/3ಬ ನ, 3 ಎಕರೆ ಜಮೀನು ಹೊಂದಿದ್ದು, ವಿವಿಡ್ ರಿನಿವೇಬಲ್ ಪ್ರೈವೇಟ್ ಲಿ ಕಂಪನಿಯು ತನ್ನ ಬೃಹತ್ ವಾಹನಗಳನ್ನು ಕಪಂಡೊಯ್ಯಲು ಇವರ ಜಮೀನಿಗೆ ಹೊಂದಿಕೊಂಡು ಅನಧಿಕೃತ ರಸ್ತೆ ನಿರ್ಮಿಸಿದೆ.
ತಮ್ಮ ಗಾಳಿ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪನೆ ಕಾರ್ಯ ಮುಗಿದ ಬಳಿಕ ಆ ನೆಲವನ್ನು ಯಥಾಸ್ಥಿತಿ ಮಾಡದೇ ಇರುವುದರಿಂದ ಮಳೆಗಾಲದಲ್ಲಿ ಈ ರೈತನ ಹೊಲದ ಒಡ್ಡು, ಅಪಾರ ಪ್ರಮಾಣದ ಮಣ್ಣು ಕೊಚ್ಚಿಹೋಗಿ ಇಡೀ ಹೊಲ ಕೊರಕಲಾಗಿದೆ.ಈ ವಿಷಯವನ್ನು ದಾಖಲೆ ಸಮೇತ ವಿವಿಡ್ ರಿನಿವೇಬಲ್ ಪ್ರೈವೇಟ್ ಲಿ ಕಂಪನಿ ಅಧಿಕಾರಿಗಳಿಗೆ ಮನವರಿಕೆ ಮಾಡಿ, ಆಗಿರುವ ಹಾನಿಗೆ ಪರಿಹಾರ ನೀಡುವಂತೆ ಮಾಡಿದ ಮನವಿಗೆ ಸರಿಯಾಗಿ ಸ್ಪಂದಿಸದೇ ಇದ್ದಾಗ ರೈತ ಹುಚ್ಚೀರಯ್ಯ ರೋಣ ಪೊಲೀಸರು, ತಹಸೀಲ್ದಾರ ಗಮನಕ್ಕೆ ತಂದಿದ್ದಾರೆ. ಅವರು ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲು ಸಲಹೆ ನೀಡಿದ್ದಾರೆ.
ಜಿಲ್ಲಾಧಿಕಾರಿಯಿಂದಲೂ: ರೈತ ಹುಚ್ಚೀರಯ್ಯ ತಹಸೀಲ್ದಾರ ನಿರ್ದೇಶನದಂತೆ ಡಿ.19, 2024 ರಂದು ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಇದನ್ನು ಉಲ್ಲೇಖಿಸಿದ ಜಿಲ್ಲಾಧಿಕಾರಿಗಳು ಜ.6,2025 ರಂದು ರೋಣ ತಹಸೀಲ್ದಾರ ಮತ್ತು ಸಿಪಿಐ ಅವರಿಗೆ ಪತ್ರ ಬರೆದು "ನಿಮ್ಮ ಕಾರ್ಯ ವ್ಯಾಪ್ತಿಯಲ್ಲಿ ಈ ಕಂಪನಿ ಕಾರ್ಯನಿರ್ವಹಿಸುತ್ತಿದ್ದು, ಈ ಕುರಿತು ಪರಿಶೀಲಿಸಿ ಮನವಿದಾರರಿಗೆ ಬೆಳೆ ನಷ್ಟವಾಗಿದ್ದಲ್ಲಿ ನಿಯಮಾನುಸಾರ ಸೂಕ್ತ ಬೆಳೆ ನಷ್ಟ ಪರಿಹಾರ ಒದಗಿಸುವಂತೆ ವಿವಿಡ್ ಕಂಪನಿಯ ಅಧಿಕಾರಿಗಳಿಗೆ ತಿಳಿಸಿ " ಎಂದು ನಿರ್ದೇಶಿಸಿದ್ದಾರೆ.ಆದರೆ, ಈ ಕಂಪನಿಯ ಘಟಕ ಸ್ಥಾಪನೆ ಕಾರ್ಯಗಳೆಲ್ಲ ಮುಗಿಯುತ್ತ ಬಂದಿವೆ. ಒಂದೊಮ್ಮೆ ಕಂಪನಿಯ ಕಚೇರಿ ಬೇರೆಡೆ ಸ್ಥಳಾಂತರವಾದರೆಡೀ ಬಡ ರೈತ ದೂರದ ಬೆಂಗಳೂರು, ಮುಂಬೈ, ಪುಣೆಗೆ ಅಲೆಯಬೇಕಾದ ಸ್ಥಿತಿ ನಿರ್ಮಾಣವಾಗಲಿದೆ.
ಅಧಿಕಾರಿಗಳು ಕಾಲಹರಣ ಮಾಡುವ ಮೂಲಕ ರೈತನಿಗೆ ಅನ್ಯಾಯ ಮಾಡಿದ ವಿದ್ಯುತ್ ಉತ್ಪಾದನಾ ಕಂಪನಿಗೆ ಸಾಥ್ ನೀಡುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.ನನಗೆ ಅನ್ಯಾಯವಾಗಿದೆ ಎಂದು ಹಲವಾರು ಬಾರಿ ಸ್ಥಳೀಯ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗದ ಹಿನ್ನೆಲೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದು, ಈಗ ಜಿಲ್ಲಾಡಳಿತ ತಾಲೂಕಾಡಳಿತಕ್ಕೆ ಪತ್ರ ಬರೆದಿದೆ. ತಾಲೂಕಾಡಳಿತಕ್ಕೆ ಪತ್ರ ತಲುಪಿ ತಿಂಗಳಾದರೂ ಯಾವುದೇ ಪ್ರಗತಿಯಾಗಿಲ್ಲ. ಈ ವಿಷಯದಲ್ಲಿ ನನಗೆ ತೀವ್ರ ಅನ್ಯಾಯವಾಗಿದೆ ಎಂದು ರೈತ ಹುಚ್ಚೀರಯ್ಯ ಬಳಿಗೇರಮಠ ಹೇಳಿದರು.
;Resize=(128,128))
;Resize=(128,128))
;Resize=(128,128))
;Resize=(128,128))