ಬಸವರಾಜ ಎಸ್. ನಂದಿಹಾಳ
ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಮಳೆಯ ಪ್ರಮಾಣ ಕುಸಿತದಿಂದಾಗಿ ರೈತರ ಆತಂಕ ಹೆಚ್ಚಿದೆ. ತಾಲೂಕಿನಲ್ಲಿ ಆರಂಭದಲ್ಲಿ ಕೆಲವೆಡೆ ಅಲ್ಪಮಳೆ ಸುರಿದಿದ್ದರಿಂದ ಕೆಲ ರೈತರು ತೊಗರಿ, ಮುಸುಕಿನ ಜೋಳ, ಹತ್ತಿ, ಸೂರ್ಯಕಾಂತಿ, ಶೇಂಗಾ, ಸಜ್ಜೆ ಸೇರಿ ಹಲವು ರೈತರು ಬೀಜ ಬಿತ್ತನೆ ಮಾಡಿ ಮಳೆಗಾಗಿ ಕಾಯುತ್ತಿದ್ದಾರೆ. ಮಳೆಯಾಗದೇ ನಾಟಿಯಾದ ಬೆಳೆಗಳು ಬಾಡುತ್ತಿವೆ. ಕೆಲವು ರೈತರು ಜಮೀನು ಹದ ಮಾಡಿಕೊಂಡು ಮಳೆಗಾಗಿ ಕಾಯುತ್ತಿದ್ದು, ದೇವರ ಮೊರೆ ಹೋಗುತ್ತಿದ್ದಾರೆ.ತಾಲೂಕಿನಲ್ಲಿ ಜೂನ್ ಮತ್ತು ಜುಲೈ ತಿಂಗಳಿನಲ್ಲಿ 105.2 ಮಿ.ಮೀ.ವಾಡಿಕೆ ಮಳೆಯಲ್ಲಿ 82.9 ಮಿ.ಮೀ ಮಾತ್ರ ಮಳೆ ಆಗಿದ್ದು, 21.1 ಮಿ.ಮೀ ಮಳೆ ಕೊರತೆಯಾಗಿದೆ. ಮಳೆ ಕೊರತೆಯಿಂದಾಗಿ ಅಂತರ್ಜಲಮಟ್ಟ ಕುಸಿತಗೊಂಡು ಬಾವಿ, ಬೋರವೆಲ್ ನೀರು ಕಡಿಮೆಯಾಗುತ್ತಿದೆ. ನೀರಾವರಿ ಹೊಂದಿರುವ ರೈತರು ಸಹ ಆತಂಕಕ್ಕೆ ಒಳಗಾಗುವಂತಾಗಿದೆ.
ಅಖಂಡ ತಾಲೂಕಿನಲ್ಲಿ 1769.14 ಕ್ವಿಂಟಲ್ ಗೋವಿನ ಬೀಜದಲ್ಲಿ 1,275 ಕ್ವಿಂಟಲ್ ವಿತರಣೆ ಆಗಿದೆ. 696.6 ಕ್ವಿಂಟಲ್ ತೊಗರಿ ಬೀಜದಲ್ಲಿ 528.8 ಕ್ವಿಂಟಲ್, 4.8 ಕ್ವಿಂಟಲ್ ಹೆಸರು ಬೀಜದಲ್ಲಿ 2.55 ಕ್ವಿಂಟಲ್, 13.16 ಕ್ವಿಂಟಲ್ ಸಜ್ಜೆ ಬೀಜದಲ್ಲಿ 5.836 ಕ್ವಿಂಟಲ್, 24.3 ಕ್ವಿಂಟಲ್ ಸೂರ್ಯಕಾಂತಿ ಬೀಜದಲ್ಲಿ 10.46 ಕ್ವಿಂಟಲ್ ವಿತರಣೆಯಾಗಿದೆ.ಅಖಂಡ ಬಸವನಬಾಗೇವಾಡಿ ತಾಲೂಕಿನಲ್ಲಿ ಕೃಷಿ ಇಲಾಖೆ 1,33,900 ಹೆಕ್ಟೇರ್ ಬಿತ್ತನೆ ಗುರಿ ಇಟ್ಟುಕೊಳ್ಳಲಾಗಿತ್ತು. ಆದರೆ 77,150 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿ ಶೇ.57ರಷ್ಟು ಸಾಧನೆಯಾಗಿದೆ.
