ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಮಧ್ಯ ಕರ್ನಾಟಕದ ನೆಲದಲ್ಲಿ ಅಹಿಂದ ಹೋರಾಟಗಳಿಗೆ ಪ್ರಾಮಾಣಿಕವಾಗಿ ಧ್ವನಿಯಾಗುವುದರ ಮೂಲಕ ನ್ಯಾಯ ಸಲ್ಲಿಸುತ್ತಿದ್ದ, ದಿಟ್ಟ ವ್ಯಕ್ತಿತ್ವ ಮುರುಘರಾಜೇಂದ್ರ ಒಡೆಯರ್ ಅವರದ್ದೆಂದು ನಿವೃತ್ತ ಪ್ರಾಚಾರ್ಯ ಜೆ.ಯಾದವರೆಡ್ಡಿ ಬಣ್ಣಿಸಿದರು.ಕರ್ನಾಟಕ ಮುಸ್ಲಿಂ ಕಲ್ಚರಲ್ ಅಕಾಡೆಮಿ, ಕರ್ನಾಟಕ ಕೊಳಗೇರಿ ನಿವಾಸಿಗಳ ಸಂಯುಕ್ತ ಸಂಘಟನೆ, ಭ್ರಷ್ಟಾಚಾರ ವಿರೋಧಿ ಸೇನೆ ಸಂಯುಕ್ತಾಶ್ರಯದಲ್ಲಿ ಪತ್ರಕರ್ತರ ಭವನದಲ್ಲಿ ಮಂಗಳವಾರ ನಡೆದ ಮುರುಘರಾಜೇಂದ್ರ ಒಡೆಯರ್ ಒಂದು ನೆನಪು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅವಕಾಶ ವಂಚಿತರ ಧ್ವನಿಯಾಗಿ ಹೋರಾಡಿದ ಮುರುಘರಾಜೇಂದ್ರ ಒಡೆಯರ್‌ವರಲ್ಲಿ ರಾಜಕಾರಣಿಗಳು, ಅಧಿಕಾರಿಗಳನ್ನು ಗಟ್ಟಿಯಾಗಿ ಪ್ರಶ್ನಿಸುವ ಎದೆಗಾರಿಕೆಯಿತ್ತು ಎಂದರು.
ಚಿತ್ರದುರ್ಗದ ನೆಲ ಒಬ್ಬೊಬ್ಬರಾಗಿ ಹೋರಾಟಗಾರರ ಕಳೆದುಕೊಳ್ಳುತ್ತಿದೆ. ಮುರುಘರಾಜೇಂದ್ರ ಒಡೆಯರ್, ದಲಿತ ನಾಯಕ ಎಂ.ಜಯಣ್ಣ, ಸದಾನಂದಯ್ಯ, ಟಿ.ನುಲೇನೂರು ಶಂಕರಪ್ಪ ಅಂತಹ ಹೋರಾಟಗಾರರು ನೆಲದ ಸಂಪರ್ಕ ಕಡಿದುಕೊಂಡಿದ್ದಾರೆ. ಚಿಕ್ಕವಯಸ್ಸಿನಲ್ಲಿಯೇ ರಾಜಕಾರಣ ಪ್ರವೇಶಿಸಿದ ಮುರುಘರಾಜೇಂದ್ರ ಒಡೆಯರ್ ಎಲ್ಲಿಯೂ ಅಡ್ಡದಾರಿ ಹಿಡಿಯಲಿಲ್ಲ. ಅಹಿಂದ ವರ್ಗಕ್ಕೆ ಅನ್ಯಾಯವಾದರೆ ಅಲ್ಲಿ ಹೋರಾಟಕ್ಕೆ ಇಳಿಯುತ್ತಿದ್ದರು. ಹಿಂದುಳಿದ ವರ್ಗಗಳ ಪರವಾಗಿ ಕರಾರುವಕ್ಕಾಗಿ ಅಂಕಿ ಅಂಶಗಳನ್ನಿಟ್ಟುಕೊಂಡು ಹೋರಾಟ ಮಾಡಿದ ಧೀಮಂತ ನಾಯಕ ಎಂದು ಸ್ಮರಿಸಿದರು.