ಕನ್ನಡಪ್ರಭ ವಾರ್ತೆ ಗದಗ

ನಮ್ಮ ಶೈಕ್ಷಣಿಕ ಗುರಿ ಮಕ್ಕಳನ್ನು ಕೇವಲ ವಿದ್ಯಾವಂತರನ್ನಾಗಿ ರೂಪಿಸುವುದಲ್ಲ. ವಿದ್ಯೆಯೊಂದಿಗೆ ವಿವೇಕ, ಜ್ಞಾನದೊಂದಿಗೆ ವಿನಯ ಮತ್ತು ಸಾಧನೆಯೊಂದಿಗೆ ಸಂಸ್ಕಾರ ಹೊಂದಿದ ಉತ್ತಮ ವಿದ್ಯಾರ್ಥಿಗಳನ್ನು ರೂಪಿಸುವುದಾಗಿದೆ ಎಂದು ಸಂಪನ್ಮೂಲ ವ್ಯಕ್ತಿ ಕವಿತಾ ದಂಡಿನ ಹೇಳಿದರು.

ನಗರದ ಶಾಸ್ತ್ರೀಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಜರುಗಿದ ಪ್ರ.ಶಿಕ್ಷಣಾರ್ಥಿಗಳ ಪೌರತ್ವ ತರಬೇತಿ ಶಿಬಿರದಲ್ಲಿ ಜೀವನದಲ್ಲಿ ಮೌಲ್ಯಗಳು ವಿಷಯವಾಗಿ ಉಪನ್ಯಾಸ ನೀಡಿದ ಅವರು, ವೈಜ್ಞಾನಿಕ ಮನೋಭಾವದ ಜೊತೆಗೆ ಸಾಮಾಜಿಕ ಜವಾಬ್ದಾರಿ, ತಂತ್ರಜ್ಞಾನದ ಜೊತೆಗೆ ವಿವೇಚನೆ, ಯಶಸ್ಸಿನ ಜೊತೆಗೆ ವಿನಯ ಮತ್ತು ಹಕ್ಕುಗಳ ಜೊತೆಗೆ ಕರ್ತವ್ಯ ಪ್ರಜ್ಞಯು ಮಕ್ಕಳಲ್ಲಿ ಬೆಳೆದು ಬರಬೇಕು, ಆಗ ಮಾತ್ರ ಶಿಕ್ಷಣವು ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾ. ಡಾ. ಎಸ್.ಬಿ. ಹೊನ್ನಗುಡಿ ಮಾತನಾಡಿ, ಪ್ರಸ್ತುತ ದಿನಮಾನಗಳಲ್ಲಿ ಮೌಲ್ಯಶಿಕ್ಷಣವು ಅತ್ಯಂತ ಅವಶ್ಯವಾಗಿದ್ದು ಮಕ್ಕಳಲ್ಲಿ ಮಾನವೀಯತೆ, ಸಾಮಾಜಿಕ ಮೌಲ್ಯಗಳನ್ನು ಬಿತ್ತುವ ಕಾರ್ಯಕ್ಕೆ ನಾವೆಲ್ಲರೂ ಸಿದ್ಧರಾಗಬೇಕು. ವಿದ್ಯಾರ್ಥಿಗಳು ಸುಂದರ ಬದುಕಿನ ಕನಸು ಕಟ್ಟುವಂತೆ ಅವರಲ್ಲಿ ನಾವು ಆಶಯ ಬೀಜಗಳನ್ನು ಬಿತ್ತಬೇಕು ಎಂದರು.

ಈ ವೇಳೆ ಜೆಸಿಎಸ್ ಶಿಕ್ಷಣ ಸಮಿತಿಯ ಶಿವರಾಜ ಹಿರೇಮಠ, ಮಹಾಂತಾ ಹಿರೇಮಠ, ಕುಸುಮಾ ಹಿರೇಮಠ, ಎಚ್.ಗಂಗಪ್ಪ, ಸತೀಶ ಅಂಗಡಿ, ರಾಜೇಸಾಬ ಕೆರೂರ, ಈಶ್ವರ ತೆಳಗಡೆ, ಜ್ಯೋತಿ ದಬಾಡಿ, ಶಾರದಾ ಶಿವಪ್ಪಯ್ಯನಮಠ ಮುಂತಾದವರಿದ್ದರು. ಶಿಬಿರದ ಕಾರ್ಯಾಧ್ಯಕ್ಷ ಸಿ.ಎಂ. ಸಂದೀಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ನಿರ್ಮಲಾ ಮಟ್ಟಿ ಸ್ವಾಗತಿಸಿದರು, ಪ್ರೊ. ವನಜಾಕ್ಷಿ ಅರಳೇಲಿಮಠ ಪರಿಚಯಿಸಿದರು. ಸೌಮ್ಯ ಬಸಾಪೂರ, ಕೀರ್ತಿ ಮುಂಡರಗಿ ನಿರೂಪಿಸಿದರು, ಅಪೂರ್ವ ಅಂಗಡಿ ವಂದಿಸಿದರು. ನಂತರ ಪ್ರಶಿಕ್ಷಣಾರ್ಥಿಗಳಿಂದ ಪ್ರಾರ್ಥನೆ ಮತ್ತು ಯೋಗ ಕುರಿತು ರೂಪಕ ಹಾಗೂ ನೃತ್ಯ ಜರುಗಿತು.