ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರು
ನಮ್ಮ ಸಂವಿಧಾನವು ಅತ್ಯಂತ ವಿಭಿನ್ನವಾದುದು. ಪ್ರಪಂಚದ ಹಲವಾರು ಸಂವಿಧಾನವನ್ನು ಆಳವಾಗಿ ಅಧ್ಯಯನ ಮಾಡಿ ಭಾರತೀಯ ಸಮಾಜಕ್ಕೆ ಪೂರಕವಾಗುವ ಉತ್ತಮ ಅಂಶಗಳನ್ನು ನಮ್ಮ ಸಂವಿಧಾನದಲ್ಲಿ ಅಳವಡಿಸಿಕೊಳ್ಳಲಾಗಿದೆ. ಉತ್ತಮ ಆದರ್ಶಗಳು ಮೌಲ್ಯಗಳನ್ನು ಹೊಂದಿರುವ ನಮ್ಮ ಬೃಹತ್ ಸಂವಿಧಾನವನ್ನು ನಾವೆಲ್ಲರೂ ಗೌರವಿಸಬೇಕು ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದರು.ಜಿಲ್ಲಾಡಳಿತ, ಜಿಲ್ಲಾಪಂಚಾಯತ್ ಮತ್ತು ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಶುಕ್ರವಾರ ನಗರದ ಎಂಪ್ರೆಸ್ ಬಾಲಕಿಯರ ಪ್ರೌಢಶಾಲಾ ಸಭಾಂಗಣದಲ್ಲಿ ಸಂವಿಧಾನ ಜಾಗೃತಿ ಜಾಥಾ ಅಂಗವಾಗಿ ಏರ್ಪಡಿಸಲಾಗಿದ್ದ ಸಂವಿಧಾನ ರಚನಾ ಸಮಿತಿಯ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳಿಗೆ ಸಂವಿಧಾನದ ಆಶಯ, ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ತಿಳಿಸಬೇಕು ಎನ್ನುವ ಉದ್ದೇಶದಿಂದ ಸಂವಿಧಾನ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.ಸಂವಿಧಾನದ ಮಹತ್ವ, ಆಶಯ ಮತ್ತು ಸಮಾನತೆ, ತತ್ವಗಳ ಬಗ್ಗೆ ಸಮಾಜದ ಸರ್ವರಿಗೂ ಅರಿವು ಮೂಡಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯದ ಪ್ರತಿ ಗ್ರಾಮ ಪಂಜಾಯಿತಿಗಳಿಗೆ ಬೃಹತ್ ಸಂವಿಧಾನದ ಜಾಗೃತಿ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆದೇ ರೀತಿ ತುಮಕೂರು ಜಿಲ್ಲೆಯಲ್ಲಿ ಜನವರಿ 26 ರಂದು ಸಂವಿಧಾನ ಜಾಗೃತಿ ಜಾಥಾಕ್ಕೆ ಚಾಲನೆ ನೀಡಲಾಗಿದ್ದು, ಈ ಸಂವಿಧಾನ ಜಾಗೃತಿ ಜಾಥಾ ಜಿಲ್ಲೆಯ ಎಲ್ಲಾ 330 ಗ್ರಾಮ ಪಂಜಾಯಿತಿಗಳಿಗೆ ಸಂಚರಿಸಿ ನಾಗರಿಕರಿಗೆ ಮತ್ತು ಸಮಾಜದ ಸರ್ವರಿಗೂ ಸಂವಿಧಾನದ ಮಹತ್ವವನ್ನು ತಿಳಿಸಲಿದೆ ಎಂದರು.
ವಿದ್ಯಾರ್ಥಿಗಳು ಕನಸು ಕಾಣುವುದರ ಜೊತೆ ಅದನ್ನು ನನಸು ಮಾಡಲು ಶ್ರದ್ಧೆಯಿಂದ ನಿರಂತರವಾಗಿ ಅಧ್ಯಯನ ಮಾಡಿದಾಗ ಮಾತ್ರ ನಿಮ್ಮ ಗುರಿ ತಲುಪಲು ಸಾಧ್ಯವಾಗುತ್ತದೆ. ಐಎಎಸ್, ಐಪಿಎಸ್ ಹಾಗೂ ರಾಜಕಾರಣಿ, ಉದ್ಯಮಿ ಸೇರಿದಂತೆ ಯಾವ ಕ್ಷೇತ್ರಗಳಲ್ಲಿ ನಿಮಗೆ ಆಸಕ್ತಿ ಇದೆಯೋ ಆ ಕ್ಷೇತ್ರಗಳಲ್ಲಿ ಮುನ್ನಡೆಯಿರಿ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.ಜಿಲ್ಲಾ ಪಂಚಾಯತ್ ಸಿಇಒ ಜಿ.ಪ್ರಭು ಮಾತನಾಡಿ, ಸಂವಿಧಾನದ ಅಡಿಯಲ್ಲಿ ನಾವೆಲ್ಲರೂ ಬಹಳ ಜವಾಬ್ದಾರಿಯುತ ನಾಗರಿಕರಾಗಿ ನಡೆದುಕೊಳ್ಳಬೇಕು, ವಿದ್ಯಾರ್ಥಿಗಳು ಸ್ವಯಂಪ್ರೇರಿತವಾಗಿ ಏನ್ನಾದರೂ ಸಾಧಿಸಬೇಕು ಎನ್ನುವ ಛಲವಿದ್ದಾಗ ಮಾತ್ರ ಗುರಿ ತಲುಪಲು ಸಾಧ್ಯ. ಶಿಕ್ಷಕರು ಪ್ರಾಥಮಿಕ ಹಂತದಲ್ಲಿಯೇ ವಿದ್ಯಾರ್ಥಿಗಳಿಗೆ ಭದ್ರಬುನಾದಿ ಹಾಕಬೇಕು. ಆಗ ಮಾತ್ರ ಮಕ್ಕಳು ಕ್ರಿಯಾಶೀಲರಾಗುತ್ತಾರೆ ಎಂದರು.
ಎಂಪ್ರೆಸ್ ಶಾಲೆಯ 9ನೇ ತರಗತಿಯ ವಿದ್ಯಾರ್ಥಿನಿಯರು ಸಂವಿಧಾನ ರಚನಾ ಸಮಿತಿ ಸಭೆಯ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೃಷ್ಣಪ್ಪ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ರಂಗಧಾಮಯ್ಯ, ಜಿಲ್ಲಾ ವಾರ್ತಾಧಿಕಾರಿ ಮಮತಾ ಎಂ.ಆರ್., ತಹಸೀಲ್ದಾರ್ ಸಿದ್ದೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಸೂರ್ಯಕಲಾ ಮತ್ತಿತರರಿದ್ದರು.
;Resize=(128,128))
;Resize=(128,128))