ಸಾರಾಂಶ
ಕನ್ನಡಪ್ರಭ ವಾರ್ತೆ ಆಲೂರು
ರಕ್ತನಾಳಗಳಲ್ಲಿ ರಕ್ತವು ಸದಾ ಸರಾಗವಾಗಿ ಹರಿಯುವಂತೆ ಕಾಪಾಡಿಕೊಂಡರೆ ಹೃದಯಾಘಾತ ಸಂಭವಿಸುವುದನ್ನು ತಡೆಯಬಹುದು ಎಂದು ಹೃದಯ ತಜ್ಞ ವೈದ್ಯ ಡಾ. ನಿರೂಪ್ ತಿಳಿಸಿದರು.ಪಟ್ಟಣದ ಆಲೂರು ಕ್ಲಿನಿಕ್ ಆವರಣದಲ್ಲಿ ಇಂಡಿಯಾನ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಹಾರ್ಟ್ ಸೆಂಟರ್, ಹಾಸನ ಮತ್ತು ಆಲೂರು ಕ್ಲಿನಿಕ್, ಆಲೂರು ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಉಚಿತ ಹೃದಯ ಮತ್ತು ಮೂಳೆ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು. ಅತಿಯಾಗಿ ಕೊಬ್ಬಿನಂಶವುಳ್ಳ ಆಹಾರ ಸೇವಿಸುವುದು, ಧೂಮಪಾನ, ಮದ್ಯಪಾನ ಮಾಡುವುದು, ಕನಿಷ್ಠ ವ್ಯಾಯಮ ಮಾಡದಿರುವುದು, ಹೆಚ್ಚು ಸಮಯ ಒಂದೇ ಜಾಗದಲ್ಲಿ ಕುಳಿತುಕೊಳ್ಳುವುದು, ಮೈದಾಹಿಟ್ಟು ಬಳಕೆ, ಕಳಪೆ ಎಣ್ಣೆಯಿಂದ ತಯಾರಿಸಿದ ಆಹಾರ ಸೇವಿಸುವುದು, ಒಮ್ಮೆ ಕರಿದ ಎಣ್ಣೆಯನ್ನು ಪುನಃ ಉಪಯೋಗಿಸುವುದು, ಅತಿಯಾದ ಮಾಂಸಾಹಾರ ಸೇವನೆ, ಅತಿಯಾಗಿ ಸಕ್ಕರೆ ಬಳಸುವುದು ಮತ್ತು ಜಂಕ್‌ಫುಡ್ ಸೇವನೆಯಿಂದ ಹೃದಯಾಘಾತ ಸಂಭವಿಸುತ್ತದೆ ಎಂದು ಎಚ್ಚರಿಸಿದರು.
ಪ್ರತಿದಿನ ಕನಿಷ್ಟ ಅರ್ಧ ಗಂಟೆ ಓಡಾಡುವುದು, ವ್ಯಾಯಾಮ ಮಾಡುವುದು, ಆದಷ್ಟು ಆಹಾರದಲ್ಲಿ ಎಣ್ಣೆ ಕಡಿಮೆ ಬಳಸಬೇಕು. ದೇಹದ ತೂಕ ಅತಿಯಾಗದಂತೆ ಜಾಗ್ರತೆ ವಹಿಸಬೇಕು. ದಿನಕ್ಕೆ ಕನಿಷ್ಟ ಎಂಟು ಗಂಟೆ ನಿದ್ರೆ ಮಾಡಿದರೆ ಹೃದಯಾಘಾತದಿಂದ ತಪ್ಪಿಸಿಕೊಳ್ಳಬಹುದು. ಕೆಲವೊಮ್ಮೆ ಮಗು ತಾಯಿ ಹೊಟ್ಟೆಯಲ್ಲಿದ್ದಾಗಲೆ ಹೃದಯ ತೂತಾತ್ತದೆ. ಇದಕ್ಕೆ ಚಿಕಿತ್ಸೆ ಲಭ್ಯವಿದೆ ಎಂದರು.ಡಾ. ನಯೀಮ್ ಸಿದ್ದಿಖ್ ಮಾತನಾಡಿ, ಮನುಷ್ಯನ ಪ್ರಾಯ ೫೦-೬೦ ದಾಟಿದ ನಂತರ ದೇಹದ ಮೂಳೆಗಳು ಸವೆಯುತ್ತವೆ. ಬೆಳಗ್ಗೆ ವೇಳೆಯಲ್ಲಿ ಕನಿಷ್ಠ ೨ ಗಂಟೆ ಕಾಲ ಸೂರ್ಯನ ಕಿರಣ ನಮ್ಮ ದೇಹವನ್ನು ಸ್ಪರ್ಶಿಸಿದಾಗ ವಿಟಮಿನ್-೧೨ ಕೊರತೆ ನಿವಾರಣೆಯಾಗುತ್ತದೆ. ಇದರಿಂದ ಮೂಳೆಗಳು ಬಲಿಷ್ಠವಾಗಿ ಬೆಳೆಯುತ್ತವೆ. ಇತ್ತೀಚೆಗೆ ವಿಶೇಷವಾಗಿ ಮಹಿಳೆಯರು ಮನೆಗಳಲ್ಲಿ ನಿಂತು ಅಡಿಗೆ ಮಾಡುವುದು ರೂಢಿಯಾಗಿರುವುದರಿಂದ ಶೇ. ೮೦ರಷ್ಟು ಮಂಡಿ ನೋವಿನಿಂದ ಬಳಲುತ್ತಿದ್ದಾರೆ. ಕುಳಿತು ಅಡಿಗೆ ಮಾಡಲು ಸ್ಟೂಲ್‌ಗಳಿವೆ. ಅವುಗಳನ್ನು ಸಾಧ್ಯವಾದಷ್ಟು ಬಳಸುವುದರಿಂದ ಮಂಡಿ ನೋವು ಕಡಿಮೆಯಾಗುತ್ತದೆ. ಪೌಷ್ಠಿಕ ಆಹಾರ ಸೇವಿಸುವುದರಿಂದ, ದೇಹದ ತೂಕ ಅತಿಯಾಗದಂತೆ ಜಾಗ್ರತೆ ವಹಿಸುವುದರಿಂದ ಮೂಳೆ ಸವೆತವನ್ನು ತಪ್ಪಿಸಬಹುದು ಎಂದರು.
ಸುಮಾರು ೧೫೦ ಜನ ಉಚಿತ ತಪಾಸಣೆಯಲ್ಲಿ ಪಾಲ್ಗೊಂಡಿದ್ದರು. ದಾದಿಯರಾದ ಭವಾನಿ, ಪವಿತ್ರ, ತಾರಾಮಣಿ, ಪ್ರಿಯಾಂಕ, ಲಕ್ಷ್ಮಿ ಸಹಕಾರ ನೀಡಿದರು.