ಕಥೆಗಾರನಿಗೆ ಹೃದಯದ ಮಿಡಿತದಷ್ಟೇ ವಿವೇಕವೂ ಮುಖ್ಯ: ಡಾ. ರಾಜೇಂದ್ರ ಚೆನ್ನಿ

| Published : Aug 11 2025, 12:31 AM IST

ಕಥೆಗಾರನಿಗೆ ಹೃದಯದ ಮಿಡಿತದಷ್ಟೇ ವಿವೇಕವೂ ಮುಖ್ಯ: ಡಾ. ರಾಜೇಂದ್ರ ಚೆನ್ನಿ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡ ಸಾಹಿತ್ಯ ಪ್ರಪಂಚ ಅತ್ಯಂತ ಸಮೃದ್ಧವಾಗಿದ್ದು, ಕನ್ನಡ ಸಾಹಿತ್ಯದ ಮೂಲಕ ವಿಶ್ವದ ಸಾಹಿತ್ಯವನ್ನು ಅರಿಯಲು ಸಾಧ್ಯವಿದೆ.

ಡಾ. ರಾಜಶೇಖರ ನೀರಮಾನ್ವಿ ನೆನಪು-ಕಥೆಗಳ ಕುರಿತು ಸಂವಾದ ಕಾರ್ಯಕ್ರಮ

ಕನ್ನಡ ಸಾಹಿತ್ಯದ ಮೂಲಕ ವಿಶ್ವದ ಸಾಹಿತ್ಯ ಅರಿಯಲು ಸಾಧ್ಯ: ಸವಿತಾ ನಾಗಭೂಷಣಕನ್ನಡಪ್ರಭ ವಾರ್ತೆ ಬಳ್ಳಾರಿ

ಕನ್ನಡ ಸಾಹಿತ್ಯ ಪ್ರಪಂಚ ಅತ್ಯಂತ ಸಮೃದ್ಧವಾಗಿದ್ದು, ಕನ್ನಡ ಸಾಹಿತ್ಯದ ಮೂಲಕ ವಿಶ್ವದ ಸಾಹಿತ್ಯವನ್ನು ಅರಿಯಲು ಸಾಧ್ಯವಿದೆ. ಆ ಮಟ್ಟಿಗಿನ ಗಟ್ಟಿ ಸಾಹಿತ್ಯ ಕನ್ನಡದಲ್ಲಿದೆ. ಇದಕ್ಕೆ ಡಾ. ರಾಜಶೇಖರ ನೀರಮಾನ್ವಿಯವರ ಕಥೆಗಳೇ ಸಾಕ್ಷಿ ಎಂದು ಹಿರಿಯ ಕವಯತ್ರಿ ಸವಿತಾ ನಾಗಭೂಷಣ ತಿಳಿಸಿದರು.

ಬೆಂಗಳೂರಿನ ಡಾ. ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನ ಹಾಗೂ ಬಳ್ಳಾರಿಯ ಲೋಹಿಯಾ ಪ್ರಕಾಶನ ಸಹಯೋಗದಲ್ಲಿ ಇಲ್ಲಿನ ಡಾ. ರಾಜ್‌ಕುಮಾರ್ ರಸ್ತೆಯ ಬಿಪಿಎಸ್ಸಿ ಶಾಲೆ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಹಿರಿಯ ಕಥೆಗಾರ ಡಾ. ರಾಜಶೇಖರ ನೀರಮಾನ್ವಿ ನೆನಪು, ಕಥೆಗಳ ಕುರಿತ ಮಾತುಕತೆ ಹಾಗೂ ಸಂವಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಇಂದು ಕನ್ನಡದ ಕಥಾ ಲೋಕದ ಬಗ್ಗೆ ಮಾತನಾಡುವಾಗ ನೀರಮಾನ್ವಿಯವರ ಕಥೆಗಳನ್ನು ಬಿಟ್ಟು ಚರ್ಚಿಸಲು ಸಾಧ್ಯವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಅವರ ಕಥೆಗಳು ಕನ್ನಡದ ಕಥಾಲೋಕದಲ್ಲಿ ಛಾಪು ಮೂಡಿಸಿವೆ ಎಂದು ಹೇಳಿದರು.

