ಪ್ರಸ್ತುತ ಸಮಾಜದಲ್ಲಿ ಅಕ್ಷರ ಜ್ಞಾನವಿಲ್ಲದಿದ್ದರೇ ಬದುಕು ದುಸ್ತರ-ತಹಸೀಲ್ದಾರ್‌

| Published : Jun 01 2024, 12:45 AM IST

ಪ್ರಸ್ತುತ ಸಮಾಜದಲ್ಲಿ ಅಕ್ಷರ ಜ್ಞಾನವಿಲ್ಲದಿದ್ದರೇ ಬದುಕು ದುಸ್ತರ-ತಹಸೀಲ್ದಾರ್‌
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಸ್ತುತ ಸಮಾಜದಲ್ಲಿ ಅಕ್ಷರ ಜ್ಞಾನವಿಲ್ಲದಿದ್ದರೇ ಬದುಕು ಅತ್ಯಂತ ದುಸ್ತರ, ಶಿಕ್ಷಣವಿಲ್ಲದಿದ್ದರೇ ಮೌಲ್ಯರಹಿತ ಬದುಕು ಸಾಗಿಸಬೇಕಾಗುತ್ತದೆ. ಹೀಗಾಗಿ ಭವಿಷ್ಯವನ್ನು ರೂಪಿಸಿಕೊಳ್ಳುವಲ್ಲಿ ಶಿಕ್ಷಣ ಪ್ರಮುಖ ಮಾನದಂಡವಾಗಲಿದೆ ಎಂದು ತಹಸೀಲ್ದಾರ್ ಪಟ್ಟರಾಜೇಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.

ಬ್ಯಾಡಗಿ: ಪ್ರಸ್ತುತ ಸಮಾಜದಲ್ಲಿ ಅಕ್ಷರ ಜ್ಞಾನವಿಲ್ಲದಿದ್ದರೇ ಬದುಕು ಅತ್ಯಂತ ದುಸ್ತರ, ಶಿಕ್ಷಣವಿಲ್ಲದಿದ್ದರೇ ಮೌಲ್ಯರಹಿತ ಬದುಕು ಸಾಗಿಸಬೇಕಾಗುತ್ತದೆ. ಹೀಗಾಗಿ ಭವಿಷ್ಯವನ್ನು ರೂಪಿಸಿಕೊಳ್ಳುವಲ್ಲಿ ಶಿಕ್ಷಣ ಪ್ರಮುಖ ಮಾನದಂಡವಾಗಲಿದೆ ಎಂದು ತಹಸೀಲ್ದಾರ್ ಪಟ್ಟರಾಜೇಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣದ ಎಸ್ ಜೆಜೆಎಂ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ 2024-25ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ನಮ್ಮದೇ ನಿಜ ಜೀವನದ ಸಂದರ್ಭಗಳನ್ನು ನಿಭಾಯಿಸಲು ಶಿಕ್ಷಣ ಸಹಕರಿಸಲಿದೆ, ಅದರಲ್ಲೂ ಮೌಲ್ಯಾಧಾರಿತ ಶಿಕ್ಷಣ ನೀಡುವಂತಹ ಶಾಲೆಗಳು ವ್ಯಕ್ತಿಯ ವ್ಯಕ್ತಿತ್ವ ಬೆಳವಣಿಗೆಗೆ ಒತ್ತು ನೀಡುವ ತರಬೇತಿ ನೀಡುವ ಕೇಂದ್ರಗಳಿದ್ದಂತೆ ಎಂದರು.

