ಸಾರಾಂಶ
ವೆಂಕಟಯ್ಯನಛತ್ರದಲ್ಲಿರುವ ಶ್ರೀ ಪ್ರೇರಣಾ ವಿದ್ಯಾಸಂಸ್ಥೆಯ ಶಾಲೆಯ ಜಾಗ ನನ್ನದು ಎಂದು ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಮುಖ್ಯ ದ್ವಾರವನ್ನೇ ಬಂದ್ ಮಾಡಿ, ತಂತಿಬೇಲಿ ಹಾಕಿ, ಮಕ್ಕಳು, ಶಿಕ್ಷಕರು ಒಳ ಹೋಗದಂತೆ ತಡೆವೊಡ್ಡಿದ ಪ್ರಕರಣವು ಪೋಲಿಸರ ಮಧ್ಯ ಪ್ರವೇಶದಿಂದ ಮಕ್ಕಳು ಶಾಲೆಗೆ ಹೋಗುವಂತೆ ಆಯಿತು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ತಾಲೂಕಿನ ವೆಂಕಟಯ್ಯನಛತ್ರದಲ್ಲಿರುವ ಶ್ರೀ ಪ್ರೇರಣಾ ವಿದ್ಯಾಸಂಸ್ಥೆಯ ಶಾಲೆಯ ಜಾಗ ನನ್ನದು ಎಂದು ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಮುಖ್ಯ ದ್ವಾರವನ್ನೇ ಬಂದ್ ಮಾಡಿ, ತಂತಿಬೇಲಿ ಹಾಕಿ, ಮಕ್ಕಳು, ಶಿಕ್ಷಕರು ಒಳ ಹೋಗದಂತೆ ತಡೆವೊಡ್ಡಿದ ಪ್ರಕರಣವು ಪೋಲಿಸರ ಮಧ್ಯ ಪ್ರವೇಶದಿಂದ ಮಕ್ಕಳು ಶಾಲೆಗೆ ಹೋಗುವಂತೆ ಆಯಿತು. ಸ್ಫೂರ್ತಿ ಟ್ರಸ್ಟ್ ಆಶ್ರಯದಲ್ಲಿ ಪ್ರೇರಣಾ ವಿದ್ಯಾಸಂಸ್ಥೆ ಆರಂಭವಾಗಿದ್ದು, ೧ ರಿಂದ ೭ ನೇ ತರಗತಿ ವರೆಗೆ ೩೦೦ಕ್ಕೂ ಹೆಚ್ಚು ಮಕ್ಕಳು ಈ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿವೆ. ಪ್ರಸಕ್ತ ಶೈಕ್ಷಣಿಕ ವರ್ಷದ ಆರಂಭದ ದಿನವಾದ ಇಂದು ಟ್ರಸ್ಟ್‌ನ ಸಂಸ್ಥಾಪಕ ಅಧ್ಯಕ್ಷರಾಗಿದ್ದ ಮಹದೇವಸ್ವಾಮಿ ಈ ಜಾಗ ನನಗೆ ಸೇರಿದ್ದು ಎಂದು ಬೆಳ್ಳಂಬೆಳಗ್ಗೆಯೇ ಮುಖ್ಯದ್ವಾರವನ್ನು ಬಂದ್ ಮಾಡಿ, ತಂತಿ ಬೇಲಿ ಅಳವಡಿಸಿದ್ದರು. ಈ ಬಗ್ಗೆ ಮಾತನಾಡಿದ ಮಹದೇವಸ್ವಾಮಿ, ಪ್ರೇರಣಾ ವಿದ್ಯಾ ಸಂಸ್ಥೆಯು ನಡೆಯುತ್ತಿರುವುದು ನನಗೆ ಸೇರಿದ ಜಾಗದಲ್ಲಿ. ಟ್ರಸ್ಟ್ ಕಳೆದ ಮೂರು ವರ್ಷಗಳಿಂದ ನನ್ನನ್ನು ಕಡೆಗಣಿಸಿದ್ದಾರೆ. ಯಾವುದೇ ರೀತಿಯ ಟ್ರಸ್ಟಿಯಾದ ನನ್ನನ್ನು ಯಾವುದೇ ಸಭೆಗಳಿಗೆ ಆಹ್ವಾನಿಸುತ್ತಿಲ್ಲ. ಟ್ರಸ್ಟ್ ಇದುವರೆಗೆ ನನಗೆ ಯಾವುದೇ ಹಣ ನೀಡಿಲ್ಲ. ಈ ಜಾಗವನ್ನು ಅನ್ಯಕ್ರಾಂತ ಮಾಡಿಸಿದ್ದು ನಾನು. ಇದೇ ಜಾಗವನ್ನು ತೋರಿಸಿ, ಅಂಕನಶೆಟ್ಟಿಪುರ ದಲ್ಲಿಬೇಕಾದ ಪ್ರೇರಣಾ ವಿದ್ಯಾ ಸಂಸ್ಥೆಯು ನಿಯಮ ಬಾಹಿರವಾಗಿ ವೆಂಕಟಯ್ಯನಛತ್ರದಲ್ಲಿ ನಡೆಯುತ್ತಿದೆ. ಈ ಬಗ್ಗೆ ಶಿಕ್ಷಣ ಇಲಾಖೆಗೆ ಅನೇಕ ಬಾರಿ ದೂರು ನೀಡಿದ್ದರು ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ನನಗೆ ಸೇರಿದ ಜಾಗವನ್ನು ನಾನು ಭದ್ರ ಪಡಿಸಿಕೊಂಡಿದ್ದೇನೆ ಎಂದು ಪ್ರತಿಕ್ರಿಯೆ ನೀಡಿದರು. ಪೊಲೀಸರ ಮಧ್ಯ ಪ್ರವೇಶ:ಪ್ರೇರಣಾ ವಿದ್ಯಾ ಸಂಸ್ಥೆಯ ಜಾಗಕ್ಕೆ ತಂತಿ ಬೇಲಿ ಹಾಕಿ, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಹೋಗದಂತೆ ಮಹದೇವಸ್ವಾಮಿ ಅವರು ತಡೆವೊಡ್ಡಿದ್ದಾರೆ ಎಂದು ಟ್ರಸ್ಟ್ ಅಧ್ಯಕ್ಷ ಪ್ರಕಾಶ್ ರಾಮಸಮುದ್ರ ಪೂರ್ವ ಪೋಲಿಸ್ ಠಾಣೆಗೆ ದೂರು ನೀಡಿದ್ದರು. ಬೆಳಗ್ಗೆಯೇ ಶಾಲೆಗೆ ಬಂದ ಮಕ್ಕಳು ತಂತಿ ಬೇಲಿ ಹಾಕಿದ್ದನ್ನು ನೋಡಿ ನಿರಾಶೆಯಿಂದ ಹೊರಗುಳಿದರು. ಮುಖ್ಯ ಶಿಕ್ಷಕರು, ಸಹ ಶಿಕ್ಷಕ ವೃಂದವರು , ಪೋಷಕರು ರಸ್ತೆ ಬದಿಯಲ್ಲಿ ನಿಂತು ಆಶ್ಚರ್ಯ ಚಕಿತದಿಂದ ನೋಡುವಂತೆ ಆಗಿತ್ತು. ಸ್ಥಳಕ್ಕಾಗಮಿಸಿ ಪೊಲೀಸ್ ಇನ್ಸ್ ಪೆಕ್ಟರ್ ಸಿ.ನವೀನ್, ಸಿಬ್ಬಂದಿ ಶಾಲೆಯ ಮುಖ್ಯ ದ್ವಾರಕ್ಕೆ ಹಾಕಿದ್ದ ತಂತಿ ಬೇಲಿ ತೆರವು ಮಾಡಿ, ಮಕ್ಕಳ ಶಾಲೆಗೆ ಹೋಗಲು ಅನವು ಮಾಡಿಕೊಟ್ಟರು. ಮೊದಲು ಶಿಕ್ಷಣಕ್ಕೆ ಅದ್ಯತೆ ನೀಡಿ, ನಿಮ್ಮ ಸಮಸ್ಯೆ ಏನೇ ಇದ್ದರೂ ಕುಳಿತು ಬಗೆಹರಿಸಿಕೊಳ್ಳಿ ಎಂದು ಇಬ್ಬರನ್ನು ಠಾಣೆಗೆ ಬರುವಂತೆ ಸೂಚನೆ ನೀಡಿದರು.