ಬಗರ್ ಹುಕುಂ ಸಾಗುವಳಿದಾರರ ಕೇಸ್‌ ಹಿಂಪಡೆಯಿರಿ

| Published : Oct 30 2024, 12:33 AM IST / Updated: Oct 30 2024, 12:34 AM IST

ಸಾರಾಂಶ

ಸರ್ಕಾರ ಒಂದೆಡೆ ಭೂಮಿಯ ಹಕ್ಕುಪತ್ರ ನೀಡುತ್ತೇವೆ ಎಂದು ಹೇಳುತ್ತಾ, ಹಿಂಬಾಗಿಲಿನಿಂದ ಸಾಗುವಳಿದಾರರ ಮೇಲೆ ಕೇಸ್‌ ಹಾಕಿ, ಅಮಾಯಾಕ ರೈತರನ್ನು ಕೋರ್ಟ್‌ಗೆ ಅಲಿಯುವಂತೆ ಮಾಡಿದೆ.

ಅಳ್ನಾವರ:

ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ಕೊಡಬೇಕು ಹಾಗೂ ಸಾಗುವಳಿದಾರರ ಮೇಲಿನ ಕೇಸ್‌ ಹಿಂಪಡೆಯಬೇಕೆಂದು ಒತ್ತಾಯಿಸಿ ಅಳ್ನಾವರದಲ್ಲಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಬಳಿಕ ತಹಸೀಲ್ದಾರ್‌ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ತಾಲೂಕಿನಲ್ಲಿ ೭೦-೮೦ ವರ್ಷಗಳಿಂದ ಭೂ ಹೀನ ಮತ್ತು ಬಡ ರೈತ ಕೃಷಿ ಕಾರ್ಮಿಕರು ಕಂದಾಯ ಹಾಗೂ ಅರಣ್ಯದ ಕುರುಚಲುಗುಡ್ಡ, ಕಲ್ಲು ಭೂಮಿ ಇರುವ ಪ್ರದೇಶದಲ್ಲಿ ತಮ್ಮ ಜೀವನೋಪಾಯಕ್ಕಾಗಿ ಬೇರೆ ಯಾವುದೇ ದಾರಿ ಇಲ್ಲದೇ ಅನಿವಾರ್ಯವಾಗಿ ಸಾಗುವಳಿ ಮಾಡುತ್ತಿದ್ದಾರೆ. ಬಹುಪಾಲು ರೈತರಿಗೆ ಇದರಿಂದ ಬರುವ ಅಲ್ಪಸ್ವಲ್ಪ ವರಮಾನವೇ ಜೀವನಾಧಾರವಾಗಿದೆ. ಆದರೆ ಸರ್ಕಾರ ಒಂದೆಡೆ ಭೂಮಿಯ ಹಕ್ಕುಪತ್ರ ನೀಡುತ್ತೇವೆ ಎಂದು ಹೇಳುತ್ತಾ, ಹಿಂಬಾಗಿಲಿನಿಂದ ಸಾಗುವಳಿದಾರರ ಮೇಲೆ ಕೇಸ್‌ ಹಾಕಿ, ಅಮಾಯಾಕ ರೈತರನ್ನು ಕೋರ್ಟ್‌ಗೆ ಅಲಿಯುವಂತೆ ಮಾಡಿದೆ. ಬೆಲೆ ಏರಿಕೆ, ಅತಿವೃಷ್ಟಿ, ಅನಾವೃಷ್ಟಿ ಪರಿಸ್ಥಿತಿಯಲ್ಲಿ ರೈತರ ಬದುಕು ಕಂಗಾಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ಬಡ ರೈತರ ಸಹಾಯಕ್ಕೆ ಧಾವಿಸಿ ಅನುಕೂಲ ಕಲ್ಪಿಸುವಂತೆ ಒತ್ತಾಯಿಸಿದ್ದಾರೆ.

ಕೂಡಲೇ ಸರ್ಕಾರ ಭೂ ಮಂಜೂರಾತಿ ಸಮಿತಿಯನ್ನು ಕರೆದು. ಫಾರಂ ನಂ. ೫೭ ಸಲ್ಲಿಸಿರುವ ಎಲ್ಲಾ ಅರ್ಜಿಗಳನ್ನು ಸಮಿತಿಯಲ್ಲಿ ಪರಿಶೀಲಿಸಿ ಕೂಡಲೇ ಸಾಗುವಳಿದಾರರಿಗೆ ಹಕ್ಕುಪತ್ರ ಮಂಜೂರು ಮಾಡಬೇಕೆಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.

ಪ್ರತಿಭಟನಾ ಅಧ್ಯಕ್ಷತೆಯನ್ನು ಜಿಲ್ಲಾ ಉಪಾಧ್ಯಕ್ಷ ಹನುಮೇಶ ಹುಡೇದ ವಹಿಸಿದ್ದರು. ಪ್ರತಿಭಟನಾ ಸಭೆ ಉದ್ದೇಶಿಸಿ ಜಿಲ್ಲಾಧ್ಯಕ್ಷೆ ದೀಪಾ ಧಾರವಾಡ, ಜಿಲ್ಲಾ ಕಾರ್ಯದರ್ಶಿ ಶರಣು ಗೋನವಾರ ಮಾತನಾಡಿದರು.

ಮುಖಂಡರಾದ ಸಜ್ಜನ ಚಲವಾದಿ ಆನಂದ ಚಲವಾದಿ, ಶಿವರಾಜ ಚಲವಾದಿ, ಶ್ರೀದೇವಿ ಚಲವಾದಿ, ಪುಂಡಲೀಕ ಬೈಲೂರು ದೊಂಡಿಬಾ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.