ಭೂಸ್ವಾಧೀನ ಅಧಿಸೂಚನೆ ವಾಪಸ್ ಪಡೆಯಿರಿ

| Published : Oct 14 2025, 01:00 AM IST

ಸಾರಾಂಶ

ರಾಜಧಾನಿ ಬೆಂಗಳೂರು ಕೇಂದ್ರಿತ ಯೋಜನೆಯ ಲಾಭಕ್ಕಾಗಿ ನಂದಿಹಳ್ಳಿ-ಮಲ್ಲಸಂದ್ರ-ವಸಂತನರಸಾಪುರ ಬೈಪಾಸ್‌ ರಸ್ತೆ ನಿರ್ಮಾಣ ಭೂಸ್ವಾಧೀನ ಅಧಿಸೂಚನೆ ವಾಪಸ್ ಪಡೆದು ಹಾಲಿ ಇರುವ ರಸ್ತೆಗಳನ್ನೆ ಆಧುನೀಕರಿಸಿ ಅಭಿವೃದ್ಧಿಪಡಿಸಬೇಕೆಂದು ಒತ್ತಾಯಿಸಿ ವಿವಿಧ ರೈತ ಪರ ಸಂಘಟನೆಗಳು ಜಿಲ್ಲಾಧಿಕಾರಿಗಳ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ತುಮಕೂರು ರಾಜಧಾನಿ ಬೆಂಗಳೂರು ಕೇಂದ್ರಿತ ಯೋಜನೆಯ ಲಾಭಕ್ಕಾಗಿ ನಂದಿಹಳ್ಳಿ-ಮಲ್ಲಸಂದ್ರ-ವಸಂತನರಸಾಪುರ ಬೈಪಾಸ್‌ ರಸ್ತೆ ನಿರ್ಮಾಣ ಭೂಸ್ವಾಧೀನ ಅಧಿಸೂಚನೆ ವಾಪಸ್ ಪಡೆದು ಹಾಲಿ ಇರುವ ರಸ್ತೆಗಳನ್ನೆ ಆಧುನೀಕರಿಸಿ ಅಭಿವೃದ್ಧಿಪಡಿಸಬೇಕೆಂದು ಒತ್ತಾಯಿಸಿ ವಿವಿಧ ರೈತ ಪರ ಸಂಘಟನೆಗಳು ಜಿಲ್ಲಾಧಿಕಾರಿಗಳ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.ನಂದಿಹಳ್ಳಿ, ಮಲ್ಲಸಂದ್ರ, ವಸಂತನರಸಾಪುರ ಬೈಪಾಸ್‌ರಸ್ತೆ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಯೊಂದಿಗೆ ಸಂಯುಕ್ತ ಹೋರಾಟ-ಕರ್ನಾಟಕ, ಕರ್ನಾಟಕ ರಾಜ್ಯ ರೈತ ಸಂಘ, ಕರ್ನಾಟಕ ಪ್ರಾಂತ ರೈತ ಸಂಘ, ಅಖಿಲ ಭಾರತ ರೈತ ಕೃಷಿ ಕೂಲಿ ಕಾರ್ಮಿಕರ ಸಂಘ, ಅಖಿಲ ಭಾರತ ಕಿಸಾನ್ ಸಭಾ ಹಾಗೂ ಇನ್ನಿತರ ರೈತಪರ ಸಂಘಟನೆಗಳ ಮುಖಂಡರು, ಭೂಸ್ವಾಧೀನದಿಂದ ಸಂಕಷ್ಟಕ್ಕೀಡಾಗುವ ರೈತರು ನಗರದ ಟೌನಹಾಲ್‌ನ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಯ ಮುಂಭಾಗದಿಂದ ಅಶೋಕ ರಸ್ತೆಯ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಔಟರ್‌ರಿಂಗ್‌ ರಸ್ತೆಗೆ ತಮ್ಮ ಜಮೀನಿನ ಭೂಸ್ವಾಧೀನಕ್ಕೆ ಅವಕಾಶ ನೀಡುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಸಾರುವ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಪ್ರತಿಭಟನೆಗೆ ಚಾಲನೆ ನೀಡಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಹಾಗೂ ತುಮಕೂರು ಜಿಲ್ಲಾಧ್ಯಕ್ಷ ಎ.ಗೋವಿಂದರಾಜು, ನಂದಿಹಳ್ಳಿ-ಮಲ್ಲಸಂದ್ರ-ವಸಂತನರಸಾಪುರ ಔಟರ್‌ರಿಂಗ್‌ ರಸ್ತೆಗೆ ಸುಮಾರು 46 ಹಳ್ಳಿಗಳ 750 ಎಕರೆಗೆ ಫಲವತ್ತಾದ ಭೂಮಿರೈತರ ಕೈ ತಪ್ಪಿ ಹೋಗಲಿದೆ. ನೂರಾರು ಎಕರೆಗಳಲ್ಲಿನ ತೆಂಗು, ಅಡಿಕೆ, ಮಾವು, ಹಲಸು, ಬಾಳೆಯ ತೋಟ, ಮನೆ-ಮಠ ಬದುಕನ್ನು ನಾಶ ಮಾಡಿ ರೈತರನ್ನು ಬೀದಿಗೆ ತಳ್ಳಿ ನಿರುದ್ಯೋಗ ಹೆಚ್ಚಿಸುವ, ಪರಿಸರ, ಅಂತರ್ಜಲ ಮಲಿನಗೊಳಿಸಿ, ರೋಗ-ರುಜಿನ ಹೆಚ್ಚಿಸಿ ಆಹಾರ ಭದ್ರತೆಗೆ ಧಕ್ಕೆ ತರುವ ಭ್ರಷ್ಟಾಚಾರದ ರಿಯಲ್‌ ಎಸ್ಟೇಟ್‌ ದಂಧೆಗೆ ಮಣಿದು ರೈತರ ಭೂಮಿಯನ್ನು ಕಸಿಯುವ ನಂದಿಹಳ್ಳಿ-ಮಲ್ಲಸಂದ್ರ-ವಸಂತನರಸಾಪುರ ಬೈಪಾಸ್‌ ರಸ್ತೆ ನಿರ್ಮಾಣ ಭೂಸ್ವಾಧೀನ ಅಧಿಸೂಚನೆಯನ್ನು ವಾಪಸಾತಿ ಮಾಡಬೇಕೆಂದು ಆಗ್ರಹಿಸಿದರು.

ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ ಅನುಮತಿಯಿಲ್ಲದೆ ಅಧಿಕಾರಿಗಳು ಭೂಮಿ ಅಳತೆಗೆ ಬಂದರೆ ಹೆಣ್ಣು ಮಕ್ಕಳು ಪೊರಕೆ, ಗಂಡು ಮಕ್ಕಳು ಚಾವಟಿ ಹಿಡಿದು ಹೋರಾಟಕ್ಕೆ ಸಿದ್ದರಾಗಬೇಕಾಗಿದೆ ಎಂದರು.

ಮಾಜಿ ಶಾಸಕ ಎಚ್.ನಿಂಗಪ್ಪ ಮಾತನಾಡಿ, ನಾನು ಇಂದು ಜೆಡಿಎಸ್ ಮುಖಂಡನಾಗಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿಲ್ಲ. ಬದಲಾಗಿ ಓರ್ವ ರೈತನಾಗಿ ಭಾಗಿಯಾಗಿದ್ದೇನೆ. ಈ ವರ್ತುಲ ರಸ್ತೆಗೆ 46 ಹಳ್ಳಿಗಳ ರೈತರ, ಬಡಜನರ ನೂರಾರು ಎಕರೆ ಫಲವತ್ತಾದ ಭೂಮಿ ಮತ್ತು ಬೆಳೆ ಬೆಳೆದಿರುವ ಬೆಳೆ ಹಾಗೂ ಅವರ ಸಂಪೂರ್ಣ ಜೀವನವೆ ಆಪೋಷನವಾಗಲಿದೆ ಎಂದರು. ಕರ್ನಾಟಕ ಪ್ರಾಂತರೈತ ಸಂಘದ ಪ್ರಧಾನ ಕಾರ್ಯದರ್ಶಿ ಯಶವಂತ್ ಮಾತನಾಡಿದರು. ಪ್ರತಿಭಟನಾನಿರತ ರೈತರಿಂದ ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ಶುಭಕಲ್ಯಾಣ್, ರೈತರ ಕೋರಿಕೆಯಂತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವುದಾಗಿ ಹೋರಾಟಗಾರರಿಗೆ ಭರವಸೆ ನೀಡಿದರು. ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಸಿ.ಶಂಕರಪ್ಪ, ಕೆಪಿಆರ್‌ಎಸ್‌ನ ಅಜ್ಜಪ್ಪ, ಎಐಕೆಕೆಎಂಎಸ್‌ನ ಅಧ್ಯಕ್ಷ ಎನ್.ಸ್ವಾಮಿ, ಎಐಕೆಎಸನ ಕಂಬೇಗೌಡ, ಸಂಯೋಜಕ ಬಿ.ಉಮೇಶ್, ರಮೇಶ್ ಭೈರಸಂದ್ರ,ಸಿದ್ದಗಂಗಯ್ಯ,ನಿಂಗರಾಜು, ಉದಯಕುಮಾರ್, ಮೋಹನ್‌ಕುಮಾರ್, ಸಿಐಟಿಯುನ ಸೈಯದ್ ಮುಜೀಬ್,ಎಐಟಿಯುಸಿಯ ಗಿರೀಶ್, ರೈತ ಸಂಘ ಯುವಘಟಕದಚಿರತೆಚಿಕ್ಕಣ್ಣ, ಆರೋಹಳ್ಳಿ ಮಂಜುನಾಥ್, ಶ್ರೀನಿವಾಸ್, ಕೆ.ಎಂ.ವೆಂಕಟೇಗೌಡ, ಲಕ್ಷ್ಮಣಗೌಡ, ರಂಗಹನುಮಯ್ಯ, ಆರ್.ಎಸ್.ಚನ್ನಬಸವಣ್ಣ, ದೊಡ್ಡನಂಜಪ್ಪ, ಷಬ್ಬೀರ್‌ಅಹಮದ್, ರಂಗಧಾಮಯ್ಯ ಸೇರಿದಂತೆ ನೂರಾರು ರೈತರುಗಳು ಪಾಲ್ಗೊಂಡಿದ್ದರು.

ರೈತರ ಭೂಸ್ವಾಧೀನ ಅಧಿಸೂಚನೆಗೂ ಮುನ್ನ ಭೂಸ್ವಾಧೀನ ಕಾಯ್ದೆ-2013 ಮತ್ತು ಆಹಾರ ಭದ್ರತಾಕಾಯ್ದೆ 2013 ನ್ನು ಸ್ಪಷ್ಟವಾಗಿ ಉಲ್ಲಂಘಿಸಲಾಗಿದೆ. ಆಹಾರ ಭದ್ರತಾ ಕಾಯ್ದೆಯಡಿ ಫಲವತ್ತಾದ ಭೂಮಿಯ ವಶಕ್ಕೆ ಅವಕಾಶವಿಲ್ಲ. ಆದರೂ ಸರಕಾರ ದೌರ್ಜನ್ಯ, ದಬ್ಬಾಳಿಕೆ ನಡೆಸಿ ಭೂ ಸ್ವಾಧೀನಕ್ಕೆ ಮುಂದಾಗಿರುವುದು ಖಂಡನೀಯ. ಇದರ ವಿರುದ್ದಎಂತಹ ಹೋರಾಟಕ್ಕೂರೈತರು ಸಿದ್ದರಿದ್ದಾರೆ. - ಎ.ಗೋವಿಂದರಾಜು, ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ.