ಅವೈಜ್ಞಾನಿಕ ಕಾಮಗಾರಿ ಕೂಡಲೇ ಹಿಂಪಡೆಯಿರಿ

| Published : Jun 26 2024, 12:39 AM IST

ಸಾರಾಂಶ

ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆ ಕಾಮಗಾರಿಯನ್ನು ಕೂಡಲೇ ಸ್ಥಗಿತಗೊಳಿಸುವಂತೆ ಆಗ್ರಹಿಸಿ ಸ್ವಯಂ ಪ್ರೇರಿತ ಜಿಲ್ಲಾ ಬಂದ್‌ ನಡೆಸಲಾಯಿತು

ತಿಪಟೂರು: ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆ ಕಾಮಗಾರಿಯನ್ನು ಕೂಡಲೇ ಸ್ಥಗಿತಗೊಳಿಸುವಂತೆ ಆಗ್ರಹಿಸಿ ಸ್ವಯಂ ಪ್ರೇರಿತ ಜಿಲ್ಲಾ ಬಂದ್‌ ನಡೆಸಲಾಯಿತು.

ತಿಪಟೂರು ಹೋರಾಟ ಸಮಿತಿ ಅಧ್ಯಕ್ಷ ಲೋಕೇಶ್ವರ ಮಾತನಾಡಿ, ಜಿಲ್ಲೆಗೆ ಮೀಸಲಿಟ್ಟಿರುವ ಹೇಮಾವತಿ ನೀರಿನ 24ಟಿಎಂಸಿ ನೀರಿನಲ್ಲಿಯೇ ರಾಮನಗರ ಜಿಲ್ಲೆಯ ಮಾಗಡಿಗೆ ತೆಗೆದುಕೊಂಡು ಹೋಗಲು ರಾಜ್ಯ ಸರ್ಕಾರ ಮುಂದಾಗಿರುವುದು ಖಂಡನೀಯ. ಈ ಹಿಂದಿನ ಕೆಡಿಪಿ ಸಭೆಯಲ್ಲಿ ಈ ಅವೈಜ್ಞಾನಿಕ ಕಾಮಗಾರಿ ಬಗ್ಗೆ ವಿರೋಧ ಇದ್ದರೂ ಸಹ ಕಾಮಗಾರಿಯನ್ನು ರಾಜ್ಯ ಸರ್ಕಾರ ಮಾಡಲು ಹೊರಟಿದೆ ಎಂದರು.

ಇದರ ವಿರುದ್ಧ ಜಿಲ್ಲೆಯಲ್ಲಿ ವಿರೋಧ ಪಕ್ಷಗಳು ಸೇರಿದಂತೆ ಬಹುತೇಕ ಸಂಘಟನೆಗಳು, ಮಠಾಧೀಶರುಗಳು, ರೈತ ಸಂಘಟನೆಗಳು ಸಾಕಷ್ಟು ಮಟ್ಟದ ಹೋರಾಟಗಳನ್ನು ಮಾಡಿದ್ದರೂ ಸರ್ಕಾರ ಈ ಬಗ್ಗೆ ಗಮನ ಹರಿಸದಿರುವುದು ಮುಂದಿನ ದಿನಗಳಲ್ಲಿ ಬಹುದೊಡ್ಡ ಹೋರಾಟಕ್ಕೆ ಪ್ರೇರಣೆ ನೀಡಿದಂತಾಗಿದೆ. ಹಾಗಾಗಿ ಈ ಯೋಜನೆಯನ್ನು ಸರ್ಕಾರ ಕೂಡಲೇ ರದ್ದು ಮಾಡಿ ಕಾಮಗಾರಿ ಸ್ಥಗಿತಗೊಳಿಸಬೇಕು. ಯಾವುದೇ ಕಾರಣಕ್ಕೂ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆ ಮುಂದುವರೆಯಬಾರದು ಎಂದು ಒತ್ತಾಯಿಸಿದರು.

ನಗರಸಭೆ ಮಾಜಿ ಉಪಾಧ್ಯಕ್ಷ ಸೊಪ್ಪು ಗಣೇಶ್, ಹೋರಾಟ ಸಮಿತಿ ಮುಖಂಡರಾದ ಬಸವರಾಜು, ಶಿವಶಂಕರ್, ತಿಮ್ಮೇಗೌಡ, ವೆಂಕಟಚಲಪತಿ, ಗಾಡಿ ಮಂಜು, ಸಾರ್ಥವಳ್ಳಿ ಶಿವಕುಮಾರ್, ಶಶಿಧರ್, ನಾಗರಾಜು, ಮಡೆನೂರು ವಿನಯ್ ಮತ್ತಿತರರಿದ್ದರು.