2025 ಉತ್ತರ ಕನ್ನಡ ಜಿಲ್ಲೆಯ ಪಾಲಿಗೆ ನೋವು-ನಲಿವುಗಳಿಂದ ಕೂಡಿದೆ. ದುರಂತಗಳು ತಲ್ಲಣಗೊಳಿಸಿದೆ, ಉತ್ಸವಗಳು ಉಲ್ಲಾಸ ಮೂಡಿಸಿದವು.
ಕೇಣಿ, ಹೊನ್ನಾವರ ಬಂದರು, ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗಳ ವಿರುದ್ಧ ಭಾರಿ ಪ್ರತಿಭಟನೆ, ವಿರೋಧ
ವಸಂತಕುಮಾರ್ ಕತಗಾಲ
ಕನ್ನಡಪ್ರಭ ವಾರ್ತೆ ಕಾರವಾರ
2025 ಉತ್ತರ ಕನ್ನಡ ಜಿಲ್ಲೆಯ ಪಾಲಿಗೆ ನೋವು-ನಲಿವುಗಳಿಂದ ಕೂಡಿದೆ. ದುರಂತಗಳು ತಲ್ಲಣಗೊಳಿಸಿದೆ, ಉತ್ಸವಗಳು ಉಲ್ಲಾಸ ಮೂಡಿಸಿದವು. ಜಿಲ್ಲೆಯಲ್ಲಿ ಗಮನಾರ್ಹವಾದ ಅಭಿವೃದ್ಧಿ ಯೋಜನೆಗಳು ಬಾರದೆ ಇದ್ದರೂ, ಕೇಣಿ, ಹೊನ್ನಾವರ ಬಂದರು ಯೋಜನೆ, ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗಳು ಭಾರಿ ಪ್ರತಿಭಟನೆ, ವಿರೋಧಕ್ಕೆ ಕಾರಣವಾಯಿತು. ಇಡೀ ಜಿಲ್ಲೆಯ ಪ್ರಮುಖ ಘಟನೆಗಳ ವಿದ್ಯಮಾನ ಇಲ್ಲಿದೆ.ಜನವರಿಜನವರಿ 22ರಂದು ಇಡೀ ಜಿಲ್ಲೆಯ ಜನತೆಗೆ ಬರಸಿಡಿಲಿನಂತೆ ಎರಗಿದ್ದು ತರಕಾರಿ ತುಂಬಿದ್ದ ಲಾರಿಯ ಅಪಘಾತ. ಯಲ್ಲಾಪುರ ತಾಲೂಕಿನ ಅರಬೈಲ್ ಬಳಿ ಹಾವೇರಿಯಿಂದ ಕುಮಟಾಕ್ಕೆ ತರಕಾರಿ ಹೊತ್ತು ತರುತ್ತಿದ್ದ ಲಾರಿ ಉರುಳಿಬಿದ್ದು 10 ಜನರು ಬಲಿಯಾಗಿ, 18 ಜನರು ಗಾಯಗೊಂಡರು. ಈ ಘಟನೆಯಿಂದ ಇಡೀ ಜಿಲ್ಲೆ ತಲ್ಲಣಗೊಂಡಿತು.
ಮುಂಡಗೋಡದ ಅಂಗನವಾಡಿಯೊಂದರಲ್ಲಿ ಜ.1ರಂದು ಬಾಲಕಿಗೆ ಹಾವು ಕಚ್ಚಿ ಮೃತಪಟ್ಟಿದ್ದು, ವೈದ್ಯರು ಚಿಕಿತ್ಸೆ ಸಮರ್ಪಕವಾಗಿ ನೀಡಿಲ್ಲ ಎಂದು ವೈದ್ಯರ ವಿರುದ್ಧ ಸ್ಥಳೀಯರು ಪ್ರತಿಭಟನೆ ನಡೆಸಿದರು.ಹೊನ್ನಾವರದ ಸೂಳೆಮುರ್ಕಿ ತಿರುವಿನಲ್ಲಿ ಜ.6 ರಂದು ಲಾರಿ ಉರುಳಿಬಿದ್ದು ಇಬ್ಬರು ಮೃತಪಟ್ಟು, ಮೂವರು ಗಂಭೀರವಾಗಿ ಗಾಯಗೊಂಡರು.ಜೋಯಾಡಾದಲ್ಲಿ ಜ.8ರಂದು ಅಪರೂಪದ ಗಡ್ಡೆ ಗೆಣಸು ಮೇಳ ನಡೆಯಿತು. ಹಳಿಯಾಳ ಆದಿಶಕ್ತಿ ಪೀಠದ ಗುರು ಶ್ರೀ ಕೃಷ್ಣಾನಂದ ಭಾರತಿ ಶ್ರೀಗಳು ಜ.8ರಂದು ವಿಧಿವಶರಾದರು.ಮುಂಡಗೋಡ ಎನ್ ಎಂ ಡಿ ಗ್ರೂಪ್ ಮಾಲೀಕ ಜಮೀರ ದರ್ಗಾವಾಲೆ ಎನ್ನುವವರನ್ನು ಸಿನಿಮೀಯ ರೀತಿಯಲ್ಲಿ ಅಪಹರಣ ಮಾಡಲಾಯಿತು.
ಕಾರವಾರ ಬಳಿಯ ಗ್ರಾಸಿಂ ಇಂಡಸ್ಟ್ರೀಯಿಂದ ಜ.11 ರಂದು ಅನಿಲ ಸೋರಿಕೆಯಾಗಿ ಕೆಲ ಕಾರ್ಮಿಕರು ಅಸ್ವಸ್ಥರಾದರು.ಹೊನ್ನಾವರದ ಸಾಲ್ಕೋಡು ಗ್ರಾಮದಲ್ಲಿ ಗರ್ಭ ಧರಿಸಿದ ಗೋವನ್ನು ದುಷ್ಕರ್ಮಿಗಳು ಹತ್ಯೆ ಮಾಡಿದರು. ಈ ಘಟನೆ ಜಿಲ್ಲೆಯಾದ್ಯಂತ ಆಕ್ರೋಶಕ್ಕೆ ಕಾರಣವಾಯಿತು.ಫೆಬ್ರವರಿ
ಕಾರವಾರದಲ್ಲಿ ಫೆ.5 ರಿಂದ 9ರ ತನಕ ಕರಾವಳಿ ಸಮುದ್ರ ಉತ್ಸವ ನಡೆಯಿತು. ನೃತ್ಯ, ಹಾಡು, ಯಕ್ಷಗಾನ ಕಲೆಗಳನ್ನು ಪ್ರದರ್ಶಿಸಲಾಯಿತು.ಫೆ.4ರಿಂದ 15ರ ತನಕ ಜೋಯಿಡಾ ತಾಲೂಕಿನ ಉಳವಿ ಜಾತ್ರೆ ವಿಜೃಂಭಣೆಯಿಂದ ನಡೆಯಿತು. ಫೆ. 13 ರಂದು ನಡೆದ ಮಹಾರಥೋತ್ಸವದಲ್ಲಿ ಲಕ್ಷಾಂತರ ಭಕ್ತರು ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಫೆ.15ರಿಂದ ಅರಣ್ಯವಾಸಿಗಳ ಕಾನೂನು ಜಾಗೃತಿ ಜಾಥಾ ಜಿಲ್ಲೆಯಾದ್ಯಂತ ನಡೆಯಿತು.ಐಎನ್ಎಸ್ ಕದಂಬ ನೌಕಾನೆಲೆಯ ಮಾಹಿತಿಯನ್ನು ಪಾಕಿಸ್ತಾನದ ಗೂಢಚಾರರಿಗೆ ಕಳುಹಿಸಿದ ಆರೋಪದ ಮೇಲೆ ಕಾರವಾರದ ವೇತನ ತಾಂಡೇಲ್ ಹಾಗೂ ಅಕ್ಷಯ ನಾಯ್ಕ ಅವರನ್ನು ಎನ್ಐಎ ದಾಳಿ ನಡೆಸಿ ಬಂಧಿಸಿತು.ಫೆ.26 ರಂದು ಮಹಾಶಿವರಾತ್ರಿ ನಡೆದು ಗೋಕರ್ಣ, ಮುರ್ಡೇಶ್ವರ, ಸಹಸ್ರಲಿಂಗ, ಯಾಣ ಮತ್ತಿತರ ಶೈವ ಕ್ಷೇತ್ರಗಳಲ್ಲಿ ಸಾವಿರಾರು ಜನರು ಶಿವನ ದರ್ಶನ ಪಡೆದು ಪೂಜೆ ಸಲ್ಲಿಸಿದರು.
