ಸಾರಾಂಶ
ಬೆಳ್ತಂಗಡಿ ತಾಲೂಕಿನಲ್ಲಿ ಸೋಮವಾರ ಸಂಜೆ ವೇಳೆ ಅಲ್ಲಲ್ಲಿ ಭಾರಿ ಮಳೆ ಸುರಿದಿದೆ. ತಾಲೂಕಿನ ತೋಟತ್ತಾಡಿ ಗ್ರಾಮದ ಸರಕಾರಿ ಶಾಲೆಯ ಕಾಂಪೌಂಡ್ ಭಾರಿ ಮಳೆಗೆ ಕುಸಿದು ಬಿದ್ದಿದೆ. ಉರುವಾಲು ಗ್ರಾಮದ ತಾರಿದಡಿ ಎಂಬಲ್ಲಿ ಮನೆಗೆ ಸಿಡಿಲು ಬಡಿದು ಮನೆಗೆ ಹಾನಿ ಸಂಭವಿಸಿದೆ. ಮನೆಯಲ್ಲಿ ಯಾರೂ ಇಲ್ಲದವೇಳೆ ಸಿಡಿಲು ಬಡಿದಿದ್ದು ಮನೆಯವರಿಗೆ ಸಮಸ್ಯೆಯಾಗಿಲ್ಲ.
ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ
ಉಪ್ಪಿನಂಗಡಿ ಪರಿಸರದಲ್ಲಿ ಸೋಮವಾರ ಸಂಜೆ ಸಿಡಿಲಬ್ಬರದೊಂದಿಗೆ ಸುರಿದ ಭಾರಿ ಗಾಳಿ ಮಳೆಗೆ ಬಹಳಷ್ಟು ಹಾನಿ ಸಂಭವಿಸಿದೆ. ಉಪ್ಪಿನಂಗಡಿಯಲ್ಲಿ ಆಲಿಕಲ್ಲು ಸಹಿತ ಮಳೆಯಾಗಿದ್ದು ಭಾರೀ ಸಿಡಿಲಾರ್ಭಟಕ್ಕೆ ಸಿಲುಕಿ ವಿದ್ಯುತ್ ಸಲಕರಣೆಗಳು ಹಾನಿಗೀಡಾಗಿವೆ. ಇದರಿಂದಾಗಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವುಂಟಾಯಿತು. ಗಾಳಿಗೆ ಸಿಲುಕಿ ಉಪ್ಪಿನಂಗಡಿ ಪರಿಸರದಲಿ ೫ ವಿದ್ಯುತ್ ಕಂಬಗಳು ಹಾನಿಗೀಡಾದವು.ಪರಿಸರದಲ್ಲಿ ಮಧ್ಯಾಹ್ನದ ವರೆಗೆ ಸುಡುವ ಬಿಸಿಲ ವಾತಾವರಣವಿದ್ದು, ಸಂಜೆ ಆಗುತ್ತಿದ್ದಂತೆ ಆಕಾಶದಲ್ಲಿ ಕರಿಮೋಡ ಆವರಿಸಿ ಕತ್ತಲಾದಂತೆ ಭಾಸವಾಗಿ ಬಿರುಸಿನ ಮಳೆ ಸುರಿಯಲಾರಂಭಿಸಿತು. ಗಾಳಿ ಮಳೆಗೆ ಸಿಲುಕಿ ಛಾಚಣಿಗೆ ಅಳವಡಿಸಲಾದ ಶೀಟ್ ಗಳು, ಜಾಹೀರಾತು ಫಲಕಗಳು ಎಲ್ಲೆಂದರಲ್ಲಿ ಹಾರಿ ಧರೆಗುರುಳುತ್ತಿದ್ದ ದೃಶ್ಯ ಉಪ್ಪಿನಂಗಡಿಯಲ್ಲಿ ಕಂಡುಬಂತು. ಗಾಳಿ ಮಳೆಗೆ ಸಿಲುಕಿ ಕೃಷಿ ಬೆಳೆಗಳೂ ಹಾನಿಗೀಡಾಗಿರುತ್ತದೆ.
ಬೆಳ್ತಂಗಡಿ: ಭಾರಿ ಮಳೆ, ಸಿಡಿಲು ಬಡಿದು ಮನೆಗೆ ಹಾನಿ:ಬೆಳ್ತಂಗಡಿ ತಾಲೂಕಿನಲ್ಲಿ ಸೋಮವಾರ ಸಂಜೆ ವೇಳೆ ಅಲ್ಲಲ್ಲಿ ಭಾರಿ ಮಳೆ ಸುರಿದಿದೆ.ತಾಲೂಕಿನ ತೋಟತ್ತಾಡಿ ಗ್ರಾಮದ ಸರಕಾರಿ ಶಾಲೆಯ ಕಾಂಪೌಂಡ್ ಭಾರಿ ಮಳೆಗೆ ಕುಸಿದು ಬಿದ್ದಿದೆ. ಉರುವಾಲು ಗ್ರಾಮದ ತಾರಿದಡಿ ಎಂಬಲ್ಲಿ ಮನೆಗೆ ಸಿಡಿಲು ಬಡಿದು ಮನೆಗೆ ಹಾನಿ ಸಂಭವಿಸಿದೆ. ಮನೆಯಲ್ಲಿ ಯಾರೂ ಇಲ್ಲದವೇಳೆ ಸಿಡಿಲು ಬಡಿದಿದ್ದು ಮನೆಯವರಿಗೆ ಸಮಸ್ಯೆಯಾಗಿಲ್ಲ. ಮನೆಯ ವಿದ್ಯುತ್ ಉಪಕರಣಗಳಿಗೆ ಹಾಗೂ ಮನೆಯ ವಯರಿಂಗ್ ಗೆ ಹಾನಿ ಸಂಭವಿಸಿದೆ.