ಧರ್ಮ ಎಂಬುದು ಕೇವಲ ಪೂಜೆ, ಪುನಸ್ಕಾರಗಳಿಗೆ ಸೀಮಿತವಾಗಬಾರದು. ಅದು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನೆರವಾಗಬೇಕು.

ರೋಣ: ಬಡವರ ಕಣ್ಣೀರು ಒರೆಸುವ ಕಾರ್ಯವೇ ನಿಜವಾದ ಧರ್ಮವಾಗಿದ್ದು, ಪ್ರತಿಯೊಬ್ಬರೂ ಧರ್ಮ ಮಾರ್ಗದಲ್ಲಿ ನಡೆಯಬೇಕು ಎಂದು ಚಿತ್ರದುರ್ಗ ಮಾದರ ಚನ್ನಯ್ಯ ಗುರುಪೀಠದ ಡಾ. ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ತಿಳಿಸಿದರು.

ಮಂಗಳವಾರ ತಾಲೂಕಿನ ಸವಡಿ ಗ್ರಾಮದ‌ ಮರುಳಸಿದ್ದೇಶ್ವರ ಮಠದ ಆವರಣದಲ್ಲಿ ಸೋಮಯ್ಯ ಸ್ವಾಮಿಗಳ 29ನೇ ಪುಣ್ಯಸ್ಮರಣೆ ಅಂಗವಾಗಿ ಜರುಗಿದ ಸರ್ವಧರ್ಮ ಸಾಮೂಹಿಕ ವಿವಾಹಗಳು ಕಾರ್ಯಕ್ರಮ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಧರ್ಮ ಎಂಬುದು ಕೇವಲ ಪೂಜೆ, ಪುನಸ್ಕಾರಗಳಿಗೆ ಸೀಮಿತವಾಗಬಾರದು. ಅದು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನೆರವಾಗಬೇಕು. ಇಂದಿನ ದಿನಗಳಲ್ಲಿ ಮದುವೆ ಎಂಬುದು ಅತ್ಯಂತ ದುಬಾರಿ ವ್ಯವಹಾರವಾಗಿ ಮಾರ್ಪಟ್ಟಿದೆ. ಇಂತಹ ಸಂದರ್ಭದಲ್ಲಿ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಆಸರೆಯಾಗಲು ಮಠದ ವತಿಯಿಂದ ಸಾಮೂಹಿಕ ವಿವಾಹಗಳನ್ನು ಆಯೋಜಿಸಲಾದ ಕಾರ್ಯ ಉತ್ತಮವಾಗಿದೆ. ಸತತ 29 ವರ್ಷದಿಂದ ಸರ್ವಧರ್ಮ ಸಾಮೂಹಿಕ ವಿವಹಗಳನ್ನು ಮರುಳಸಿದ್ದೇಶ್ವರ ಮಠದ ವತಿಯಿಂದ ಹಮ್ಮಿಕೊಂಡು ಬಂದಿದ್ದು ಶ್ಲಾಘನೀಯ ಎಂದರು.

ಮರುಳಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ಸಾಮಾನ್ಯ ಜನರಿಗೆ ಮದುವೆಯ ವೆಚ್ಚ ಭರಿಸುವುದು ಕಷ್ಟವಾಗಿರುವ ಕಾಲದಲ್ಲಿ ಮಠವು ಈ ರೀತಿಯ ಕಾರ್ಯಕ್ರಮ ಹಮ್ಮಿಕೊಳ್ಳುತ್ತಾ ಬಂದಿದೆ. ಜಾತಿ- ಮತದ ಭೇದವಿಲ್ಲದೆ ಎಲ್ಲರೂ ಒಂದೇ ಮಂಟಪದಲ್ಲಿ ಮದುವೆಯಾಗುವುದು ಸಮಾಜಕ್ಕೆ ಒಳ್ಳೆಯ ಸಮಾನತೆಯ ಸಂದೇಶ ನೀಡುತ್ತದೆ ಎಂದರು.

ರೋಣ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಮಿಥುನ ಪಾಟೀಲ ಮಾತನಾಡಿ, ​ಮರುಳಸಿದ್ದೇಶ್ವರ ಮಠವು ಕೇವಲ ಆಧ್ಯಾತ್ಮಿಕ ಕೇಂದ್ರವಾಗಿರದೆ, ಇಂತಹ ಧರ್ಮಾದಿ, ಸಮಾಜಮುಖಿ ಕಾರ್ಯಗಳ ಮೂಲಕ ಜನರ ಮನಸ್ಸಿನಲ್ಲಿ ನೆಲೆಸಿದೆ ಎಂದರು.

ಸಾನ್ನಿಧ್ಯ ವಹಿಸಿ ಬೆನಹಾಳ ಹಿರೇಮಠದ ಮಹಾಂತ ಸದಾಶಿವ ಶಿವಾಚಾರ್ಯರು, ಹಿರೇಸಿಂದೋಗಿಯ ಹೂವಯ್ಯ ಸ್ವಾಮಿ ಆಶೀರ್ವಚನ ನೀಡಿದರು.

ಈ ವೇಳೆ 6 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಸಮಾರಂಭದಲ್ಲಿ ಹಿರೇ ಸಿಂದೋಗಿಯ ಮರುಳಸಿದ್ದೇಶ್ವರ ಸ್ವಾಮೀಜಿ, ಹುಚ್ಚಯ್ಯ ಸ್ವಾಮಿ, ಶಿವಯ್ಯ ಸ್ವಾಮಿ, ನಾಗರಾಜ ಸ್ವಾಮಿ, ಶಿವಲಿಂಗಯ್ಯ ಸ್ವಾಮಿ, ಸಂಗನಬಸಯ್ಯ ಸ್ವಾಮಿ, ಚಂದ್ರಶೇಖರಯ್ಯ ಹಿರೇಮಠ, ಸುರೇಶ ನಡುವಿನಮನಿ, ಸಿದ್ದು ಹಲಗಿ, ದುರ್ಗಪ್ಪ, ಮೈಲಾರಪ್ಪ‌ ಚಳ್ಳಮರದ, ಹುಡಚಪ್ಪ ಹಳ್ಳಿಕೇರಿ, ದುರ್ಗಪ್ಪ ಮಲ್ಲಾಪೂರ, ಶರಣಪ್ಪ‌ ಮಲ್ಲಾಪೂರ, ಬಸಪ್ಪ ಮಲ್ಲಾಪೂರ, ದುರ್ಗಪ್ಪ ಶಿರೋಳ, ರಮೇಶ ಕಡೆಮನಿ, ಮಂಜುನಾಥ ಬುರಡಿ, ಬಾಳಪ್ಪ ಬುರಡಿ, ಸಂಗಪ್ಪ ಹುಣಸಿಮರದ, ಮರಿಸಿದಪ್ಪ ಹುಣಸಿಮರದ ಮುಂತಾದವರು ಉಪಸ್ಥಿತರಿದ್ದರು. ಸಿದ್ದು ಹಲಗಿ ನಿರೂಪಿಸಿದರು.