ಹಿರಿಯ ಗುರುಗಳ ಆಶೀರ್ವಾದದಿಂದ ಎಲ್ಲ ಕಾರ್ಯ ಯಶಸ್ವಿ: ಪರ್ತಗಾಳಿ ಶ್ರೀ

| Published : Apr 30 2025, 12:38 AM IST

ಹಿರಿಯ ಗುರುಗಳ ಆಶೀರ್ವಾದದಿಂದ ಎಲ್ಲ ಕಾರ್ಯ ಯಶಸ್ವಿ: ಪರ್ತಗಾಳಿ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಭಟ್ಕಳದ ಗೋಪಿನಾಥ ನದಿ ತೀರದಲ್ಲಿ ನಡೆದ ಬೃಹತ್ ಶ್ರೀರಾಮ ನಾಮ ತಾರಕ ಜಪ ಮಹಾ ಅಭಿಯಾನ ಹಾಗೂ ಶ್ರೀ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಪ್ರಥಮ ಯತಿವರ್ಯರಾದ ಶ್ರೀ ನಾರಾಯಣ ತೀರ್ಥ ಸ್ವಾಮೀಜಿ ಪುಣ್ಯತಿಥಿ ನಡೆಯಿತು.

ಭಟ್ಕಳ: ಒಂದು ಕುಟುಂಬಕ್ಕೆ ಯಜಮಾನ ಅಥವಾ ಹಿರಿಯರು ಇದ್ದರೆ ಹೇಗೆ ಧೈರ್ಯ ಇರುತ್ತದೆಯೋ ಹಾಗೆಯೆ ನಮಗೂ ನಮ್ಮ ಮಠ ಪರಂಪರೆಯ ಮೊದಲ ಯತಿವರ್ಯ, ನಮ್ಮ ಮಠದ ಸಂಸ್ಥಾಪಕರಾದ ಗುರುವರ್ಯರ ಆಶೀರ್ವಾದ ಸದಾ ಇದೆ ಎನ್ನುವ ವಿಶ್ವಾಸವಿದೆ. ಇದರಿಂದ ನಾವು ಕೈಗೊಂಡ ಎಲ್ಲ ಕಾರ್ಯಗಳು ಯಶಸ್ವಿಯಾಗಿ ನಡೆಯುತ್ತಿದೆ ಎಂದು ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಹೇಳಿದರು.

ಅವರು ಶ್ರೀ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಪ್ರಥಮ ಯತಿವರ್ಯರಾದ ಶ್ರೀ ನಾರಾಯಣ ತೀರ್ಥ ಸ್ವಾಮೀಜಿ ಪುಣ್ಯತಿಥಿ ಮತ್ತು ಗೋಪಿನಾಥ ನದಿ ತೀರದಲ್ಲಿ ನಡೆದ ಬೃಹತ್ ಶ್ರೀರಾಮ ನಾಮ ತಾರಕ ಜಪ ಮಹಾ ಅಭಿಯಾನದಲ್ಲಿ ಭಕ್ತರಿಗೆ ಆಶೀರ್ವಚನ ನೀಡಿದರು. ಇಂದು ನಮಗೆ ಯಜಮಾನರೆಂದರೆ ಸಂಸ್ಥಾಪನಾಚಾರ್ಯ ನಾರಾಯಣ ತೀರ್ಥ ಸ್ವಾಮೀಜಿಯವರು. ಸಂಸ್ಥಾನದ ಮಠ ಆರಂಭವಾಗಿ ೫೫೦ ವರ್ಷ ಕಳೆದಿದ್ದು, ಶ್ರೀ ನಾರಾಯಣ ತೀರ್ಥ ಸ್ವಾಮೀಜಿ ಅವರ ೫೦೮ನೇ ಪುಣ್ಯತಿಥಿಯನ್ನು ರಾಮನಾಮ ತಾರಕ ಮಂತ್ರ ಪಠಿಸುವ ಮೂಲಕ ಗೌರವ ಸಲ್ಲಿಸಲಾಗಿದೆ ಎಂದು ಹೇಳಿದರು.

ಸಂಸ್ಥಾನ ಮಠ ಆರಂಭವಾಗಿ, ಗುರುಪರಂಪರೆ ಆರಂಭವಾಗಿ ನಮಗೆ ಶ್ರೀರಾಮದೇವ ವೀರ ವೀಠ್ಠಲ ದೇವರು ಲಭಿಸಿ ೫೫೦ ವರ್ಷ ಕಳೆದಿದೆ. ಈ ಹಿನ್ನೆಲೆಯಲ್ಲಿ ೫೫೦ ವರ್ಷದಿಂದ ಮಠ ಪರಂಪರೆಯನ್ನು ಮುನ್ನಡೆಸಿಕೊಂಡು ಬಂದು ೨೩ ಯತಿವರ್ಯರನ್ನೂ ೫೫೦ ಕೋಟಿ ರಾಮನಾಮತಾರಕ ಮಹಾಮಂತ್ರ ಪಟಿಸುವ ಮೂಲಕ ಸ್ಮರಿಸಲಾಗುತ್ತಿದೆ. ಗುರುಗಳು ಹಾಕಿಕೊಟ್ಟ ಮಾರ್ಗದಲ್ಲಿ ಶಿಷ್ಯರು ನಡೆಯಬೇಕು ಎಂದರು.

ನಮ್ಮ ಪ್ರಿಯ ಗುರುವರ್ಯರಾದ ವಿದ್ಯಾಧೀಶ ತೀರ್ಥ ಸ್ವಾಮೀಜಿ ಅವರು ೧೯೭೫ರಲ್ಲಿ ಪೀಠಕ್ಕೆ ಬಂದಾಗ ಮೊದಲು ಭಟ್ಕಳದ ಮೂಲಮಠವನ್ನು ಜೀರ್ಣೋದ್ಧಾರ ಮಾಡಿದ್ದರು. ಬಳಿಕ ವಾರಾಣಸಿಯಲ್ಲಿರುವ ಮೊದಲ ಮಠವನ್ನು ಜೀರ್ಣೋದ್ಧಾರಗೊಳಿಸಿದ್ದರು. ಈಗಾಗಲೆ ೫೦ ವರ್ಷ ಕಳೆದಿದ್ದು, ನಾವು ಕೂಡ ಅವರ ಪರಂಪರೆ ಮುಂದುವರಿಸಿದ್ದು, ವಾರಾಣಸಿಯಲ್ಲಿ ನೂತನ ಮಠ ನಿರ್ಮಾಣವಾದರೆ ಭಟ್ಕಳದಲ್ಲೂ ಜೀರ್ಣೋದ್ಧಾರವಾಗಿದೆ ಎಂದರು.

ಭಕ್ತರು ಸುಮಾರು ೨೩ ಲಕ್ಷದ ೮೮ ಸಾವಿರ ರಾಮನಾಮ ಜಪ ಪಠಿಸಿದರು. ಪ್ರಸನ್ನ ಪ್ರಭು ಸ್ವಾಗತಿಸಿದರು. ದಿನೇಶ ಪೈ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮಂಜುನಾಥ ಪ್ರಭು ವಂದಿಸಿದರು.