ದೇಶದ ಅರಿವು ಇಲ್ಲದಿದ್ದರೆ ಉತ್ತಮ ಸಮಾಜ ನಿರ್ಮಾಣ ಅಸಾಧ್ಯ: ಶಾಸಕ ಶಿವರಾಮ ಹೆಬ್ಬಾರ್‌

| Published : Jan 17 2024, 01:46 AM IST

ದೇಶದ ಅರಿವು ಇಲ್ಲದಿದ್ದರೆ ಉತ್ತಮ ಸಮಾಜ ನಿರ್ಮಾಣ ಅಸಾಧ್ಯ: ಶಾಸಕ ಶಿವರಾಮ ಹೆಬ್ಬಾರ್‌
Share this Article
  • FB
  • TW
  • Linkdin
  • Email

ಸಾರಾಂಶ

ಇಡೀ ವಿಶ್ವವೇ ಪುಟ್ಟ ದೇಶವಾಗುತ್ತಿರುವ ವೈಜ್ಞಾನಿಕ ಯುಗದಲ್ಲಿ ಇನ್ನಾದರೂ ನಾವು, ನಮ್ಮ ದೇಶ, ನೆಲ-ಜಲದ ಕುರಿತಾಗಿ ಅರಿವು ಮೂಡಿಸಿಕೊಳ್ಳದಿದ್ದರೆ ಉತ್ತಮ ಸಮಾಜ ನಿರ್ಮಾಣದ ಕಾರ್ಯ ಸಾಕಾರ ಆಗದು.

ಯಲ್ಲಾಪುರ:

ಆಕಸ್ಮಿಕವಾಗಿ ಹುಟ್ಟಿದ ಸಂಸ್ಥೆಯೊಂದು ಅದರ ಸಂಸ್ಥಾಪಕರ ಛಲದಿಂದ ಕೆಲವೇ ವರ್ಷಗಳಲ್ಲಿ ನಿರೀಕ್ಷೆಗಿಂತ ಯಶ್‌ ಸಾಧಿಸಿದ್ದು ಅತ್ಯಂತ ವಿಶೇಷ ಸಂಗತಿ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.ಉಮ್ಮಚಗಿ ಬಳಿಯ ಹಿರೇಸರದ ಕಾನಬೇಣದಲ್ಲಿ ಕೋಟೇಮನೆಯ ಶ್ರೀ ಮಹಾಗಣಪತಿ ಸಂಗೀತ ಪ್ರತಿಷ್ಠಾನದ ಮನಸ್ವಿನಿ ವಿದ್ಯಾನಿಲಯದ ೬ನೇ ವಾರ್ಷಿಕೋತ್ಸವ ಮನಸ್ವಿನಿ ಹಬ್ಬ ಉದ್ಘಾಟಿಸಿ ಮಾತನಾಡಿದರು.ಶಾಲಾ-ಕಾಲೇಜುಗಳಲ್ಲಿ ಇತ್ತೀಚೆಗೆ ಕೇವಲ ವ್ಯಾವಹಾರಿಕತೆಯೇ ಮುಖ್ಯವಾಗಿರುವ ಪ್ರಸ್ತುತ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಆರಂಭಗೊಂಡಿರುವ ಶಿಕ್ಷಣ ಸಂಸ್ಥೆ ಶಿಕ್ಷಣದೊಂದಿಗೆ ವಿದ್ಯಾರ್ಥಿಗಳಿಗೆ ಸಂಸ್ಕೃತಿಯ ಅರಿವು ಮೂಡಿಸುವ ಚಿಂತನೆ ಹೊಂದಿರುವುದು ಪ್ರಮುಖವಾದುದು. ಇಡೀ ವಿಶ್ವವೇ ಪುಟ್ಟ ದೇಶವಾಗುತ್ತಿರುವ ವೈಜ್ಞಾನಿಕ ಯುಗದಲ್ಲಿ ಇನ್ನಾದರೂ ನಾವು, ನಮ್ಮ ದೇಶ, ನೆಲ-ಜಲದ ಕುರಿತಾಗಿ ಅರಿವು ಮೂಡಿಸಿಕೊಳ್ಳದಿದ್ದರೆ ಉತ್ತಮ ಸಮಾಜ ನಿರ್ಮಾಣದ ಕಾರ್ಯ ಸಾಕಾರ ಆಗದು ಎಂದರು.ವಿದ್ಯಾರ್ಥಿಗಳ ಕೈಬರಹದ ಪತ್ರಿಕೆ ಪಲ್ಲವಿ ಬಿಡುಗಡೆಗೊಳಿಸಿದ ವಿಧಾನ ಪರಿಷತ್‌ ಸದಸ್ಯ ಶಾಂತಾರಾಮ ಸಿದ್ದಿ, ಅತ್ಯುತ್ತಮ ಪರಿಶ್ರಮ ಮತ್ತು ಸಾಧಿಸುವ ಛಲದ ಕಾರಣದಿಂದ ಆರಂಭಗೊಂಡಿರುವ ಶಿಕ್ಷಣ ಸಂಸ್ಥೆ ಇಂದು ತನ್ನ ಯಶಸ್ಸಿನ ತೋರಣವನ್ನು ಸಾಬೀತುಗೊಳಿಸಿದೆ. ಬಿಂದುರೂಪದಲ್ಲಿ ಆರಂಭಗೊಂಡ ಪ್ರಯತ್ನವು ಇಂದು ಗಂಗಾ ನದಿಯಾಗಿ ಮುಂದೆ ಮತ್ತಷ್ಟು ಅಭಿವೃದ್ಧಿಯ ದಿಸೆಯಲ್ಲಿ ಸಾಗಲಿ ಎಂದು ಹಾರೈಸಿದರು.ಬಿಇಒ ಎನ್.ಆರ್. ಹೆಗಡೆ ಮಾತನಾಡಿ, ಪಾಲಕರು ಕೇವಲ ಮಾಹಿತಿಗಾಗಿ ಮಾತ್ರ ಮಕ್ಕಳನ್ನು ಶಾಲೆಗೆ ಕಳುಹಿಸುವಂತಾಗಬಾರದು. ಮಕ್ಕಳ ಮೇಲೆ ಒತ್ತಡ ಹೇರದೇ, ಅವರ ಇಚ್ಛೆಯಂತೆ ಗುರಿ ತಲುಪಲು ಪ್ರೇರಣೆ ನೀಡಿ ಎಂದರು.ಗ್ರಾಪಂ ಅಧ್ಯಕ್ಷರಾದ ಸತ್ಯನಾರಾಯಣ ಹೆಗಡೆ, ಕುಪ್ಪಯ್ಯ ಪೂಜಾರಿ ಮಾತನಾಡಿದರು. ಗಣ್ಯರು ವಿವಿಧ ಸ್ಪರ್ಧಾ ವಿಜೇತ ಮತ್ತು ಸಾಧಕ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ಅತ್ಯುತ್ತಮ ಸಾಧನೆ ಮಾಡಿದ ವಾರಿಧಿ ತಂಡದ ವಿದ್ಯಾರ್ಥಿಗಳು ವೀರಾಗ್ರಣಿ ಪ್ರಶಸ್ತಿಗೆ ಭಾಜನರಾದರು.ಇದೇ ವೇಳೆ ಶಾಲೆಗೆ ದಾನ ನೀಡಿದ ವಿಶ್ವಾಸ ಬಲಸೆ ಮತ್ತು ಪ್ರಭಾಕರರಾವ್ ಮಂಗಳೂರು ಮತ್ತಿತರರನ್ನು ಸನ್ಮಾನಿಸಲಾಯಿತು. ಸಿಆರ್‌ಪಿ ವಿಷ್ಣು ಭಟ್ಟ, ಸಂಸ್ಥೆಯ ಅಧ್ಯಕ್ಷೆ ರೇಖಾ ಭಟ್ಟ ಕೋಟೇಮನೆ, ಗಣಪತಿ ಭಟ್ಟ ಕೋಟೇಮನೆ, ಶಿಕ್ಷಕಿ ನೇತ್ರಾವತಿ ಭಟ್ಟ, ವಿಜೇತಾ ಹೆಗಡೆ, ವೀಣಾ ಭಟ್ಟ ಇದ್ದರು.