ಮಾರ್ಚ್ಕಾರವಾರ ಬಾಲಕಿಯರ ಬಾಲಮಂದಿರದಲ್ಲಿ ಮಾ.10ರಂದು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದು ಆತಂಕಕ್ಕೆ ಕಾರಣವಾಯಿತು.ಮಾ.10ರಿಂದ ಮೂರು ದಿನಗಳ ಕಾಲ ಶಿರಸಿಯಲ್ಲಿ ಬೇಡರ ವೇಷ ನಡೆಯಿತು. ಮಾ.11 ರಂದು ಹೊನ್ನಾವರ ಸಾಲ್ಕೋಡಿನಲ್ಲಿ ಗೋಹತ್ಯೆ ಮಾಡಿದ ಪ್ರಮುಖ ಆರೋಪಿಗಳಾದ ವಾಸಿಂ ಮತ್ತು ಮುಜಾಮಿಲ್ ಎಂಬಿಬ್ಬರನ್ನು ಪೊಲೀಸರು ಬಂಧಿಸಿದರು.
ಗೋಹತ್ಯೆ ಹಾಗೂ ಗೋಸಾಗಾಟ ಖಂಡಿಸಿ ಮಾ.17ರಂದು ಭಟ್ಕಳದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.ಹೊನ್ನಾವರ ಕಾಸರಕೋಡ ಟೊಂಕದಲ್ಲಿ ಉದ್ದೇಶಿತ ಬಂದರು ವಿರೋಧಿಸಿ ಬೃಹತ್ ಪ್ರತಿಭಟನೆ ನಡೆಯಿತು. ಶಿರಸಿ ತಾಲೂಕು ಮತ್ತಿಘಟ್ಟದಲ್ಲಿ ಭೂಕುಸಿತದಿಂದ ಸಂಚಾರಕ್ಕೆ ತೊಂದರೆ ಆಗುತ್ತಿದ್ದು, ರಸ್ತೆ ಸರಿಪಡಿಸುವಂತೆ ಆಗ್ರಹಿಸಿ ಮಾ.17ರಂದು ಸ್ಥಳೀಯರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.ಆರೋಗ್ಯ ಇಲಾಖೆ ಅಧಿಕಾರಿಗಳು ಮುಂಡಗೋಡದಲ್ಲಿ ದಾಳಿ ನಡೆಸಿ ಪರವಾನಗಿ ಪಡೆಯದ ಕೆಲ ಆಸ್ಪತ್ರೆಗಳಿಗೆ ಬೀಗ ಹಾಕಿದರು.ಏಪ್ರಿಲ್ಹಳಿಯಾಳದಲ್ಲಿ 6 ರಂದು ಪೊಲೀಸರ ಮೇಲೆ ದಾಳಿ ನಡೆಸಿದ ಇಬ್ಬರು ದರೋಡೆಕೋರರ ಮೇಲೆ ಗುಂಡು ಹಾರಿಸಿ ಪೊಲೀಸರು ವಶಕ್ಕೆ ಪಡೆದರು.
ಪಿಯು ಫಲಿತಾಂಶ 8ರಂದು ಪ್ರಕಟವಾಗಿದ್ದು ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ 6ನೇ ಸ್ಥಾನ ಗಳಿಸಿತು. 2024ರಲ್ಲಿ ನಾಲ್ಕನೇ ಸ್ಥಾನ ಗಳಿಸಿತ್ತು.ಭಟ್ಕಳದಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತ ಶ್ರೀನಿವಾಸ ನಾಯ್ಕ ಮೇಲೆ ಎಸ್ಪಿ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿ 8 ರಂದು ಪ್ರತಿಭಟನೆ ನಡೆಯಿತು.ಬನವಾಸಿ ಕದಂಬೋತ್ಸವ 12ರಿಂದ ಎರಡು ದಿನಗಳ ಕಾಲ ನಡೆದು ಪಂಪ ಪ್ರಶಸ್ತಿ ಪ್ರದಾನ ಮಾಡಲಾಯಿತು.ಮೇಭಟ್ಕಳದಲ್ಲಿ ಮಂಕಾಳ ವೈದ್ಯ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಜನಸ್ಪಂದನ ಸಭೆ ನಡೆಯಿತು. ಜನರಿಂದ ನೂರಾರು ಅರ್ಜಿ ಸ್ವೀಕರಿಸಲಾಯಿತು.
