ಕಳೆದ ಬಾರಿಗಿಂತಲೂ ಹೆಚ್ಚಿನ ಅಂತರದಲ್ಲಿ ಗೆಲ್ಲುವೆ: ಸಂಸದ ರಾಘವೇಂದ್ರ

| Published : May 09 2024, 01:02 AM IST

ಸಾರಾಂಶ

1952ರಿಂದ 2024ರವರೆಗೆ ಒಟ್ಟು 18 ಬಾರಿ ಲೋಕಸಭೆ ಚುನಾವಣೆಗಳು ನಡೆದಿದ್ದು 1952ರಲ್ಲಿ ಶೇ. 75.14 ರಷ್ಟು ಮತದಾನವಾಗಿದ್ದನ್ನು ಬಿಟ್ಟರೆ 2024ರ ಚುನಾವಣೆಯಲ್ಲಿ ಶೇ. 78.31ರಷ್ಟು ಮತದಾನವಾಗಿರುವುದು ದಾಖಲೆಯಾಗಿದೆ. ಶಾಂತಿಯುತವಾಗಿ ಮತದಾನವಾಗಲು ಕಾರ್ಯಕರ್ತರು ಸಂಘಟನಾತ್ಮಕವಾಗಿ ಹಾಗೂ ಕುಟುಂಬದ ರೀತಿಯಲ್ಲಿ ಚುನಾವಣೆಯಲ್ಲಿ ಪ್ರಚಾರ ಮಾಡಿದ್ದಾರೆ. ಅದೇ ರೀತಿ ಮೈತ್ರಿಕೂಟದ ಜೆಡಿಎಸ್ ಪಕ್ಷದ ಶ್ರಮ, ಕೆಲವು ಎನ್.ಜಿ.ಒ.ಗಳು ಸಹ ಕೈಜೋಡಿಸಿವೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಮತಗಳ ಅಂತರದಿಂದ ಜಯಗಳಿಸುವ ವಿಶ್ವಾಸವಿದೆ ಎಂದು ಬಿಜೆಪಿ ಅಭ್ಯರ್ಥಿ, ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ವಿಕಸಿತ ಭಾರತಕ್ಕೋಸ್ಕರ ಮತದಾನ ಮಾಡಿದ ಮತದಾರರಿಗೆ ಧನ್ಯವಾದ ಸಲ್ಲಿಸುತ್ತೇನೆ. ಚುನಾವಣೆ ಯಶಸ್ವಿಯಾಗಿ ನಡೆಯಲು ಕಾರಣಕರ್ತರಾದ ಪಕ್ಷದ ಜಿಲ್ಲಾಧ್ಯಕ್ಷ ಹಾಗೂ ಹಿರಿಯ ಮುಖಂಡರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಒಂದು ದಶಕದಿಂದ ಇಡೀ ವಿಶ್ವವೇ ಬೆರಗಾಗುವಂತೆ ದೇಶಕ್ಕೆ ಶಕ್ತಿಯುತ ಹಾಗೂ ಅಭಿವೃದ್ಧಿ ಮಾಡಿ ವಿಶ್ವಕೇಂದ್ರವನ್ನಾಗಿ ಮಾಡಲು ಮತ್ತೊಮ್ಮೆ ಮೋದಿ ಸರ್ಕಾರಕ್ಕೆ ಅವಕಾಶ ನೀಡಲಿದ್ದಾರೆ ಎಂದರು.

1952ರಿಂದ 2024ರವರೆಗೆ ಒಟ್ಟು 18 ಬಾರಿ ಲೋಕಸಭೆ ಚುನಾವಣೆಗಳು ನಡೆದಿದ್ದು 1952ರಲ್ಲಿ ಶೇ. 75.14 ರಷ್ಟು ಮತದಾನವಾಗಿದ್ದನ್ನು ಬಿಟ್ಟರೆ 2024ರ ಚುನಾವಣೆಯಲ್ಲಿ ಶೇ. 78.31ರಷ್ಟು ಮತದಾನವಾಗಿರುವುದು ದಾಖಲೆಯಾಗಿದೆ. ಶಾಂತಿಯುತವಾಗಿ ಮತದಾನವಾಗಲು ಕಾರ್ಯಕರ್ತರು ಸಂಘಟನಾತ್ಮಕವಾಗಿ ಹಾಗೂ ಕುಟುಂಬದ ರೀತಿಯಲ್ಲಿ ಚುನಾವಣೆಯಲ್ಲಿ ಪ್ರಚಾರ ಮಾಡಿದ್ದಾರೆ. ಅದೇ ರೀತಿ ಮೈತ್ರಿಕೂಟದ ಜೆಡಿಎಸ್ ಪಕ್ಷದ ಶ್ರಮ, ಕೆಲವು ಎನ್.ಜಿ.ಒ.ಗಳು ಸಹ ಕೈಜೋಡಿಸಿವೆ. ಹೊರ ದೇಶ, ವಿವಿಧ ರಾಜ್ಯಗಳು ಹಾಗೂ ರಾಜ್ಯದ ವಿವಿಧೆಡೆ ನೆಲೆಸಿರುವ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಮತದಾರರು ಸಹ ಮತದಾನ ಮಾಡಿರುವುದರಿಂದ ಶೇಕಡವಾರು ಹೆಚ್ಚಳಕ್ಕೆ ಕಾರಣವಾಗಿದೆ ಎಂದು ತಿಳಿಸಿದರು.

ಚುನಾವಣಾ ಪ್ರಚಾರಕ್ಕಾಗಿ ಬಿಜೆಪಿ ವಿವಿಧ ಮೋರ್ಚಾಗಳು, ಮಹಾ ಶಕ್ತಿ ಕೇಂದ್ರ, ರಾಷ್ಟ್ರೀಯ ಹಾಗೂ ರಾಜ್ಯ ನಾಯಕರ ಸಭೆಗಳನ್ನು ಬೈಂದೂರು ವಿಧಾನಸಭಾ ಕ್ಷೇತ್ರ ಸೇರಿದಂತೆ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂ ಸಭೆಗಳು ನಡೆದಿವೆ. ಪರಿವಾರ ಶಕ್ತಿ ತುಂಬಿದೆ. ಎಲ್ಲಿಯೂ ವ್ಯತ್ಯಾಸವಾಗದಂತೆ ನೋಡಿಕೊಳ್ಳಲಾಗಿದೆ. ಕೇಂದ್ರ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಹಾಗೂ ಮೋದಿಜಿಯವರ ಗ್ಯಾರಂಟಿ, ಹಿಂದುತ್ವ, ದೇಶದ ರಕ್ಷಣೆ ನೋಡಿ ಮತದಾರರು ಪಕ್ಷವನ್ನು ಬೆಂಬಲಿಸಿದ್ದಾರೆ ಎಂದರು.

ಪ್ರಧಾನಿ ಮೋದಿಯವರಿಂದ ಪ್ರಾರಂಭವಾದ ಚುನಾವಣಾ ಪ್ರಚಾರದಲ್ಲಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ, ಅಣ್ಣಾಮಲೈ, ಎಚ್.ಡಿ.ಕುಮಾರಸ್ವಾಮಿ, ಬಿ.ಎಸ್. ಯಡಿಯೂರಪ್ಪ, ಬಿ.ಎಲ್. ಸಂತೋಷ್, ಬಿ.ವೈ. ವಿಜಯೇಂದ್ರ, ನಟಿ ತಾರಾ, ಶೃತಿ, ಲೋಕಸಭಾ ಉಸ್ತುವಾರಿಯಾಗಿ ರಘುಪತಿಭಟ್, ರಾಷ್ಟ್ರೀಯ ಕಾರ್ಯದರ್ಶಿ ರಾಧಮೋಹನ್‍ದಾಸ್ ಅಗರ್‍ವಾಲ್, ಮೈಸೂರು ಕ್ಷೇತ್ರದ ಶಾಸಕರು ಮತ್ತು ಚಾಮರಾಜ್ ನಗರದ ಅಭ್ಯರ್ಥಿ ಬಾಲರಾಜ್ ಸೇರಿದಂತೆ ಅನೇಕ ಗಣ್ಯರು ಆಗಮಿಸಿ ಪ್ರಚಾರ ಮಾಡಿದ್ದು, ಎಲ್ಲರಿಗೂ ಧನ್ಯವಾದ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಮಾಜಿ ಸಚಿವ ಕುಮಾರ್ ಬಂಗಾರಪ್ಪ, ಶಾಸಕರಾದ ಆರಗ ಜ್ಞಾನೇಂದ್ರ, ಎಸ್.ಎನ್. ಚನ್ನಬಸಪ್ಪ, ವಿಧಾನ ಪರಿಷತ್‌ ಸದಸ್ಯರಾದ ಎಸ್. ರುದ್ರೇಗೌಡ, ಡಿ.ಎಸ್. ಅರುಣ್, ಮಾಜಿ ಶಾಸಕ ಕೆ.ಬಿ.ಅಶೋಕ್ ನಾಯ್ಕ್, ವಿಧಾನ ಪರಿಷತ್‌ ಮಾಜಿ ಸದಸ್ಯ ಎಂ.ಬಿ.ಭಾನುಪ್ರಕಾಶ್, ಪ್ರಮುಖರಾದ ಎಸ್. ಜ್ಞಾನೇಶ್ವರ್, ಎಸ್. ದತ್ತಾತ್ರಿ, ರಾಜಶೇಖರ್, ಸಿ.ಎಚ್. ಮಾಲತೇಶ್, ಎನ್.ಜೆ. ರಾಜಶೇಖರ್, ಶಿವರಾಜ್ ಇನ್ನಿತರರು ಇದ್ದರು.

3 ಲಕ್ಷ ಮತ ಅಂತರದಲ್ಲಿ ರಾಘವೇಂದ್ರ ಗೆಲುವು: ಪ್ರಸನ್ನಕುಮಾರ್‌

ಶಿವಮೊಗ್ಗ: ಲೋಕಸಭಾ ಚುನಾವಣೆ ಅತ್ಯಂತ ಯಶಸ್ವಿಯಾಗಿ ನಡೆದಿದ್ದು, ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಮೂರು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ, ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಹೇಳಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಚುನಾವಣೆಯಲ್ಲಿ ಮತದಾರರು ಉತ್ಸುಕತೆಯಿಂದ ಮತದಾನದಲ್ಲಿ ಭಾಗವಹಿಸಿದ್ದಾರೆ. ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಮತದಾನವಾಗಿರುವುದು ಬಿ.ವೈ.ರಾಘವೇಂದ್ರ ಗೆಲುವಿನ ವಿಶ್ವಾಸ ಹೆಚ್ಚಿಸಿದೆ. ರಾಷ್ಟ್ರ ಭಕ್ತ ಬಳಗದ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ ಸ್ಪರ್ಧೆಗೆ ಮಾತ್ರ ಸೀಮಿತರಾಗಿದ್ದಾರೆ ಎಂದರು.

ರಾಘವೇಂದ್ರ ಪರವಾಗಿ ಜೆಡಿಎಸ್ ಕಾರ್ಯಕರ್ತರು ಹಾಗೂ ಮುಖಂಡರು ಸಂಘಟಿತರಾಗಿ ಪ್ರಚಾರ ನಡೆಸಿ ಮನೆ ಮನೆಗೆ ತೆರಳಿ ಮತಯಾಚಿಸಿದ್ದರು. ಎರಡೂ ಪಕ್ಷದ ಒಗ್ಗಟ್ಟಿನ ಪ್ರಚಾರದಿಂದಾಗಿ ರಾಘವೇಂದ್ರರ ಗೆಲುವಿಗೆ ಸಹಕಾರಿಯಾಗಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಶಿವಮೊಗ್ಗ ನಗರ ಜೆಡಿಎಸ್ ಅಧ್ಯಕ್ಷ ದೀಪಕ್ ಸಿಂಗ್, ಮುಖಂಡರಾದ ತ್ಯಾಗರಾಜ್, ಸಿದ್ದಪ್ಪ, ಬೊಮ್ಮನಕಟ್ಟೆ ಮಂಜುನಾಥ್, ಮಾಧವಚಾರ್, ಎಚ್.ಎಂ. ಸಂಗಯ್ಯ, ವೆಂಕಟೇಶ್ ಮತ್ತಿತರರಿದ್ದರು.