ಸಾರಾಂಶ
ಯಲ್ಲಾಪುರ: ೭೫ ವರ್ಷ ಒಂದು ಶಾಲೆಗೆ ಸಣ್ಣದಲ್ಲ. ಅನೇಕ ಹಿರಿಯ ಶಿಕ್ಷಕರು ಇಲ್ಲಿ ಸೇವೆ ಸಲ್ಲಿಸಿದ್ದಾರೆ. ಅವರ ಸೇವೆ ಅನನ್ಯವಾದುದು. ಅಂತಹ ಪೂಜ್ಯ ಗುರುಗಳಲ್ಲಿ ಕಲಿತ ಸಾಧಕರು ಅನೇಕರಿದ್ದಾರೆ. ೭೫ ವರ್ಷಗಳ ಹಿಂದೆ ಈ ಶಾಲೆಯನ್ನು ಕಟ್ಟಿ ಬೆಳೆಸಿದವರ ಪರಿಶ್ರಮ ಎಂದೂ ಮರೆಯಲಾಗದು ಎಂದು ಶಾಸಕ ಶಿವರಾಮ ಹೆಬ್ಬಾರ ತಿಳಿಸಿದರು.ಜ. ೧೦ರಂದು ತಾಲೂಕಿನ ಕಣ್ಣೀಗೇರಿ ಗ್ರಾಪಂ ವ್ಯಾಪ್ತಿಯ ಕೊಡಸೆಯ ಹಿರಿಯ ಪ್ರಾಥಮಿಕ ಶಾಲೆಯ ಅಮೃತ ಮಹೋತ್ಸವ ಸಮಾರಂಭ ಉದ್ಘಾಟಿಸಿ, ಹಿರಿಯರನ್ನು, ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿ, ಮಾತನಾಡಿದರು.ಅಂದು ಯಾವುದೇ ವಾಹನ ಸೌಲಭ್ಯ ಇಲ್ಲದ ಕಾಲಘಟ್ಟದಲ್ಲಿ ಸುತ್ತಮುತ್ತಲಿನ ಹಿರಿಯರ ಸಹಕಾರ ಪಡೆದು, ಕೈಟಕರ್ ಕುಟುಂಬ ಶಾಲೆಯನ್ನು ಸ್ಥಾಪಿಸುವುದಕ್ಕೆ ಕಾರಣರಾಗಿರುವುದು ಮಹತ್ವದ ಕಾರ್ಯವಾಗಿದೆ. ವಿದ್ಯೆ ಇಲ್ಲದೇ ಹೋದರೆ ಸಮಾಜದಲ್ಲಿ, ಯಾವುದೇ ಕ್ಷೇತ್ರದಲ್ಲೂ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಸರ್ಕಾರದೊಂದಿಗೆ ಸಮಾಜವೂ ಜತೆಗೆ ನಿಂತಾಗ ಮಾತ್ರ ಶಾಲೆ ಅಭಿವೃದ್ಧಿ ಹೊಂದಲು ಸಾಧ್ಯ. ಇಲ್ಲಿ ಆರಂಭಿಕ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದ ೯೨ರ ಇಳಿವಯಸ್ಸಿನ ಪಾಂಡು ಮಾಸ್ತರರು ಇಲ್ಲಿರುವುದು ಹೆಚ್ಚು ಆನಂದವಾಗುತ್ತದೆ ಎಂದರು.