ಅಹಿಂದ ವರ್ಗಕ್ಕೆ ಜನಸಂಖ್ಯೆಗನುಗುಣವಾಗಿ ಸರ್ಕಾರದಿಂದ ಸೌಲಭ್ಯ ಸಿಕ್ಕಿಲ್ಲ ಎನ್ನುವ ಕೊರಗು ಅವರನ್ನು ಕಾಡುತ್ತಿತ್ತು. ರಾಜಿ ರಾಜಕಾರಣ ಎಂದಿಗೂ ಮಾಡಲಿಲ್ಲ. ಕೈಬಾಯಿ ಪರಿಶುದ್ಧವಾಗಿದ್ದರಿಂದ ಯಾರಿಗೂ ಹೆದರದೆ ಅನ್ಯಾಯ ಖಂಡಿಸುವ ಛಲ, ಧೈರ್ಯ ಅವರಲ್ಲಿತ್ತು. ಜಾತಿಗಣತಿ ಎರಡು ಪ್ರಬಲ ಜಾತಿಗಳು ವಿರೋಧಿಸುತ್ತಿರುವ ಇಂದಿನ ಸಂದರ್ಭಕ್ಕೆ ಮುರುಘರಾಜೇಂದ್ರ ಒಡೆಯರ್ ಇರಬೇಕಿತ್ತು. ಗೋಕಾಕ್ ಚಳುವಳಿಯಲ್ಲಿ ಭಾಗವಹಿಸಿದ್ದ ಒಡೆಯರ್ ಕನ್ನಡದ ಕಟ್ಟಾಳುವಾಗಿದ್ದರು. ಜೆ.ಎಚ್.ಪಟೇಲ್, ರಾಮಕೃಷ್ಣಹೆಗಡೆ, ಬೊಮ್ಮಾಯಿ, ಎಚ್.ಡಿ.ದೇವೇಗೌಡರ ಜೊತೆ ನಿಕಟ ಸಂಪರ್ಕವಿಟ್ಟುಕೊಂಡಿದ್ದರೂ ಎಲ್ಲಿಯೂ ಯಾರನ್ನು ದುರುಪಯೋಗಪಡಿಸಿಕೊಳ್ಳಲಿಲ್ಲ ಎಂದರು.
ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಿ.ಟಿ.ಜಗದೀಶ್ ಮಾತನಾಡಿ, ಹೋರಾಟಗಾರರಿಗೆ ಕೌಟುಂಬಿಕ, ಆರ್ಥಿಕ, ಸಾಮಾಜಿಕ ಭದ್ರೆತೆಯಿಲ್ಲದಂತಾಗಿದೆ. ಒಡೆಯರ್ ದಿಟ್ಟ ಹೋರಾಟಗಾರರಾಗಿದ್ದರು. ಲೋಹಿಯಾವಾದ, ಸಮಾಜವಾದದ ಸಿದ್ಧಾಂತ ಅಳವಡಿಸಿಕೊಂಡಿದ್ದ ಒಡೆಯರ್ ಹೋರಾಟದ ಮೂಲಕವೇ ಗುರುತಿಸಿಕೊಂಡವರು. ಪ್ರತಿಯೊಬ್ಬರು ಹಕ್ಕುಗಳಿಗಾಗಿ ಹೋರಾಡಬೇಕಿದೆ. ಜಾತಿಗಣತಿ ವರದಿ ಬಿಡುಗಡೆಯಾದರೆ ಅಹಿಂದ ವರ್ಗದ ಎಲ್ಲಾ ಜಾತಿಗಳಿಗೆ ಸಿಗಬೇಕಾದ ಸಮಪಾಲು ದೊರಕುತ್ತದೆ ಎಂದು ಹೇಳಿದರು.ನಗರಸಭೆ ಮಾಜಿ ಅಧ್ಯಕ್ಷ ಸಿ.ಟಿ.ಕೃಷ್ಣಮೂರ್ತಿ ಮಾತನಾಡಿ, ಮುರುಘರಾಜೇಂದ್ರ ಒಡೆಯರ್ ಹೋರಾಟವನ್ನೇ ಬದುಕಾಗಿಸಿಕೊಂಡಿದ್ದರು. ಕುಟುಂಬದ ಬಗ್ಗೆ ಎಂದಿಗೂ ಚಿಂತೆ ಮಾಡಿದವರಲ್ಲ. ಅಹಿಂದ ಪರವಾಗಿ ಹೋರಾಡುತ್ತಿದ್ದ ಅವರು, ನಿಷ್ಠುರವಾಗಿ ಮಾತನಾಡುತ್ತಿದ್ದರು. ಯಾರ ಮುಲಾಜಿಗೂ ಒಳಗಾಗುತ್ತಿರಲಿಲ್ಲ. ಅಂತಹ ಧೀಮಂತ ನಾಯಕ ಬಹುಬೇಗ ನಮ್ಮನ್ನು ಅಗಲಿದ್ದು ನೋವಿನ ಸಂಗತಿ ಎಂದರು.