ಸಾಕ್ಷರತೆ ಎಂದರೆ ಕೇವಲ ಅಕ್ಷರ ಕಲಿಕೆ‌ಯಲ್ಲ: ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಜಿ. ಕೋಟಿ ಮಾತನಾಡಿ, ಸಾಕ್ಷರತೆ ಎಂದರೆ ಕೇವಲ ಅಕ್ಷರ ಕಲಿಕೆ‌ಯಲ್ಲ, ಬದಲಾಗಿ ಉತ್ತಮ ವ್ಯಕ್ತಿತ್ವಕ್ಕೆ ಪೂರಕವಾಗುವ ಗುಣಗಳನ್ನು ರೂಢಿಸಿಕೊಳ್ಳುವುದಾಗಿದೆ. ಮಕ್ಕಳು ವ್ಯಕ್ತಿತ್ವ ವಿಕಸನ ವಿಷಯದಲ್ಲಿ ಉತ್ತಮ ಮೌಲ್ಯ ಅಳವಡಿಸಿಕೊಳ್ಳುವುದು ಇಂದಿನ ಅಗತ್ಯತೆಗಳಲ್ಲಿ ಒಂದಾಗಿದ್ದು ಪರಿಪೂರ್ಣ ಶಿಕ್ಷಣದಿಂದ ಮಕ್ಕಳ ವರ್ತನೆ ಹೇಗಿರಬೇಕು ಎಂಬುದರ ಅರಿವನ್ನು ಶಿಕ್ಷಕರಾದ ನಾವು ಹೊಂದಿರಬೇಕಾಗಿರುವುದು ಪ್ರಮುಖವಾಗಿದೆ ಎಂದರು.

ಅಕ್ಷರ ದಾಸೋಹಾಧಿಕಾರಿ ಎನ್. ತಿಮ್ಮಾರೆಡ್ಡಿ, ಇಸಿಒ ಬಸವರಾಜ ಸೋಮಕ್ಕಳವರ, ಎಸ್ ಜೆ.ಜೆ.ಎಂ.ಪ್ರಾಚಾರ್ಯ ಡಾ.ಎಂ.ಎಫ್. ಬಂಡೆಪ್ಪನವರ, ಮುಖ್ಶ ಶಿಕ್ಷಕ ಈರಣ್ಣ ಅಕ್ಕಿ, ವೈ.ಟಿ. ಹೆಬ್ಬಳ್ಳಿ ಸೇರಿದಂತೆ ಶಾಲಾ ಸಿಬ್ಬಂದಿಗಳು ಪಾಲ್ಗೊಂಡಿದ್ದರು.170 ಕ್ಕೂ ಅಧಿಕ ಶಾಲೆಗಳಲ್ಲಿ ಪ್ರಾರಂಭೋತ್ಸವ: ತಾಲೂಕಿನಾದ್ಯಂತ ಇರುವ ಸುಮಾರು 170ಕ್ಕೂ ಅಧಿಕ ಸರ್ಕಾರಿ, ಸರ್ಕಾರಿ ಅನುದಾನಿತ, ಪ್ರಾಥಮಿಕ ಮತ್ತು ಪ್ರೌಢಶಾಲಾ ಶಾಲೆಗಳಲ್ಲಿ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮವು ಶುಕ್ರವಾರ ಸಂಭ್ರಮದಿಂದ ನೆರವೇರಿತು. ಹಸಿರು ತೋರಣ ಕಟ್ಟಿ ಮಧುವಣಗಿತ್ತಿಯಂತೆ ತಾಲೂಕಿನ ಬಹುತೇಕ ಶಾಲೆಗಳಲ್ಲಿ ಸಿಂಗಾರಗೊಳಲಾಗಿತ್ತು. ಶಾಲೆಗೆ ಬಂದ ಮಕ್ಕಳನ್ನು ಶಿಕ್ಷಕರು ಹೂಗಳನ್ನು ನೀಡುವ ಮೂಲಕ ಸ್ವಾಗತಿಸಿದ್ದು ವಿಶೇಷವಾಗಿತ್ತು. ಪಟ್ಟಣದ ಎಸ್‌ಜೆಜೆಎಂ ಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಜಿ. ಕೋಟಿ ಮಕ್ಕಳಿಗೆ ಪಠ್ಯಪುಸ್ತಕಗಳನ್ನ ವಿತರಿಸಿ ಪ್ರಸಕ್ತ ವರ್ಷದ ಶಾಲಾರಂಭಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು.