ಸಾರಾಂಶ
ತಾಲೂಕಿನ ಲೊಕ್ಕನಹಳ್ಳಿ ಗ್ರಾಮ ಪಂಚಾಯತಿ ಕಚೇರಿ ಆವರಣದಲ್ಲಿ ಮಹಿಳೆ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.
ಕನ್ನಡಪ್ರಭ ವಾರ್ತೆ ಹನೂರು
ತಾಲೂಕಿನ ಲೊಕ್ಕನಹಳ್ಳಿ ಗ್ರಾಮ ಪಂಚಾಯತಿ ಕಚೇರಿ ಆವರಣದಲ್ಲಿ ಮಹಿಳೆ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.ತಾಲೂಕಿನ ಲೊಕ್ಕನಹಳ್ಳಿಯ ಗ್ರಾಮದ ನಿವಾಸಿ ಮೃತ ಸುರೇಶ್ ಅವರ ಪತ್ನಿ ಮಣಿ ಆತ್ಮಹತ್ಯೆಗೆ ಯತ್ನಿಸಿದವರು. ಮನೆಯು ಶಿಥಿಲಗೊಂಡ ಕಾರಣದಿಂದ ಹೊಸ ಮನೆ ನಿರ್ಮಿಸುತ್ತಿದ್ದಾರೆ. ಸರ್ಕಾರ 1982 ರಲ್ಲಿ ಲೋಕನಹಳ್ಳಿ ಗ್ರಾಮದ ಉಪ್ಪಾರ ಬಡಾವಣೆಯ ರಾಮಮಂದಿರದ ಬಳಿ 30x40 ಅಳತೆಯ ನಿವೇಶನವನ್ನು ಕೆಲವು ಫಲಾನುಭವಿಗಳಿಗೆ ಮಂಜೂರು ಮಾಡಿತ್ತು. ಅಕ್ಕಪಕ್ಕದ ಕೆಲವರು ಸಾರ್ವಜನಿಕ ದಾರಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಮನೆ ನಿರ್ಮಾಣ ಮಾಡಿಕೊಂಡಿದ್ದಾರೆ.
ಮಣಿ ಅವರು ತಮ್ಮ ಮನೆಗೆ ಪ್ರವೇಶ ಮಾಡಲು ಬೇಕಾದ ದಾರಿ ಇಲ್ಲದ ಕಾರಣ ಕಾಮಗಾರಿ ಅರ್ಧದಲ್ಲೇ ನಿಂತಿದೆ. ಈ ಬಗ್ಗೆ ತಾವು ಹಲವಾರು ಬಾರಿ ಲೊಕ್ಕನಹಳ್ಳಿ ಪಿಡಿಒ, ಇಒ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಹಾಗೂ ಜಿಲ್ಲಾಧಿಕಾರಿಗಳಿಗೆ ದಾರಿಗಾಗಿ ದೂರು ನೀಡಿದ್ದಾರೆ. ಆದರೆ ಯಾವುದೇ ಸ್ಪಷ್ಟತೆ ಇಲ್ಲದೆ, ದಾರಿ ಇದ್ದರೆ ಇದೆ ಎಂದು ಇಲ್ಲದಿದ್ದರೆ ಇಲ್ಲವೆಂದು ಹಿಂಬರಹ ಪಡೆದುಕೊಂಡು ಬನ್ನಿ ಎಂದು ಜಿಲ್ಲಾ ಪಂಚಾಯಿತಿ ಕಚೇರಿಯ ಅಧಿಕಾರಿಗಳು ಹೇಳಿ ಅವರನ್ನು ಹಿಂದಿರುಗಿಸಿದ್ದಾರೆ. ಗ್ರಾಮ ಪಂಚಾಯತಿಗೆ ಹಿಂಬರಹ ಪತ್ರಕ್ಕಾಗಿ ಹಾಜರಾಗಿದ್ದ ಮಣಿ ಅವರಿಗೆ ಅಲ್ಲಿಯ ಪಿಡಿಒ ಯಾವುದೇ ಸ್ಪಷ್ಟನೆ ನೀಡದೆ ನಿರ್ಲಕ್ಷ್ಯ ವಹಿಸಿದ್ದರಿಂದ ಅವರು ಕಚೇರಿ ಆವರಣದಲ್ಲಿಯೇ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.ಸದ್ಯ ಪೊಲೀಸರ ಸಮಯೋಚಿತ ಹಸ್ತಕ್ಷೇಪದಿಂದ ಅವರು ಬದುಕುಳಿದಿದ್ದಾರೆ. ಪೊಲೀಸರು ಕ್ರೀಮಿನಾಶಕದ ಬಾಟಲ್ ಕಿತ್ತುಕೊಂಡು ಮಹಿಳೆಯನ್ನು ಸಮಾಧಾನಪಡಿಸಿದ್ದಾರೆ. ಮಣಿ ಅವರು ಪೊಲೀಸರಿಗೆ ನನಗೆ ಹಿಂಬರಹ ಪತ್ರವೊಂದು ಬೇಕು ನಾನು ನ್ಯಾಯಕ್ಕಾಗಿ ಕೋರ್ಟ್ ಗೆ ಹೋಗುತ್ತೇನೆ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.