ಹಿರಿಯ ನ್ಯಾಯವಾದಿ ಬಿ.ಕೆ.ರಹಮತ್‍ವುಲ್ಲಾ ಮಾತನಾಡಿ, ಹೋರಾಟದ ಮೂಲಕ ಇಂದಿಗೂ ಒಡೆಯರ್ ಎಲ್ಲರ ಮನದಲ್ಲಿ ಉಳಿದಿದ್ದಾರೆ. ಅಹಿಂದ ಪರವಾಗಿದ್ದ ಅವರು ಎಲ್ಲಿ ಅನ್ಯಾಯವಾಗುತ್ತದೋ ಅಲ್ಲಿ ಹೋರಾಟದ ಮುಂಚೂಣಿಯಲ್ಲಿರುತ್ತಿದ್ದರು. ಸರ್ಕಾರ ಒಡೆಯರ್ ಕುಟುಂಬಕ್ಕೆ ಒಂದು ನಿವೇಶನ ನೀಡಬೇಕೆಂದು ಮನವಿ ಮಾಡಿದರು. ರಾಜ್ಯ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ರಾಜ್ಯಾಧ್ಯಕ್ಷ ಟಿಪ್ಪುಖಾಸಿಂ ಆಲಿ ಮಾತನಾಡಿ, ವಿದ್ಯಾರ್ಥಿ ದೆಸೆಯಲ್ಲಿಯೇ ಹೋರಾಟದ ಗುಣ ಬೆಳೆಸಿಕೊಂಡಿದ್ದ ಮುರುಘರಾಜೇಂದ್ರರು ಸದಾ ಅಹಿಂದ ಪರವಾಗಿರುತ್ತಿದ್ದರು. ರಾಜಿ ಸ್ವಭಾವದವರಲ್ಲ. ಅವರ ಹೆಸರಿನಲ್ಲಿ ನಗರದಲ್ಲಿ ಎಲ್ಲಿಯಾದರೂ ಸ್ಮಾರಕ ನಿರ್ಮಾಣವಾಗಬೇಕೆಂದು ಸಲಹೆ ನೀಡಿದರು.ಕರ್ನಾಟಕ ಕೊಳಗೇರಿ ನಿವಾಸಿಗಳ ಸಂಯುಕ್ತ ಸಂಘಟನೆ ಜಿಲ್ಲಾಧ್ಯಕ್ಷ ಗಣೇಶ್ ಅಧ್ಯಕ್ಷತೆ ವಹಿಸಿದ್ದರು. ರೆವೆರಂಡ್ ಫಾದರ್ ಎಂ.ಎಸ್.ರಾಜು, ಸಾಹಿತಿ ಪರಶುರಾಮ್ ಗೊರಪ್ಪರ್, ಟಿ.ತಿಪ್ಪೇಸ್ವಾಮಿ ಸಂಪಿಗೆ. ಪಾರ್ಥರಾಜೇಂದ್ರ ಒಡೆಯರ್, ಎನ್. ಅರುಣ್‍ಕುಮಾರ್, ಸವಿತಾ ಸಮಾಜದ ಹಿರಿಯ ಮುಖಂಡ ಓ.ನರಸಿಂಹಮೂರ್ತಿ, ಬಡಗಿ ಕೆಲಸಗಾರರ ಸಂಘದ ಅಧ್ಯಕ್ಷ ಎ.ಜಾಕೀರ್ ಹುಸೇನ್, ಕರ್ನಾಟಕ ಮುಸ್ಲಿಂ ಕಲ್ಚರಲ್ ಅಕಾಡೆಮಿ ಅಧ್ಯಕ್ಷ ಎಂ.ಹನೀಫ್ ವೇದಿಕೆಯಲ್ಲಿದ್ದರು.