ಬೆಳೆವಾರು ಬಿತ್ತನೆಯಾದ ವಿವರ:
ಮುಸುಕಿನ ಜೋಳ 40,092 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿಯಲ್ಲಿ 24,158 ಹೆಕ್ಟೇರ್ ಬಿತ್ತನೆ, ಸಜ್ಜೆ 1,622 ಹೆಕ್ಟೇರ್ ಪೈಕಿ 406, ತೊಗರಿ 72,345 ಹೆಕ್ಟೇರ್ ಪೈಕಿ 31,719, ಹೆಸರು 32 ಹೆಕ್ಟೇರ್ ಪೈಕಿ 10, ಶೇಂಗಾ 298 ಹೆಕ್ಟೇರ್ ಪೈಕಿ 19, ಸೂರ್ಯಕಾಂತಿ 3,277 ಹೆಕ್ಟೇರ್ ಪೈಕಿ 961 ಹೆಕ್ಟೇರ್ ಬಿತ್ತನೆ ಮಾಡಲಾಗಿದೆ. ಹತ್ತಿ 3,269 ಹೆಕ್ಟೇರ್ ಗುರಿ ಮೀರಿ 6,877 ಹೆಕ್ಟೇರ್ ಬಿತ್ತನೆಯಾಗಿದೆ. ನಾಟಿ ಕಬ್ಬು 3,110 ಹೆಕ್ಟೇರ್ ಪೈಕಿ 3,168 ಹೆಕ್ಟೇರ್, ಕುಳೆ ಕಬ್ಬು 9,855 ಹೆಕ್ಟೇರ್ ಪೈಕಿ 9,832 ಹೆಕ್ಟೇರ್ ಬಿತ್ತನೆಯಾಗಿದೆ ಎಂದು ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿ ಗಾಯತ್ರಿ ಶಿಂಧೆ ಮಾಹಿತಿ ನೀಡಿದರು.
ಈಗಾಗಲೆ ಮುಂಗಾರು ಹಂಗಾಮಿನ ಹೆಸರು, ಉದ್ದು ಬಿತ್ತನೆ ಹಂಗಾಮು ಮುಗಿದಿದೆ. ಜು.31ರವರೆಗೂ ತೊಗರಿ, ಮೆಕ್ಕೆಜೋಳ, ಸೂರ್ಯಕಾಂತಿ ಬಿತ್ತನೆ ಮಾಡಬಹುದು. ಈ ವರ್ಷ ನಿರೀಕ್ಷೆಯಷ್ಟು ಮಳೆಯಾಗಿಲ್ಲ. ಈಗಾಗಲೇ ಬಿತ್ತನೆ ಮಾಡಿದ ಬೆಳೆ ಮಳೆಯಿಲ್ಲದ್ದರಿಂದಾಗಿ ಕಮರಿ ಹೋಗುತ್ತಿವೆ. ಬಿತ್ತನೆ ಮಾಡುವ ಹಂಗಾಮು ಮುಗಿದು ಹೋದ ನಂತರ ಬಿತ್ತನೆ ಮಾಡಿದರೆ ನಿರೀಕ್ಷೆಯಷ್ಟು ಇಳುವರಿ ಪಡೆಯಲು ಸಾಧ್ಯವಿಲ್ಲ. ರೈತರು ಬೆಳೆವಿಮೆ ಮಾಡಿಸಬೇಕು. ರೈತರು ತಮ್ಮ ಬೆಳೆ ಸಮೀಕ್ಷೆಯನ್ನು ರೈತ ಆ್ಯಪ್ ಮೂಲಕ ತಾವೇ ಮಾಡಿಕೊಳ್ಳಬೇಕು ಎಂದು ಬಸವನಬಾಗೇವಾಡಿ ರೈತ ಸಂಪರ್ಕ ಕೇಂದ್ರದ ರೈತ ಅಧಿಕಾರಿ ಚಿದಾನಂದ ಹಿರೇಮಠ ಹೇಳಿದರು.