ಹೊನ್ನಾಳಿ ತಾಲೂಕಿನಲ್ಲಿ ಗಾಳಿ-ಮಳೆ, ಅಪಾರ ಹಾನಿ

| Published : Apr 21 2024, 02:16 AM IST

ಹೊನ್ನಾಳಿ ತಾಲೂಕಿನಲ್ಲಿ ಗಾಳಿ-ಮಳೆ, ಅಪಾರ ಹಾನಿ
Share this Article
  • FB
  • TW
  • Linkdin
  • Email

ಸಾರಾಂಶ

ಹೊನ್ನಾಳಿ ತಾಲೂಕಿನ ತರಗನಹಳ್ಳಿ, ಸಿಂಗಟಗೆರೆ ಅರಕೆರೆ ಮಾಸಡಿ ಹಾಗೂ ನರಸಗೊಂಡನಹಳ್ಳಿ ಗ್ರಾಮಗಳಲ್ಲಿ ಕಳೆದ ಶುಕ್ರವಾರ ರಾತ್ರಿ ಸುರಿದ ಮಳೆ ಮತ್ತು ಬಿರುಗಾಳಿಯಿಂದಾಗಿ ಕೋಟ್ಯಂತರ ರು. ತೋಟಗಾರಿಕೆ ಬೆಳೆಹಾನಿ ಸಂಭವಿಸಿದೆ. ಭಾರಿ ಗಾಳಿಯಿಂದಾಗಿ ಸುಮಾರು 45 ವಿದ್ಯುತ್ ಕಂಬಗಳಿಗೆ ಹಾನಿಯಾಗಿ, ಲಕ್ಷಾಂತರ ರು. ನಷ್ಟ ಸಂಭವಿಸಿದೆ.

- ನೆಲಕಚ್ಚಿದ ತೋಟಗಾರಿಕೆ ಬೆಳೆಗಳು । 45 ವಿದ್ಯುತ್ ಕಂಬಗಳಿಗೆ ಧಕ್ಕೆ - - - ಕನ್ನಡಪ್ರಭ ವಾರ್ತೆ, ಹೊನ್ನಾಳಿ

ತಾಲೂಕಿನ ತರಗನಹಳ್ಳಿ, ಸಿಂಗಟಗೆರೆ ಅರಕೆರೆ ಮಾಸಡಿ ಹಾಗೂ ನರಸಗೊಂಡನಹಳ್ಳಿ ಗ್ರಾಮಗಳಲ್ಲಿ ಕಳೆದ ಶುಕ್ರವಾರ ರಾತ್ರಿ ಸುರಿದ ಮಳೆ ಮತ್ತು ಬಿರುಗಾಳಿಯಿಂದಾಗಿ ಕೋಟ್ಯಂತರ ರು. ತೋಟಗಾರಿಕೆ ಬೆಳೆಹಾನಿ ಸಂಭವಿಸಿದೆ. ಭಾರಿ ಗಾಳಿಯಿಂದಾಗಿ ಸುಮಾರು 45 ವಿದ್ಯುತ್ ಕಂಬಗಳಿಗೆ ಹಾನಿಯಾಗಿ, ಲಕ್ಷಾಂತರ ರು. ನಷ್ಟ ಸಂಭವಿಸಿದೆ.

ತರಗನಹಳ್ಳಿ ಗ್ರಾಮದ ಸುತ್ತಮುತ್ತ ಭಾರಿ ಗಾಳಿ ಬೀಸಿದೆ. ಸುಮಾರು 90 ಎಕರೆಯಷ್ಟು ಬೆಳೆಹಾನಿ ಸಂಭವಿಸಿದೆ ಎಂದು ಸಹಾಯಕ ತೋಟಗಾರಿಕೆ ಅಧಿಕಾರಿ ಜಿ. ರೇಖಾ ಪತ್ರಿಕೆಗೆ ತಿಳಿಸಿದ್ದಾರೆ. 85 ಎಕರೆಯಲ್ಲಿ ಬೆಳೆದಿದ್ದ ಬಾಳೆ ಹಾಗೂ 5 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಪಪ್ಪಾಯಿ ಬೆಳೆ ನಾಶವಾಗಿದೆ ಎಂದು ಅವರು ಪತ್ರಿಕೆಗೆ ತಿಳಿಸಿದ್ದಾರೆ.

ನೂರಾರು ಎಕರೆ ಅಡಕೆ ತೋಟದಲ್ಲಿ ಕೂಡ 10 ರಿಂದ 20 ಅಡಕೆ ಮರಗಳು ನೆಲಕ್ಕುರುಳಿವೆ. ಆದರೆ ಅವುಗಳ ನಷ್ಠದ ಪ್ರಮಾಣ ಎನ್‍ಡಿಆರ್‌ಎಫ್ ಮಾರ್ಗದರ್ಶಿ ಸೂಚಿಯ ಪ್ರಕಾರ ಪರಿಗಣಿಸಲು ಬರುವುದಿಲ್ಲ. ಶೇ.33ರಷ್ಟು ನಷ್ಟ ಸಂಭವಿಸಿದರೆ ಮಾತ್ರ ಅದಕ್ಕೆ ಪರಿಹಾರ ಕೋರಿ ಸರ್ಕಾರಕ್ಕೆ ವರದಿ ಕಳಿಸಬಹುದು ಎಂದು ಜಿ.ರೇಖಾ ಹೇಳಿದ್ದಾರೆ.

ಹೊನ್ನಾಳಿ ತಾಲೂಕು ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ರಮೇಶಗೌಡ ಅವರು ನಷ್ಟಕ್ಕೊಳಗಾದ ರೈತರ ತೋಟಗಳಿಗೆ ಭೇಟಿ ನೀಡಿದ್ದು, ಸೂಕ್ತ ಪರಿಹಾರಕ್ಕಾಗಿ ಸರ್ಕಾರವನ್ನು ಆಗ್ರಹಿಸಿದ್ದಾರೆ. ತರಗಹನಳ್ಳಿ ಗ್ರಾಮದ ರೈತ ರುದ್ರನಗೌಡ, ಪಿ.ಎಂ. ಬಸವರಾಜ್, ತಿಪ್ಪೇಶಪ್ಪ, ಎಸ್.ಜಿ. ಬಸವನಗೌಡ, ಟಿ.ರಾಜಪ್ಪ ಅವರಿಗೆ ಸೇರಿದ ಬಾಳೆತೋಟ ನಷ್ಟವಾಗಿದೆ. ಅಡಕೆ ಮರಗಳು ಉರುಳಿ ಬಿದ್ದಿದ್ದು, ಲಕ್ಷಾಂತರ ರು.ಗಳ ನಷ್ಟ ಸಂಭವಿಸಿದೆ ಎಂದು ಹೇಳಿದ್ದಾರೆ.

ತಾಲೂಕಿನ ಕೆಲವು ಗ್ರಾಮಗಳ ಮನೆಗಳ ಹೆಂಚು ಹಾಗೂ ಕೊಟ್ಟಿಗೆಗಳ ಮೇಲಿನ ಶೀಟ್‌ಗಳು ಗಾಳಿಗೆ ಹಾರಿಹೋಗಿವೆ. ಹಲವಾರು ಕಡೆಗಳಲ್ಲಿ ವಿದ್ಯುತ್ ತಂತಿಗಳ ಮೇಲೆ ಮರಗಳು ಉರುಳಿಬಿದ್ದಿವೆ. ಬೆಸ್ಕಾಂ ಎಇಇ ಜಯಪ್ಪ ಸ್ಥಳಗಳಿಗೆ ಭೇಟಿ ನೀಡಿದ್ದು, ದುರಸ್ತಿ ಕಾರ್ಯ ಕೈಗೊಂಡಿದ್ದಾರೆ. ನಷ್ಟದ ಪ್ರಮಾಣವನ್ನು ಅಂದಾಜಿಸಲು ಗ್ರಾಮ ಲೆಕ್ಕಾಧಿಕಾರಿಗಳು, ಕಂದಾಯ ಅಧಿಕಾರಿಗಳು ಹಾಗೂ ತೋಟಗಾರಿಕೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

- - - -20ಎಚ್.ಎಲ್.ಐ3ಎ: ತರಗನಹಳ್ಳಿಯಲ್ಲಿ ರೈತ ಎಸ್.ಜಿ. ಬಸವನಗೌಡ ಅವರ ಪಪ್ಪಾಯಿ ತೋಟದಲ್ಲಿ ಬೆಳೆ ಹಾನಿಯಾಗಿರುವುದು.

-20ಎಚ್.ಎಲ್.ಐ3: ತರಗನಹಳ್ಳಿ ಮಳೆ-ಗಾಳಿಗೆ ಸಿಲುಕಿದ ಫಲಕ್ಕೆ ಬಂದಿದ್ದ ಬಾಳೆ ಗಿಡಗಳು ನೆಲಕ್ಕೆ ಉರುಳಿರುವುದು.

-20ಎಚ್.ಎಲ್.ಐ3ಬಿ: ತರಗನಹಳ್ಳಿ ಸಮೀಪ ವಿದ್ಯುತ್ ಟಿ.ಸಿ. ಕಂಬ ಗಾಳಿಗೆ ಮುರಿದು ವಾಲಿರುವುದು.

-20ಎಚ್.ಎಲ್.ಐ3ಸಿ.: ಮನೆ ಮೇಲಿನ ಹೆಂಚುಗಳು ಬಿರುಗಾಳಿಗೆ ಸಿಲುಕಿ ಹಾರಿಹೋಗಿರುವುದು.