ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಮುಮ್ಮಡಿ ಅವರ ಕಾಲದಲ್ಲಿ ವಿಜಯನಗರದಿಂದ ಚಿತ್ರ ಕಲಾವಿದರ ತಂಡವೇ ಮೈಸೂರಿನ ಅರಮನೆಯಲ್ಲಿ ಇತ್ತು ಎಂದು ಚಿತ್ರಕಲಾವಿದ ಗಂಜೀಫಾ ರಘುಪತಿ ಭಟ್ಟ ಹೇಳಿದರು.ನಗರದ ಒಡೆಯರ್ ಸೆಂಟರ್ ಫಾರ್ ಆರ್ಕಿಟೆಕ್ಚರ್ ಆವರಣದಲ್ಲಿ ಬುಧವಾರ ನಡೆದ ಎಸ್.ಆರ್. ಅಯ್ಯಂಗಾರ್ ಅವರ ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.ಮೈಸೂರಿನಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ಕಲೆಗೆ ತುಂಬಾ ಪ್ರೋತ್ಸಾಹ ನೀಡಿದ್ದರು. ಬಳಿಕ ಪಾಶ್ಚ್ಯಾತರ ಪ್ರಭಾವದಿಂದ ಇನ್ನೂ ಹೆಚ್ಚಿನ ಕಲಾಕೃತಿಗಳು ಅರಮನೆ ಸೇರುವಂತೆ ಆಯಿತು. ಚಿತ್ರ ಕಲಾವಿದ ರವಿವರ್ಮ ಅವರ ಚಿತ್ರಗಳು ಕೂಡ ಮೈಸೂರಿನ ಅರಮನೆಗೆ ಸೇರಿದವು. ಇವರ ಅವಧಿಯಲ್ಲಿಯೇ ಎಸ್.ಆರ್. ಅಯ್ಯಂಗಾರ್ ಅವರ ಕಲಾಕೃತಿಗಳು ಮೈಸೂರಿನ ಅರಮನೆ ಸೇರಿದ್ದಾಗಿ ಅವರು ಹೇಳಿದರು.ಅಗ್ನಿ ಅನಾಹುತವಾದ ಬಳಿ ಮೈಸೂರಿನಲ್ಲಿ ನಿರ್ಮಿಸಲಾದ ಅರಮನೆಯ ಕಲ್ಯಾಣ ಮಂಟಪದಲ್ಲಿ ಚಿತ್ರಿಕರಿಸಲಾದ ಚಿತ್ರಗಳನ್ನು ಅಯ್ಯಂಗಾರ್ ಅವರು ರಚಿಸಿದ್ದಾರೆ. ಕಲಾ ಪ್ರದರ್ಶನಕ್ಕೆ ಉತ್ತಮ ವೇದಿಕೆಯಾದ ಈ ಕಾಲೇಜಿನ ಆವರಣದಲ್ಲಿ ಚಿತ್ರಕಲಾವಿದರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಚಿತ್ರ ಕಲಾ ಪ್ರದರ್ಶನಗಳನ್ನು ಏರ್ಪಡಿಸಲು ಅವಕಾಶ ಕಲ್ಪಿಸಬೇಕು ಎಂದು ಅವರು ಸಲಹೆ ನೀಡಿದರು.ಕಾರ್ಯಕ್ರಮದಲ್ಲಿ ಅಯ್ಯಂಗಾರ್ ಅವರ ಮೊಮ್ಮಗ ಅವನೀಶ್ ಪಾಠಕ್, ಕಾಲೇಜಿನ ಆಡಳಿತ ಮಂಡಳಿ ಸದಸ್ಯ ಬಿ.ಎಲ್. ಮಂಜುನಾಥ್, ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಮದ್ವೇಶ್ ಎನ್. ಪಾಂಡುರಂಗಿ ಇದ್ದರು.ಪ್ರದರ್ಶನ ವಿಶೇಷಪ್ರದರ್ಶನದಲ್ಲಿ ಅಯ್ಯಂಗಾರ್ ಅವರು 1930 ರಿಂದ 80 ರ ದಶಕದವರೆಗೆ ರಚಿಸಿ ನಾನಾ ಬಗೆಯ ಚಿತ್ರ ಕಲೆಗಳು ಇದ್ದವು. ಪ್ರಕೃತಿಯ ಚಿತ್ರಣಗಳೊಂದಿಗೆ ಅರಮನೆಯ ಚಿತ್ರಗಳು, ನಾನಾ ಮಹನೀಯರ ಭಾವಚಿತ್ರಗಳು ಪ್ರದರ್ಶನದಲ್ಲಿದ್ದವು. ಈ ಪ್ರದರ್ಶನವು ಜು. 26ರವರೆಗೆ ಇರಲಿದೆ.