ಸಾರಾಂಶ
ಜಿಲ್ಲೆಯಾದ್ಯಂತ ಗುರುವಾರ ಭಾರೀ ಮಳೆಯಾಗಿದೆ. ಬಿಟ್ಟು ಬಿಟ್ಟು ಮಳೆಯಾಗುತ್ತಿರುವುದರಿಂದ ಪ್ರವಾಹದ ಸ್ಥಿತಿ ನಿರ್ಮಾಣವಾಗಿಲ್ಲ.
ಕನ್ನಡಪ್ರಭ ವಾರ್ತೆ ಉಡುಪಿ
ಜಿಲ್ಲೆಯಾದ್ಯಂತ ಗುರುವಾರ ಗಾಳಿಮಳೆಯಾಗಿದೆ. ನಾಲ್ಕೈದು ಬಾರಿ ಜಡಿ ಮಳೆಯಾಗಿದ್ದು, ಗಾಳಿಯಿಂದಾಗಿ ಮಳೆ ಭೀಕರವಾಗಿತ್ತು. ಬಿಟ್ಟುಬಿಟ್ಟು ಮಳೆಯಾಗುತ್ತಿದ್ದುದರಿಂದ ಪ್ರವಾಹದ ಸ್ಥಿತಿ ನಿರ್ಮಾಣವಾಗಿಲ್ಲ.ಬುಧವಾರ ಹಗಲು ಮತ್ತು ರಾತ್ರಿ ಮುಖ್ಯವಾಗಿ ಕುಂದಾಪುರ ಭಾಗದಲ್ಲಿ ಜೋರಾದ ಗಾಳಿಮಳೆಯಾಗಿದೆ, ಪರಿಣಾಮ ಸುಮಾರು 48 ಮನೆಗಳಿಗೆ ಹಾನಿಯಾಗಿದೆ. ಜಿಲ್ಲೆಯಲ್ಲಿ ಒಟ್ಟು 58 ಮನೆಗಳಿಗೆ ಹಾನಿಯಾಗಿದ್ದು 27.15 ಲಕ್ಷ ರು. ನಷ್ಟ ಉಂಟಾಗಿದೆ. 7 ಕುಟುಂಬಗಳ ತೋಟಗಾರಿಕಾ ಬಳೆಗಳಿಗೆ 1.21 ಲಕ್ಷ ರು. ಮತ್ತು 4 ಜಾನುವಾರು ಕೊಟ್ಟಿಗೆಗಳಿಗೆ 42,500 ರು.ಗಳಷ್ಟು ನಷ್ಟವಾಗಿದೆ.
ಕುಂದಾಪುರ ತಾಲೂಕಿನ ಸಿದ್ದಾಪುರ ಗ್ರಾಮದ ಮಣ್ಣುಂಜೆ ಗಣಪಯ್ಯ ಉಡುಪ ಅವರ ಮನೆ ಸಂಪೂರ್ಣ ನಾಶವಾಗಿದ್ದು 10 ಲಕ್ಷ ರು., ಹೆಮ್ಮಾಡಿ ಗ್ರಾಮದ ಸೀತಾ ದೇವಾಡಿಗ ಅವರ ಮನೆ ಮೇಲೆ ಮರ ಬಿದ್ದು 1.50 ಲಕ್ಷ ರು. ನಷ್ಟವಾಗಿದೆ. ಶಂಕರನಾರಾಯಣ ಗ್ರಾಮದ ಶೇಶು ಕುಲಾಲ ಅವರ ತೋಟಗಾರಿಕಾ ಬೆಳೆಗೆ ಸಂಪೂರ್ಣ ಹಾನಿಯಾಗಿದ್ದು 1 ಲಕ್ಷ ರು.ಗಳ ಹಾನಿಯಾಗಿದೆ.ಕರಾವಳಿಯಲ್ಲಿ ಜು.29ರವರೆಗೆ ಭಾರೀ ಮಳೆಯಾಗಲಿದೆ, ಇಂದು ಗಾಳಿಯ ಜೊತೆಗೆ 45 - 60 ಕಿ.ಮೀ. ವೇಗದಲ್ಲಿ ಗಾಳಿಯೂ ಬೀಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಗುರುವಾರ ಮುಂಜಾನವೆರೆಗೆ 24 ಗಂಟೆಗಳ ಕಾಲ ಜಿಲ್ಲೆಯಲ್ಲಿ ಸರಾಸರಿ 76.80 ಮಿ.ಮೀ. ಮಳೆಯಾಗಿದೆ. ತಾಲೂಕುವಾರು ಕಾರ್ಕಳ 61.70, ಕುಂದಾಪುರ 101.20, ಉಡುಪಿ 51.10 ಬೈಂದೂರು 92.50, ಬ್ರಹ್ಮಾವರ 68, ಕಾಪು 42.50, ಹೆಬ್ರಿ 74.80 ಮಿ.ಮೀ. ಮಳೆ ಆಗಿರುತ್ತದೆ.