ಯುವ ಕಥೆಗಾರರು ಹೆಚ್ಚು ಹೆಚ್ಚು ಓದಬೇಕು. ನೂರಾರು ಕಥೆಗಳನ್ನು ಓದಿದರೆ ಮಾತ್ರ ಕಥೆ ಕಟ್ಟುವಿಕೆಯ ಪ್ರಕ್ರಿಯೆ ಸಿದ್ಧಿಸುತ್ತದೆ. ಈ ಹಿಂದೆ ಕಥೆಗಾರರಿಗೆ ಕಮ್ಮಟಗಳು ಇರಲಿಲ್ಲ. ಮಾರ್ಗದರ್ಶನ ಮಾಡುವವರು ಇರಲಿಲ್ಲ. ಆದರೆ, ಈ ಕಾಲದ ಯುವ ಬರಹಗಾರರಿಗೆ ಸಾಕಷ್ಟು ಅವಕಾಶಗಳು ಇದ್ದು, ಕಥಾಲೋಕಕ್ಕೆ ತೆರೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ನೀರಮಾನ್ವಿಯವರ ಕಥಾ ಸ್ವರೂಪ ಕುರಿತು ವಿವರಿಸಿದ ಹಿರಿಯ ಲೇಖಕ ಡಾ. ರಾಜೇಂದ್ರ ಚೆನ್ನಿ,

ನೀರಮಾನ್ವಿಯವರ ಪ್ರತಿಯೊಂದು ಕಥೆಯಲ್ಲೂ ಭಿನ್ನವಾದ ಗ್ರಹಿಕೆ ಕಂಡು ಬರುತ್ತದೆ. ಕಥೆಗಾರನಿಗೆ ಹೃದಯದ ಮಿಡಿತದಷ್ಟೇ ವಿವೇಕವೂ ಅಷ್ಟೇ ಮುಖ್ಯ. ವಿವೇಕ ಎಲ್ಲೆ ಮೀರದಂತೆ, ಜಿಜ್ಞಾಸೆಗಳನ್ನು ಮೀರಿ ಹೋಗುವುದು ಹೇಗೆ ?. ಇದು ಮಾನ್ವಿಯವರ ಕಥೆಗಳಲ್ಲಿ ಕಂಡು ಬರುವ ಬಹುಮುಖ್ಯ ಅಂಶಗಳು. ಮಾನ್ವಿಯವರ ಇಡೀ 12 ಕಥೆಗಳಲ್ಲಿ ಎಲ್ಲೂ ಸಿನಿಕತನ ಕಂಡು ಬರುವುದಿಲ್ಲ. ಅವರ ಮೊದಲ ಕಥೆಯಲ್ಲಿಯೇ ಕಥೆ ಕಟ್ಟುವಿಕೆಯ ಹದಗಾರಿಕೆ ಅಚ್ಚರಿ ಮೂಡಿಸುತ್ತದೆ ಎಂದರು.

ಡಾ. ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನದ ಅಧ್ಯಕ್ಷೆ ಎಚ್.ಆರ್‌. ಸುಜಾತಾ ನೀರಮಾನ್ವಿಯವರ ಕಥೆಗಳ ವೈಶಿಷ್ಟ್ಯತೆ ಕುರಿತು ಪ್ರಾಸ್ತಾಪಿಸಿದರಲ್ಲದೆ, ನೀರಮಾನ್ವಿಯವರ ಕಥೆಗಳನ್ನು ನಿರ್ದಿಷ್ಟ ಚೌಕಟ್ಟಿನಲ್ಲಿಟ್ಟು ನೋಡಲು ಸಾಧ್ಯವೇ ಇಲ್ಲ ಎಂದು ಅಭಿಪ್ರಾಯಪಟ್ಟರು.

ಲೋಹಿಯಾ ಪ್ರಕಾಶನದ ಮುಖ್ಯಸ್ಥ ಸಿ.ಚನ್ನಬಸವಣ್ಣ, ಕನ್ನಡ ಕಥಾ ಲೋಕಕ್ಕೆ ನೀರಮಾನ್ವಿಯರ ನೀಡಿದ ಕೊಡುಗೆ ಹಾಗೂ ಅವರ ಜತೆಗಿನ ಒಡನಾಟ ಕುರಿತು ಸ್ಮರಿಸಿದರು.