ಮುಂಡಗೋಡ ಭಾರಿ ಮಳೆ ಉಂಟಾಗಿ ಹುಬ್ಬಳ್ಳಿ ಶಿರಸಿ ಹೆದ್ದಾರಿ ಸಂಚಾರ ಸ್ಥಗಿತಗೊಂಡಿತು. 15-20ರ ತನಕ ಭಾರಿ ಮಳೆ ಸುರಿಯಿತು. ಕಾರವಾರ, ಭಟ್ಕಳ, ಹೊನ್ನಾವರ ಎಲ್ಲೆಡೆ ಭಾರಿ ಮಳೆ ಉಂಟಾಯಿತು. ಭಟ್ಕಳ ನಂದೀಶ್ವರ ನಗರ ಕೆರೆಯ ಒಡ್ಡು ಒಡೆದು ಹಾನಿ ಉಂಟಾಯಿತು.ಮಂಗನ ಕಾಯಿಲೆಗೆ ಹೊನ್ನಾವರದಲ್ಲಿ ವ್ಯಕ್ತಿ ಬಲಿಯಾಗಿ ಆತಂಕ ಉಂಟುಮಾಡಿತು.ಜೂನ್
ತಿಂಗಳ ಆರಂಭದಿಂದ ಭಾರಿ ಮಳೆ ಸುರಿದು ಕರಾವಳಿಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಯಿತು. ಶಾಲೆಗಳಿಗೆ ರಜೆ ನೀಡಲಾಯಿತು.ಭಟ್ಕಳ ಜಾಲಿಕೋಡಿ ಬೀಚ್‌ನಲ್ಲಿ ಕ್ಯಾರಿಯರ್ ಶಿಪ್ ಪತ್ತೆಯಾಗಿ ಕುತೂಹಲಕ್ಕೆ ಕಾರಣವಾಯಿತು.ಜೋಯಿಡಾವನ್ನು ಸಾವಯವ ತಾಲೂಕು ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ಘೋಷಿಸಿದರು.ಭಟ್ಕಳದ ಮುಂಡಳ್ಳಿಯಲ್ಲಿ ಕೊಟ್ಟಿಗೆಯಲ್ಲಿದ್ದ ಎಮ್ಮೆ ಹೊತ್ತ್ಯೊಯ್ದು ಹತ್ಯೆ ಮಾಡಲಾಯಿತು. ತಿಂಗಳಾಂತ್ಯದಲ್ಲಿ ಭಾರಿ ಮಳೆ ಮುಂದುವರಿದು ಮೂರು ದಿನ ಶಾಲೆಗಳಿಗೆ ರಜೆ ನೀಡಲಾಯಿತು. ನದಿ ತೀರದ ಜನರಿಗೆ ಕಾಳಜಿ ಕೇಂದ್ರದಲ್ಲಿ ಆಶ್ರಯ ನೀಡಲಾಯಿತು.
ಜುಲೈಮೀನುಗಾರಿಕೆಗೆ ತೆರಳಿದ ನವಗ್ರಹ ಹೆಸರಿನ ಬೋಟ್ ಮುರ್ಡೇಶ್ವರ ಬಳಿ ಮುಳುಗಡೆಯಾಗಿ ಮೂವರು ಮೃತಪಟ್ಟರು.ಭಟ್ಕಳ ಗ್ರಾಮದೇವಿ ಮಾರಿಕಾಂಬಾ ದೇವಿಯ ಜಾತ್ರೆ ಮಹೋತ್ಸವ ಅದ್ಧೂರಿಯಿಂದ ನಡೆಯಿತು.
ಮುಂದುವರಿದ ಮಳೆಯಿಂದ ಹೊನ್ನಾವರ, ಕುಮಟಾದಲ್ಲಿ ಕಾಳಜಿ ಕೇಂದ್ರ ತೆರೆಯಲಾಯಿತು. ಎರಡು ದಿನ ಶಾಲೆಗಳಿಗೆ ರಜೆ ನೀಡಲಾಯಿತು.30ರಂದು ಭಟ್ಕಳ ತೆಂಗಿನಗುಂಡಿ ಅಳಿವೆ ಅಂಚಿನಲ್ಲಿ ದೋಣಿ ಮುಗುಚಿ ನಾಲ್ವರು ಕಣ್ಮರೆಯಾದರು.ಜೋಯಿಡಾ ನಿವೃತ್ತ ಸೈನಿಕ ರಾಮನಗರದ ಶಶಿಕಾಂತ ಬಾವಾ ಕರ್ತವ್ಯದಲ್ಲಿರುವಾಗ ನಿಧನರಾದರು.ಆಗಸ್ಟ್ಸಾಲಬಾಧೆಯಿಂದ ಮುಂಡಗೋಡದ ರೈತ ಸೋಮಯ್ಯ ಚರಂತಿಮಠ ಆತ್ಮಹತ್ಯೆಗೆ ಶರಣಾದರು.
ಅತ್ತಿಮಬ್ಬೆ ಪ್ರಶಸ್ತಿ ಪುರಸ್ಕೃತ ಡಾ.ಶಾಂತಿ ನಾಯಕ 15 ರಂದು ಹೊನ್ನಾವರದಲ್ಲಿ ನಿಧನರಾದರು.ಹೊನ್ನಾವರ ತಾಲೂಕಿನ ಅರೆಅಂಗಡಿಯಲ್ಲಿ 18ರಂದು ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳು ಸಹಸ್ರ ವೃಕ್ಷಾರೋಪಣ ಅಭಿಯಾನದಲ್ಲಿ ಪಾಲ್ಗೊಂಡರು.ವ್ಯಾಪಕ ಮಳೆಯಿಂದ ಲಿಂಗನಮಕ್ಕಿ ಜಲಾಶಯಿಂದ 20 ಸಾವಿರ ಕ್ಯುಸೆಕ್ ನೀರು ಬಿಡುಗಡೆ ಮಾಡಲಾಯಿತು.ಸೆಪ್ಟೆಂಬರ್ಶಿಕ್ಷಕ ದಿನಾಚರಣೆಯಾದ ಸೆ.5 ರಂದು ಹೊನ್ನಾವರದ ಪಿ.ಆರ್. ನಾಯ್ಕಗೆ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಭರ್ತಿಯಾದ ಕಾಳಿ ಜಲಾಶಯಕ್ಕೆ ಆರ್.ವಿ. ದೇಶಪಾಂಡೆ ಬಾಗಿನ ಸಲ್ಲಿಸಿದರು.ಶಿರಸಿ ಬಳಿ ಬಾಲಕನೊಬ್ಬ 5ರಂದು ಆಕಸ್ಮಿಕವಾಗಿ ಏರ್ ಗನ್‌ನಿಂದ ಗುಂಡು ಹಾರಿಸಿದ್ದು ಮತ್ತೊಬ್ಬ ಬಾಲಕ ಸಾವು ಕಂಡ ಘಟನೆ ನಡೆಯಿತು.ಅಂಕೋಲಾ ತಾಲೂಕಿನ ಅಗಸೂರ ಬಳಿ 18ರಂದು ಸಾರಿಗೆ ಬಸ್ ಹಾಗೂ ಟ್ಯಾಂಕರ್ ನಡುವೆ ಅಪಘಾತ ನಡೆದು ಇಬ್ಬರು ಮೃತಪಟ್ಟು, ಐವರು ಗಂಭೀರವಾಗಿ ಗಾಯಗೊಂಡರು.ಹೊನ್ನಾವರದ ಗೇರಸೊಪ್ಪದಲ್ಲಿ 19ರಂದು ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯ ಸಾರ್ವಜನಿಕ ಅಹವಾಲು ಸಭೆ ನಡೆದು, ಯೋಜನೆಗೆ ವ್ಯಾಪಕ ವಿರೋಧ ವ್ಯಕ್ತವಾಯಿತು.
ಅಕ್ಟೋಬರ್ಹಳಿಯಾಳದಲ್ಲಿ ಜಿಲ್ಲಾಧಿಕಾರಿ ಮಧ್ಯಸ್ಥಿಕೆಯಲ್ಲಿ 8ರಂದು ಕಬ್ಬು ಬೆಳೆಗಾರರು ಹಾಗೂ ಕಾರ್ಖಾನೆ ಮಾಲೀಕರ ನಡುವೆ ಮಹತ್ವದ ಸಭೆ ನಡೆಯಿತು.ಕಬ್ಬಿಗೆ ಕನಿಷ್ಠ ದರ ಘೋಷಿಸಿದ್ದರಿಂದ 23ರಂದು ರೈತರು ಹಳಿಯಾಳದಲ್ಲಿ ಅನಿರ್ದಿಷ್ಟ ಅವಧಿಯ ಮುಷ್ಕರ ಆರಂಭಿಸಿದರು.
