ಸಾರಾಂಶ
ಬಂದೂಕಿನಿಂದ ಆಕಸ್ಮಿಕವಾಗಿ ಸಿಡಿದ ಗುಂಡು ತಗುಲಿ ವೈನ್ ಶಾಪ್ ಮಾಲೀಕ ಮೃತಪಟ್ಟ ಘಟನೆ ತಾಲೂಕಿನ ಚೇರಂಬಾಣೆಯಲ್ಲಿ ಬುಧವಾರ ತಡರಾತ್ರಿ ನಡೆದಿದೆ. ಚೇರಂಬಾಣೆಯ ಪೊನ್ನಚೆಟ್ಟಿರ ಮಿತ್ರ ಚಂಗಪ್ಪ (49) ಮೃತರು.
ಕನ್ನಡಪ್ರಭ ವಾರ್ತೆ ಮಡಿಕೇರಿ
ತನ್ನದೇ ಬಂದೂಕಿನಿಂದ ಆಕಸ್ಮಿಕವಾಗಿ ಸಿಡಿದ ಗುಂಡು ತಗುಲಿ ವೈನ್ ಶಾಪ್ ಮಾಲೀಕ ಮೃತಪಟ್ಟ ಘಟನೆ ತಾಲೂಕಿನ ಚೇರಂಬಾಣೆಯಲ್ಲಿ ಬುಧವಾರ ತಡರಾತ್ರಿ ನಡೆದಿದೆ. ಚೇರಂಬಾಣೆಯ ಪೊನ್ನಚೆಟ್ಟಿರ ಮಿತ್ರ ಚಂಗಪ್ಪ (49) ಮೃತರು.ತಮ್ಮದೇ ಒಡೆತನದ ವೈನ್ ಶಾಪ್ ಎದುರು ರಾತ್ರಿ 12 ಗಂಟೆ ವೇಳೆಗೆ ದುರ್ಘಟನೆ ಸಂಭವಿಸಿದೆ. ಅವರು ದಿನದ ವ್ಯವಹಾರ ಮುಗಿಸಿ ವೈನ್ ಶಾಪ್ ಮುಚ್ಚಿ ಸ್ಕೂಟಿ ಬಳಿ ತೆರಳಿದಾಗ ಆಕಸ್ಮಿಕವಾಗಿ ಒಂಟಿ ನಳಿಕೆ ಬಂದೂಕು ಕೆಳಗೆ ಬಿದ್ದು, ಈ ವೇಳೆ ಸಿಡಿದ ಗುಂಡು ತಗುಲಿ ಚಂಗಪ್ಪ ಮೃತಪಟ್ಟರು. ಘಟನೆಯ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮಡಿಕೇರಿ ಗ್ರಾಮಾಂತರ ವ್ಯಾಪ್ತಿಯ ಭಾಗಮಂಡಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಬಕಾರ ಇಲಾಖೆ ದಾಳಿ:ಸೋಮವಾರಪೇಟೆ ತಾಲೂಕಿನ ವಿವಿಧೆಡೆಗಳಲ್ಲಿ ಅಬಕಾರಿ ಇಲಾಖೆ ವತಿಯಿಂದ ದಾಳಿ ನಡೆಸಿ, ಕಳ್ಳಭಟ್ಟಿ ಸಾರಾಯಿ ಮತ್ತು ಪುಳಿಗಂಜಿ ವಶಪಡಿಸಿ ಮೊಕದ್ದಮೆ ದಾಖಲಿಸಲಾಗಿದೆ.
ತಾಲೂಕಿನ ದೊಡ್ಡತೋಳೂರು ಗ್ರಾಮದ ಆನಂದ ಎಂಬವರ ಮನೆಯಲ್ಲಿ ೯ ಲೀಟರ್ ಪುಳಿಗಂಜಿ, ೨೦೦ ಮಿ.ಲೀ ಕಳ್ಳಭಟ್ಟಿ ಸಾರಾಯಿ, ವಿರೂಪಾಕ್ಷ ಎಂಬವರ ಮನೆಯಲ್ಲಿ ೩.೫ ಲೀ ಕಳ್ಳಭಟ್ಟಿ ಸಾರಾಯಿ, ೨೦ ಲೀ. ಬೆಲ್ಲದ ಪುಳಗಂಜಿ ಮತ್ತು ಡಿಸ್ಟಿಲರಿ ಪರಿಕರಗಳನ್ನು ಪತ್ತೆಮಾಡಿ ವಶಕ್ಕೆ ತೆಗೆದುಕೊಳ್ಳಲಾಯಿತು. ಮಾದಪ್ಪ ಎಂಬವರ ಮನೆಯಲ್ಲಿ ೩೦ ಲೀ ಪುಳಿಗಂಜಿ ಮತ್ತು ಕಳ್ಳಬಟ್ಟಿ ತಯಾರಿಸಲು ಬಳಸುತ್ತಿದ್ದ ಇತರೆ ಪರಿಕರಗಳನ್ನು ವಶಕ್ಕೆ ಪಡೆದು ೩ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಅಬಕಾರಿ ನಿರೀಕ್ಷಕ ಬಿ.ಎಸ್.ಲೋಕೇಶ್ ತಿಳಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಉಪನಿರೀಕ್ಷಕರಾದ ಬಿ.ಎಸ್.ಬಾಲಕೃಷ್ಣ, ಕೆ.ವಿ.ಸುಮತಿ, ಮುಖ್ಯಪೇದೆ ವಿರೇಶ್, ಸುರೇಶ್, ಸಿಬ್ಬಂದಿಗಳಾದ ಈರಣ್ಣ, ಕರಿಯಪ್ಪ, ಮಹಾಂತೇಶ್, ವಾಹನ ಚಾಲಕಿ ದಿವ್ಯ ಭಾಗವಹಿಸಿದ್ದರು.