ಮಧ್ಯಾಹ್ನದ ಮಾತುಕತೆಯಲ್ಲಿ ಹಿರಿಯ ಲೇಖಕ ಡಾ. ಅಮರೇಶ ನುಗಡೋಣಿ ಹಾಗೂ ರಾಯಚೂರಿನ ಲೇಖಕ ಡಾ. ಚಿದಾನಂದ ಸಾಲಿ ಮಾತನಾಡಿದರಲ್ಲದೆ, ಬಳಿಕ ಯುವ ಕಥೆಗಾರರ ಜತೆ ಸಂವಾದ ನಡೆಸಿದರು. ಸಂಜೆ ಜರುಗಿದ ಸಮಾರೋಪದಲ್ಲಿ ಸಮಾಜಮುಖಿ ಪತ್ರಿಕೆ ಸಂಪಾದಕ ಚಂದ್ರಕಾಂತ ವಡ್ಡು ನೀರಮಾನ್ವಿಯವರ ಬರವಣಿಗೆಯ ಗಟ್ಟಿತನ ಕುರಿತು ಪ್ರಸ್ತಾಪಿಸಿದರಲ್ಲದೆ, ನೀರಮಾನ್ವಿಯವರ ಕಥೆಗಳನ್ನು ಗುರುತಿಸುವಿಕೆ ಕೆಲಸವಾಗಿದೆ. ಆದರೆ, ಮತ್ತಷ್ಟೂ ಅವರ ಕೃತಿಗಳ ವಿಮರ್ಶೆ, ಸಂವಾದ ನಡೆಯುವಂತಾಗಬೇಕು ಎಂದು ಆಶಿಸಿದರು.

ಜಡೇಶ್ ಎಮ್ಮಿಗನೂರು ವಚನ ಹಾಗೂ ಕುವೆಂಪು ಗೀತೆ ಹಾಡಿದರು. ಲೇಖಕ ಡಾ. ದಸ್ತಗೀರ್ ಸಾಬ್ ದಿನ್ನಿ ಹಾಗೂ

ನಾಗರಾಜ ಬಸರಕೋಡು ಕಾರ್ಯಕ್ರಮ ನಿರ್ವಹಿಸಿದರು. ಡಾ. ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನದ ಪದಾಧಿಕಾರಿಗಳು ಹಾಗೂ ಹಿರಿಯ ಪೊಲೀಸ್ ಅಧಿಕಾರಿ ರವಿಕಾಂತೇಗೌಡ, ಅಲ್ಲಮಪ್ರಭು ಬೆಟ್ಟದೂರು ಸೇರಿದಂತೆ ಬಳ್ಳಾರಿ, ರಾಯಚೂರು, ಕೊಪ್ಪಳ, ಮಂಡ್ಯ, ಬೆಂಗಳೂರು, ಹಾಸನ ಮತ್ತಿತರ ಜಿಲ್ಲೆಗಳ ಲೇಖಕರು ಹಾಗೂ ಸಾಹಿತ್ಯಾಸಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕಥೆಗೆ ಮಾನದಂಡ ಇರುವುದಿಲ್ಲ

ಯಾವ ಕಥೆಗೂ ಮಾನದಂಡ ಇರುವುದಿಲ್ಲ. ಅದನ್ನು ಇಟ್ಟುಕೊಂಡು ಬರೆಯುವ ಕಥೆ, ಕಥೆ ಎನಿಸಿಕೊಳ್ಳುವುದಿಲ್ಲ ಎಂದು ಹಿರಿಯ ಲೇಖಕ ಡಾ. ರಾಜೇಂದ್ರ ಚೆನ್ನಿ ತಿಳಿಸಿದರು.

ಸಂವಾದಲ್ಲಿ ಯುವ ಲೇಖಕರ ಪ್ರಶ್ನೆಗೆ ಉತ್ತರಿಸಿದ ಅವರು, ಅನುಭವವನ್ನೇ ಇಟ್ಟುಕೊಂಡು ಕಥೆ ಬರೆಯಬೇಕು. ಬೇರೆಯವರು ಬರೆದಂತೆ ನಾನು ಬರೆಯುತ್ತೇನೆ ಎಂದು ಹೊರಡಬಾರದು. ಅನುಭವದ ಮೂಲಕ ಕಥೆ ಹುಟ್ಟಬೇಕು ಎಂದು ಹೇಳಿದರು.