ನವೆಂಬರ್ಜೋಯಿಡಾದ ಕಾಲೇಜ ವಿದ್ಯಾರ್ಥಿನಿ ಕಾವ್ಯಾ ದಾನವ ಎಂಬಾಕೆ ರಾಷ್ಟ್ರ ಮಟ್ಟದ ಪದವಿಪೂರ್ವ ಕಾಲೇಜುಗಳ ಕುಸ್ತಿಯಲ್ಲಿ ಕಂಚಿನ ಪದಕ ಗಳಿಸಿ ಮೆಚ್ಚುಗೆಗೆ ಪಾತ್ರರಾದರು.ದೆಹಲಿ ಬಾಂಬ್ ಸ್ಫೋಟ ಖಂಡಿಸಿ ಭಟ್ಕಳದಲ್ಲಿ ಹಿಂದು ಜಾಗರಣ ವೇದಿಕೆಯಿಂದ 18ರಂದು ಪ್ರತಿಭಟನೆ ನಡೆಯಿತು.
ಕೇಣಿ ಬಂದರು ನಿರ್ಮಾಣ ವಿರೋಧಿಸಿ 18ರಂದು ಅಂಕೋಲಾ ಬಂದ್ ನಡೆಸಲಾಯಿತು. ವ್ಯಾಪಕ ಪ್ರತಿಭಟನೆ ಕಂಡುಬಂತು.ಮುಂಡಗೋಡ ಶಾಸಕರ ಮಾದರಿ ಶಾಲೆಯಲ್ಲಿ ಊಟ ಸೇವಿಸಿದ 20ಕ್ಕೂ ಹೆಚ್ಚು ಮಕ್ಕಳು 28ರಂದು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾದರು. ಎರಡು ದಿನಗಳ ತರುವಾಯ ಗುಣಮುಖರಾದರು.ಹೊನ್ನಾವರದ ಸೂಳೆಮುರ್ಕಿ ಎಂಬಲ್ಲಿ ಬಸ್ ಅಪಘಾತ ಉಂಟಾಗಿ ಒಬ್ಬ ವಿದ್ಯಾರ್ಥಿ ಮೃತಪಟ್ಟು, 30 ವಿದ್ಯಾರ್ಥಿಗಳು ಗಾಯಗೊಂಡರು.ಡಿಸೆಂಬರ್ಮುಂಡಗೋಡದಲ್ಲಿ 5ರಂದು ಫರ್ನಿಚರ್ ತಯಾರಿಕಾ ಘಟಕ ಅಗ್ನಿ ಅನಾಹುತಕ್ಕೀಡಾಗಿ ₹50 ಲಕ್ಷ ಹಾನಿ ಉಂಟಾಯಿತು.
ಮುಂಡಗೋಡ ಟಿಬೇಟಿಯನ್ ಕಾಲನಿಗೆ 12ರಂದು ದಲೈಲಾಮ ಆಗಮಿಸಿದರು.ಭಟ್ಕಳ ಕಾರವಾರ ತಹಸೀಲ್ದಾರ ಕಚೇರಿಗೆ ಬಾಂಬ್ ಹಾಕುವುದಾಗಿ ಬೆದರಿಕೆ ಕರೆ ಬಂದ ಹಿನ್ನೆಲೆ ಸೂಕ್ತ ಬಂದೋಬಸ್ತ್ ಹಾಗೂ ಪರಿಶೀಲನೆ ನಡೆದು ಹುಸಿ ಬೆದರಿಕೆ ಕರೆ ಎಂದು ತಿಳಿಸಲಾಯಿತು.ಮಂಕಿ ಪಪಂಗೆ ಮೊದಲ ಬಾರಿ ನಡೆದ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿತು. ಕಾರವಾರದಲ್ಲಿ ಡಿ.22 ರಿಂದ 7 ದಿನಗಳ ಕಾಲ ಕರಾವಳಿ ಉತ್ಸವ ಅದ್ಧೂರಿಯಾಗಿ ನಡೆಯಿತು. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪಾಲ್ಗೊಂಡಿದ್ದರು. 28ರಂದು ರಾಷ್ಟ್ರಪತಿ ನೌಕಾನೆಲೆಗೆ ಭೇಟಿ ನೀಡಿದ್ದರು.