ಒಂದು ಲಕ್ಷ ಮತಗಳ ಅಂತರದಿಂದ ಗೆಲ್ಲುವೆ: ಕೆ.ಎಸ್‌.ಈಶ್ವರಪ್ಪ

| Published : Mar 27 2024, 01:03 AM IST / Updated: Mar 27 2024, 01:05 PM IST

ಒಂದು ಲಕ್ಷ ಮತಗಳ ಅಂತರದಿಂದ ಗೆಲ್ಲುವೆ: ಕೆ.ಎಸ್‌.ಈಶ್ವರಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಲೋಕಸಭಾ ಕ್ಷೇತ್ರದ ಎಲ್ಲಾ ವಿಧಾನಸಭೆ ಕ್ಷೇತ್ರಕ್ಕೂ ಭೇಟಿ ನೀಡಿದ್ದೇನೆ. ಈಶ್ವರಪ್ಪರಿಗೆ ಅನ್ಯಾಯ ಆಗಿದೆ. ಯಡಿಯೂರಪ್ಪ ಅನ್ಯಾಯ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಲೋಕಸಭಾ ಕ್ಷೇತ್ರದ ಎಲ್ಲಾ ವಿಧಾನಸಭೆ ಕ್ಷೇತ್ರಕ್ಕೂ ಭೇಟಿ ನೀಡಿದ್ದೇನೆ. ಈಶ್ವರಪ್ಪರಿಗೆ ಅನ್ಯಾಯ ಆಗಿದೆ. ಯಡಿಯೂರಪ್ಪ ಅನ್ಯಾಯ ಮಾಡಿದ್ದಾರೆ. 

ಅನ್ಯಾಯಕ್ಕೆ ಉತ್ತರ ಕೊಡುತ್ತೇವೆ ಎಂದು ಕಾರ್ಯಕರ್ತರು ಹೇಳುತ್ತಿದ್ದು, ಎರಡೂ ರಾಷ್ಟ್ರೀಯ ಪಕ್ಷಗಳ ಅಧಿಕೃತ ಅಭ್ಯರ್ಥಿಗಳ ಎದುರು ಕನಿಷ್ಠ ಒಂದು ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತೇನೆ ಎಂದು ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ತಿಳಿಸಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ದೊಡ್ಡ ಅಂತರದಿಂದ ಗೆದ್ದು ಯಾರು ಡಮ್ಮಿ ಅಭ್ಯರ್ಥಿ ಎಂದು ತೋರಿಸುತ್ತೇನೆ ಎಂದು ಸವಾಲು ಹಾಕಿದರು. ಹೊಂದಾಣಿಕೆ ರಾಜಕಾರಣ ನನ್ನ ಜೀವನದಲ್ಲಿ ಇಲ್ಲ. 

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶಿಕಾರಿಪುರ ಮತ್ತು ವರುಣಾದಲ್ಲಿ ಹೊಂದಾಣಿಕೆ ರಾಜಕೀಯ ಮಾಡಿಕೊಂಡು ತಿಣುಕಾಡಿ ಗೆದ್ದವರು ಯಾರು ಎಂದು ಎಲ್ಲರಿಗೂ ಗೊತ್ತಿದೆ. 

ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಡಮ್ಮಿ ಕ್ಯಾಂಡಿಡೇಟ್ ಹಾಕಿಸಿಕೊಂಡಿದ್ದಾರೆ ಎಂದು ಹೆಸರು ಹೇಳದೆ ಯಡಿಯೂರಪ್ಪ ವಿರುದ್ಧ ವ್ಯಂಗ್ಯವಾಡಿದರು.

ಹಿಂದುತ್ವದ ಪರ ಧ್ವನಿ ಎತ್ತುವವರ ತುಳಿಯುವಿಕೆ: ಗಂಡಸ್ತನ ಇದ್ದರೆ ತಮ್ಮ ಪುತ್ರನಿಗೆ ಟಿಕೆಟ್‌ ತರಬೇಕಿತ್ತು ಎಂದು ತಮ್ಮ ವಿರುದ್ಧ ಮಧು ಬಂಗಾರಪ್ಪ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಈಶ್ವರಪ್ಪ ಗಂಡಸ್ತನ ಇರುವ ವ್ಯಕ್ತಿಯ ಜೊತೆಗೆ ನೀವು ಹೊಂದಾಣಿಕೆ ಮಾಡಿಕೊಂಡರೆ ನಾನೇನಪ್ಪ ಮಾಡಲಿ ಎಂದು ಕುಟುಕಿದರು. 

ಹಿಂದುತ್ವದ ಪರ ಧ್ವನಿ ಎತ್ತುವವರನ್ನು ತುಳಿಯುತ್ತಿದ್ದಾರೆ. ನಾನು ಚುನಾವಣೆಗೆ ಸ್ಪರ್ಧೆ ಮಾಡ್ತೀನಿ ಅಂದ ಮೇಲೆ ಸ್ಪರ್ಧೆ ಮಾಡಬೇಡಿ ಅಂತಾ ದೆಹಲಿಯಿಂದ ಪೋನ್ ಬರುತ್ತಿದೆ. 

ಯಾರೇ ಕರೆ ಮಾಡಿದರೂ ನಾನು ಸ್ಪರ್ಧೆ ಮಾಡೇ ಮಾಡುತ್ತೇನೆ. ಬಿಜೆಪಿ, ಕಾಂಗ್ರೆಸ್‌ ಅಭ್ಯರ್ಥಿಗಳಿಗಿಂತ 1 ಲಕ್ಷ ಮತಗಳನ್ನು ಹೆಚ್ಚಿಗೆ ಪಡೆಯುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಶಿವರಾಜ್‌ ತಂಗಡಗಿ ಅಯೋಗ್ಯ: ಸಚಿವ ಶಿವರಾಜ್ ತಂಗಡಗಿ ಅಯೋಗ್ಯ. ಮೋದಿ ವಿಶ್ವ ನಾಯಕ. ಇಡೀ ದೇಶದ ಜನ ಮೋದಿ ಮೋದಿ ಅಂತಿದ್ದಾರೆ. ಇಂತಹ ನಾಯಕನ ವಿರುದ್ಧ ತಂಗಡಗಿ ಹಗುರವಾಗಿ ಮಾತನಾಡಿದ್ದಾರೆ. 

ಇವರನ್ನು ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವ ಸ್ಥಾನದಿಂದ ಕಿತ್ತು ಬಿಸಾಕಬೇಕು. ಇಲ್ಲದಿದ್ದರೆ ಸಿದ್ದರಾಮಯ್ಯ ಸರ್ಕಾರವನ್ನು ಜನರೆ ಕಿತ್ತು ಬಿಸಾಕುತ್ತಾರೆ ಎಂದು ಈಶ್ವರಪ್ಪ ಕಿಡಿಕಾರಿದರು.

ಈಶ್ವರಪ್ಪ ಜೀವನದಲ್ಲಿಯೇ ಪಕ್ಷಾಂತರ ಮಾಡಿಲ್ಲ. ಅಧಿಕಾರ ಸಿಗಲಿಲ್ಲ ಎಂದು ಕೆಜೆಪಿ ಕಟ್ಟಿ ಬಿಜೆಪಿಗೆ ಯಡಿಯೂರಪ್ಪ ಚಾಕು ಹಾಕಲಿಲ್ಲವಾ? ಕೆಜೆಪಿ ಕಟ್ಟಿ ಕೇವಲ 6 ಸೀಟು ಪಡೆದಿದ್ದರು. ನಾನು ಅಂದು ಬಿಜೆಪಿ ರಾಜ್ಯಾಧ್ಯಕ್ಷನಾಗಿದ್ದೆ. ಇವರ ಎದುರು 46 ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲ್ಲಿಸಿಕೊಂಡು ಬಂದಿದ್ದೆ.