ಸಂಕಲ್ಪ ಸಂಸ್ಥೆ ಅಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, ಮಕ್ಕಳು ಉನ್ನತ ಮಟ್ಟಕ್ಕೆ ಮುಟ್ಟಲು ಇಂತಹ ಕನ್ನಡ ಶಾಲೆಗಳೇ ಮೆಟ್ಟಿಲು. ಎಲ್ಲ ಶಾಲೆಗಳ ಮೂಲ ಇತಿಹಾಸ ದಾಖಲೀಕರಣವಾಗಬೇಕು. ಇಂತಹ ಕುಗ್ರಾಮದಲ್ಲಿ ಅಂದು ಹಿರಿಯರು ಕಟ್ಟಿದ ಶಾಲೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಶ್ರೇಷ್ಠ ನಾಗರಿಕರಾಗಿದ್ದಾರೆ ಎಂದರು.ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಆರ್. ಹೆಗಡೆ ಮಾತನಾಡಿ, ಗ್ರಾಮಾಂತರದ ಶಾಲೆಯಾಗಿ ಅತಿಹೆಚ್ಚಿನ ಸಂಖ್ಯೆಯ ವಿದ್ಯಾಥಿಗಳನ್ನು ಹಿಡಿದಿಟ್ಟುಕೊಂಡಿರುವ ಶಾಲೆ ಇದಾಗಿದ್ದು, ಸಭಾಪತಿ ಬಸವರಾಜ ಹೊರಟ್ಟಿಯವರು ಈ ಶಾಲೆಯ ಕುರಿತು ಶ್ಲಾಘನೆ ವ್ಯಕ್ತಪಡಿಸಿದ್ದಾರೆ ಎಂದರು.ಇದೇ ಸಂದರ್ಭದಲ್ಲಿ ಅಮೃತ ಮಹೋತ್ಸವದ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಾಯಿತು. ಮಹಾದಾನಿಗಳಿಗೆ, ಶಾಲೆಯಲ್ಲಿ ಸೇವೆ ಸಲ್ಲಿಸಿದ ಶಿಕ್ಷಕರನ್ನು ಸನ್ಮಾನಿಸಲಾಯಿತು.ವೇದಿಕೆಯಲ್ಲಿ ಗ್ರಾಪಂ ಅಧ್ಯಕ್ಷೆ ಸುನಂದಾ ಮರಾಠಿ, ತಾಪಂ ಮಾಜಿ ಅಧ್ಯಕ್ಷ ರವಿ ಕೈಟ್ಕರ್, ಗ್ರಾಪಂ ಸದಸ್ಯರಾದ ವಿಶ್ವೇಶ್ವರ ಹೆಗಡೆ, ನಾಗವೇಣಿ ಪಟಗಾರ, ಉಪನಿರ್ದೇಶಕ ಬಸವರಾಜ ಪಿ., ನೌಕರರ ಸಂಘದ ಅಧ್ಯಕ್ಷ ಸಂಜೀವಕುಮಾರ ಹೊಸ್ಕೇರಿ, ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಆರ್.ಆರ್. ಭಟ್ಟ, ಪ್ರಕಾಶ ತಾರಿಕೊಪ್ಪ, ಸಂತೋಷ ಜಿಗಳೂರ, ಪ್ರಶಾಂತ ಜಿ.ಎನ್., ದಿಲೀಪ ದೊಡ್ಮನಿ, ಪ್ರಶಾಂತ ಪಟಗಾರ ಮುಂತಾದವರು ಉಪಸ್ಥಿತರಿದ್ದರು.ಎಸ್‌ಡಿಎಂಸಿ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ಟ ಮೆಣಸುಪಾಲ ಸ್ವಾಗತಿಸಿದರು. ಶಿಕ್ಷಕರಾದ ಚಂದ್ರಹಾಸ ನಾಯ್ಕ, ಭಾಸ್ಕರ ನಾಯ್ಕ ನಿರ್ವಹಿಸಿದರು. ಮುಖ್ಯ ಶಿಕ್ಷಕಿ ಇಂದಿರಾ, ನಿವೃತ್ತ ಶಿಕ್ಷಕ ಜಿ.ಎಸ್. ಸ್ವಾಮಿ ಸಹಕರಿಸಿದರು. ಶ್ವೇತಾ ದೇಶಭಂಡಾರಿ ವಂದಿಸಿದರು.