ಮುಂಗಾರು ಮಳೆ ನಿರೀಕ್ಷೆಯಲ್ಲಿ ಹತ್ತಿ ಬಿತ್ತನೆ ಮಾಡಿದ್ದೆ. ಮುಂಗಾರು ಮಳೆ ನಿರೀಕ್ಷೆಯಷ್ಟು ಬಾರದೇ ಇರುವುದರಿಂದ ಹತ್ತಿ ಬೆಳೆ ಒಣಗಿ ಹೋಗುತ್ತಿದೆ. ಮುರಿದು ಬಿತ್ತಬೇಕೆಂದರೆ ಹೊಲದಲ್ಲಿ ಬಂಗಾರ ಹುಗಿದು ಬಿತ್ತಬೇಕು. ಮೊದಲೇ ಸಾಕಷ್ಟು ಖರ್ಚು ಮಾಡಿ ಹತ್ತಿ ಬಿತ್ತನೆ ಮಾಡಲಾಗಿದೆ. ಈಗ ಬಂಗಾರ ಬೆಲೆ ಗಗನ ಕುಸುಮವಾಗಿದೆ. ಚಿನ್ನ ಖರೀದಿಸಿ ಹೊಲದಲ್ಲಿ ಹುಗಿಯಬೇಕೆಂದರೆ ಹಣ ಹೊಂದಿಸಲು ಕಷ್ಟವಿದೆ. ಮಳೆ ಬಂದರೆ ಹತ್ತಿ ಬೆಳೆ ಬರುವ ನಿರೀಕ್ಷೆಯಲ್ಲಿರುವುದಾಗಿ ಕಾನ್ನಾಳ ರೈತ ಹಣಮಂತ ಗುಬ್ಬಾ ಹೇಳಿದರು.
ಮುಂಗಾರು ಮಳೆ ಕೈಕೊಟ್ಟಿದ್ದರಿಂದಾಗಿ ಅಂತರ್ಜಲಮಟ್ಟ ಕುಸಿದು ಹೋಗಿರುವುದರಿಂದ ಬಾವಿಯಲ್ಲಿ, ಬೋರವೆಲ್ ನೀರು ಕಡಿಮೆಯಾಗಿದೆ. ಇದರಿಂದಾಗಿ ನಮ್ಮ ತೋಟದಲ್ಲಿರುವ ಕಬ್ಬು ಅಂತರ್ಜಲಮಟ್ಟ ಕುಸಿದು ಹೋಗಿರುವುದರಿಂದ ಒಣಗಿ ಹೋಗುತ್ತಿದೆ ಎಂದು ಕಾನ್ನಾಳ ಗ್ರಾಮದ ಸೋಮನಾಥ ಭಜಂತ್ರಿ ಹೇಳಿದರು.ಮುಂಗಾರು ಹಂಗಾಮಿನಲ್ಲಿ ಮಳೆ ಅಭಾವವಾಗಿದೆ. ಈಗ ಗಾಳಿ ಬೀಸುತ್ತಿರುವುದರಿಂದ ಭೂಮಿ ಒಣಗುತ್ತಿದೆ. ಬಿತ್ತನೆ ಮಾಡಿದ ಬೆಳೆಗಳಿಗೆ ಮಳೆ ತುಂಬಾ ಅಗತ್ಯವಿದೆ. ಜು.15ರವರೆಗೂ ಹಸಿ ಇದ್ದಲ್ಲಿ ತೊಗರಿ ಬಿತ್ತನೆ ಮಾಡಬಹುದು. ಮಳೆಯಾದರೆ ಇಳುವರಿ ಚೆನ್ನಾಗಿ ಬರಲಿದೆ.
-ಎ.ಪಿ. ಬಿರಾದಾರ, ಸಹಾಯಕ ಕೃಷಿ ನಿರ್ದೇಶಕ, ಕೃಷಿ ಇಲಾಖೆ, ಬಸವನಬಾಗೇವಾಡಿ