ಕೆ.ಎಸ್‌.ಈಶ್ವರಪ್ಪ, ಮಾಜಿ ಸಚಿವನಾನು ಹೋದಲ್ಲೆಲ್ಲ ರಾಘವೇಂದ್ರಗೆ ವಿರೋಧ

ನಗರದ ಶುಭಮಂಗಳದಲ್ಲಿ ರಾಷ್ಟ್ರಭಕ್ತರ ಬಳಗದ ವತಿಯಿಂದ ಮಂಗಳವಾರ ಆಯೋಜಿಸಿದ್ದ ನಗರ ಮತ್ತು ಗ್ರಾಮಾಂತರ ಮಟ್ಟದ ಬೂತ್ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿ ಈಗಾಗಲೇ ಜಿಲ್ಲಾ ಪ್ರವಾಸ ಮಾಡಿರುವೆ, ಬೈಂದೂರಿಗೆ ರಾಜ್ಯಾಧ್ಯಕ್ಷನಾದಾಗ ಹೋಗಿದ್ದೆ, ಈಗಾಗಲೇ ರಾಘವೇಂದ್ರನ ಬಗ್ಗೆ ಅಲ್ಲಿ ಸಿಟ್ಟಿದೆ. ಹಿಂದುತ್ವಕ್ಕೆ ದ್ರೋಹ ಮಾಡಿದ್ದಾರೆ ಎಂದು ಕಾರ್ಯಕರ್ತರು ತಿಳಿಸಿದ್ದಾರೆ. 

ಹೋದ ಕಡೆಯೆಲ್ಲ ಅವರಿಗೆ ವಿರೋಧವಾಗುತ್ತಿದೆ ಎಂದು ಮಾಜಿ ಸಚಿವ ಈಶ್ವರಪ್ಪ ತಿಳಿಸಿದರು. ಈಗ ತಾನೇ ನನ್ನ ಮಗನಿಗೆ ಮೊಬೈಲ್ ಕರೆ ಬಂದಿದೆ. 

ಯಾರ ಕರೆ ಬಂದರು, ಮನೆಗೆ ಬಂದರೂ ಪಕ್ಷೇತರವಾಗಿ ನಾನು ಲೋಕಸಭಾ ಚುನಾವಣೆಯಲ್ಲಿ ನಿಲ್ಲುವುದು ಖಚಿತ. ಗೆಲ್ಲುವುದು ನಿಶ್ಚಿತ. ಕೆಲವರು ಈಶ್ವರಪ್ಪ ಸೋಲುತ್ತಾರೆ ಎಂದು ಹೇಳುತ್ತಿದ್ದಾರೆ. 

ನಾನು ಸೋಲಿತ್ತೇನೆ ಎಂದ ಮೇಲೆ ನಮ್ಮ ಕಾರ್ಯಕರ್ತರನ್ನು ಬೆದರಿಸುವ ಕೆಲಸ ಏಕೆ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.ಸಭೆಯಲ್ಲಿ ಪ್ರಮುಖರಾದ ಕೆ.ಇ.ಕಾಂತೇಶ್, ಆರತಿ ಅ.ಮಾ. ಪ್ರಕಾಶ್, ಶಂಕರ್, ಕೇಬಲ್ ಬಾಬು, ಭೂಪಾಲ್, ಮಂಜುನಾಥ್, ಈ. ವಿಶ್ವಾಸ್, ಲಕ್ಷ್ಮೀ ಶಂಕರನಾಯಕ್, ಗಂಗಾಧರ್, ಗಣೇಶ್, ಮುರುಗನ್, ಗುರುಶೇಟ್, ಅನಿತಾ, ಜಾಧವ್ ಇದ್ದರು.