2,000ಕ್ಕಿಂತ ಹೆಚ್ಚಿನ ಕೆಲವು ಯುಪಿಐ ವಹಿವಾಟುಗಳಿಗೆ ವಿಧಿಸಲಾಗುವ ಎಂಡಿಆರ್ ಶುಲ್ಕ ಹಿಂಪಡೆಯಬೇಕು ಹಾಗೂ ಕಾಯ್ದೆಯಲ್ಲಿರುವ ಎಂಡಿಆರ್‌ಗೆ ಸಂಬಂಧಿಸಿದ ನಿಯಮ ರದ್ದುಗೊಳಿಸಬೇಕು ಎಂದು ಧಾರವಾಡ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.
ಧಾರವಾಡ:
₹ 2,000ಕ್ಕಿಂತ ಹೆಚ್ಚಿನ ಕೆಲವು ಯುಪಿಐ ವಹಿವಾಟುಗಳಿಗೆ ವಿಧಿಸಲಾಗುವ ಎಂಡಿಆರ್ ಶುಲ್ಕ ಹಿಂಪಡೆಯಬೇಕು ಹಾಗೂ ಕಾಯ್ದೆಯಲ್ಲಿರುವ ಎಂಡಿಆರ್‌ಗೆ ಸಂಬಂಧಿಸಿದ ನಿಯಮ ರದ್ದುಗೊಳಿಸಬೇಕು ಎಂದು ಧಾರವಾಡ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.ಜಿಲ್ಲಾಧಿಕಾರಿ ಮೂಲಕ ಕೇಂದ್ರ ಹಣಕಾಸು ಸಚಿವರಿಗೆ ಸಲ್ಲಿಸಿದ ಮನವಿಯಲ್ಲಿ, ಯುಪಿಐ, ಎಟಿಎಂ, ಇಂಟರ್‌ನೆಟ್ ಬ್ಯಾಂಕಿಂಗ್, ಆರ್‌ಟಿಜಿಎಸ್ ಹಾಗೂ ನೆಫ್ಟ್ ಸೇರಿದಂತೆ ಡಿಜಿಟಲ್ ಪಾವತಿ ವ್ಯವಸ್ಥೆಗಳನ್ನು ಉತ್ತೇಜಿಸುತ್ತಿರುವ ಸರ್ಕಾರದ ಕ್ರಮಗಳನ್ನು ಸಂಸ್ಥೆ ಸ್ವಾಗತಿಸಿದೆ. ಆದರೆ, ಎಂಡಿಆರ್ ವಿಧಿಸುವುದರಿಂದ ವ್ಯಾಪಾರಸ್ಥರ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಬೀಳಲಿದ್ದು, ಅಂತಿಮವಾಗಿ ಗ್ರಾಹಕರ ಮೇಲೂ ಪರಿಣಾಮ ಬೀರಬಹುದು ಎಂದು ತಿಳಿಸಿದೆ.
₹ 2,000ಕ್ಕಿಂತ ಹೆಚ್ಚಿನ ವಹಿವಾಟುಗಳಿಗೆ ಎಂಡಿಆರ್ ವಿಧಿಸುವ ಔಚಿತ್ಯವಾದರೂ ಏನಿತ್ತು? ₹ 300ರ ಗರಿಷ್ಠ ಮಿತಿ ನಿಗದಿಪಡಿಸುವುದು ತಾರತಮ್ಯದಿಂದ ಕೂಡಿದೆ. ಪಾವತಿದಾರನ ಬದಲಿಗೆ ವ್ಯಾಪಾರಸ್ಥರ ಮೇಲೆ ಶುಲ್ಕದ ಹೊರೆ ಹಾಕುವುದು ‘ವ್ಯವಹಾರ ಸುಗಮತೆ’ ತತ್ವಕ್ಕೆ ವಿರುದ್ಧವಾಗಿದೆ. ಮುದ್ರಿತ ಗರಿಷ್ಠ ಚಿಲ್ಲರೆ ಬೆಲೆ (ಎಂಆರ್‌ಪಿ) ಹೊಂದಿರುವ ಸರಕುಗಳ ವ್ಯಾಪಾರದಲ್ಲಿ ಕಡಿಮೆ ಲಾಭಾಂಶ ಇರುವುದರಿಂದ, ಹೆಚ್ಚುವರಿ ಶುಲ್ಕವನ್ನು ವ್ಯಾಪಾರಸ್ಥರೇ ಭರಿಸಬೇಕಾಗಬಹುದು. ಹೊಸ ಎಂಆರ್‌ಪಿ ಸರಕುಗಳು ಮಾರುಕಟ್ಟೆಗೆ ಬರುವ ವರೆಗೆ ಈ ಹೊರೆ ಮುಂದುವರಿಯುವ ಸಾಧ್ಯತೆಯಿದ್ದು, ಇದರಿಂದ ಸರಕುಗಳ ಬೆಲೆ ಏರಿಕೆಯಾಗಬಹುದು ಎಂದು ಸಂಸ್ಥೆಯು ಮನವಿಯಲ್ಲಿ ಆತಂಕ ವ್ಯಕ್ತಪಡಿಸಿದೆ.ಸರ್ಕಾರದ ಬೆಂಬಲಿತ ಡಿಜಿಟಲ್ ಪಾವತಿ ವ್ಯವಸ್ಥೆಯಾಗಿರುವ ಯುಪಿಐಗೆ ವ್ಯಾಪಾರಸ್ಥರಿಂದ ಹೆಚ್ಚುವರಿ ಶುಲ್ಕ ಪಡೆಯಬಾರದು. ಡಿಜಿಟಲ್ ವಹಿವಾಟಿನ ವೆಚ್ಚವನ್ನು ಸರ್ಕಾರವೇ ಭರಿಸಬೇಕು ಎಂದು ಆಗ್ರಹಿಸಲಾಯಿತು.
ಪರ್ಯಾಯವಾಗಿ ವ್ಯಾಪಾರಸ್ಥರಿಂದ ಸಂಗ್ರಹವಾಗುವ ಜಿಎಸ್‌ಟಿ ಒಂದು ಸಣ್ಣ ಭಾಗವನ್ನು ಮೀಸಲಿಟ್ಟು ವ್ಯಾಪಾರಸ್ಥರ ಸೇವಾ ನಿಧಿ ಸ್ಥಾಪಿಸಬೇಕು ಎಂದು ಸಂಸ್ಥೆ ಸಲಹೆ ನೀಡಿದೆ. ತೆರಿಗೆ ಸಂಗ್ರಹಣೆ, ಉದ್ಯೋಗ ಸೃಷ್ಟಿ ಹಾಗೂ ಸಾರ್ವಜನಿಕರಿಗೆ ಸೇವೆ ಒದಗಿಸುವಲ್ಲಿ ವ್ಯಾಪಾರಸ್ಥರ ಕೊಡುಗೆಯನ್ನು ಸರ್ಕಾರ ಗುರುತಿಸಬೇಕು ಎಂದು ಮನವಿಯಲ್ಲಿ ತಿಳಿಸಿದೆ.ಈ ವೇಳೆ ಸಂಸ್ಥೆಯ ಅಧ್ಯಕ್ಷರಾದ ಪ್ರಭು ನಡಕಟ್ಟಿ, ಕಾರ್ಯದರ್ಶಿ ರವಿಂದ್ರ ಆಕಳವಾಡಿ, ಉದಯ ಯಂಡಿಗೇರಿ, ಸುಭಾಷ ಆಕಳವಾಡಿ, ಸುರೇಶ್ ಹೆಗಡೆ, ಶರತ್ ಟಿಕಾರೆ ಇದ್ದರು.