ಕನ್ನಡಪ್ರಭ ವಾರ್ತೆ ಬೆಂಗಳೂರು
ಸಾಮಾಜಿಕ ಜಾಲತಾಣದಲ್ಲಿ ಸುಂದರ ಡಿಪಿ ಹಾಕುವ ಮೂಲಕ ಮೋಹದ ಬಲೆಗೆ ಬೀಳಿಸಿಕೊಂಡು ವಿವಾಹಿತೆಯಿಂದ ಕಿಲೋಗ್ರಾಂಗಟ್ಟಲೇ ಚಿನ್ನ ಹಾಗೂ ಹಣ ಸುಲಿಗೆ ಮಾಡಿದ್ದ ಇಬ್ಬರು ಚಾಲಾಕಿ ಕಿಡಿಗೇಡಿಗಳನ್ನು ಕೆ.ಆರ್.ಪುರ ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ.ತೆಲಂಗಾಣ ರಾಜ್ಯ ನಿಜಾಮಾಬಾದ್‌ನ ಕೊಂಡೂರು ಗ್ರಾಮದ ಚೆನ್ನೂರು ಮಹೇಶ್ ಹಾಗೂ ಆಂಧ್ರಪ್ರದೇಶದ ಅನಂತಪುರದ ವನ್ನೂರು ಸ್ವಾಮಿ ಬಂಧಿತರಾಗಿದ್ದು, ಆರೋಪಿಗಳಿಂದ ₹85.65 ಲಕ್ಷ ಮೌಲ್ಯದ 571 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ.
ಇತ್ತೀಚಿಗೆ ತಮ್ಮ ಮನೆಯಲ್ಲಿ ಚಿನ್ನಾಭರಣ ಕಾಣದೆ ಹೋದಾಗ ಗಾಬರಿಗೊಂಡು ಸಂತ್ರಸ್ತೆಯನ್ನು ಆಕೆಯ ಪತಿ ವಿಚಾರಿಸಿದ್ದಾರೆ. ಆಗ ತಾವು ಆನ್‌ಲೈನ್ ಚಾಟಿಂಗ್ ಆ್ಯಪ್‌ನಲ್ಲಿ ಬ್ಲ್ಯಾಕ್‌ಮೇಲ್‌ಗೊಳಗಾಗಿ ಆಭರಣ ಕಳೆದುಕೊಂಡಿರುವ ಸಂಗತಿಯನ್ನು ಆಕೆ ಹೇಳಿದ್ದಾರೆ. ಕೂಡಲೇ ಕೆ.ಆರ್.ಪುರ ಠಾಣೆಗೆ ಸಂತ್ರಸ್ತೆ ದೂರು ನೀಡಿದ್ದಾರೆ. ತನಿಖೆಗಿಳಿದ ಇನ್ಸ್‌ಪೆಕ್ಟರ್ ಬಿ.ರಾಮಮೂರ್ತಿ ನೇತೃತ್ವದ ತಂಡವು ತಾಂತ್ರಿಕ ಮಾಹಿತಿ ಆರಿಸಿ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದೆ.ರಿಯಲ್ ಎಸ್ಟೇಟ್ ಉದ್ಯಮಿ ಪತ್ನಿ:
ಶೀಗೆಹಳ್ಳಿಯ ವೈಟ್‌ಸಿಟಿ ಲೇಔಟ್‌ನಲ್ಲಿ ತನ್ನ ಪತಿ ಹಾಗೂ ಇಬ್ಬರು ಮಕ್ಕಳ ಜತೆ 35 ವರ್ಷದ ಸಂತ್ರಸ್ತೆ ನೆಲೆಸಿದ್ದು, ಆಕೆಯ ಪತಿ ರಿಯಲ್ ಎಸ್ಟೇಟ್ ಉದ್ಯಮಿ ಆಗಿದ್ದಾರೆ. ಒಂದೂವರೆ ವರ್ಷದ ಹಿಂದೆ ಆಕೆಗೆ ಸ್ನ್ಯಾಪ್ ಚಾಟ್ ಮೂಲಕ ಸ್ವಾಮಿ ಹಾಗೂ ಮಹೇಶ್ ಪ್ರತ್ಯೇಕವಾಗಿ ಪರಿಚಯವಾಗಿದ್ದಾರೆ. ಈ ಆರೋಪಿಗಳ ಪೈಕಿ ಕೆಲಸವಿಲ್ಲದೆ ಅಲೆಯುತ್ತಿದ್ದ ಬಿಎಂ ಪದವೀಧರ ಮಹೇಶ್, ಚಾಟಿಂಗ್ ಆ್ಯಪ್‌ನಲ್ಲಿ ವಿವಾಹಿತೆಯರನ್ನು ಮೋಹದ ಬಲೆಗೆ ಬೀಳಿಸಿಕೊಂಡು ಹಣ ಸುಲಿಗೆ ಮಾಡುತ್ತಿದ್ದ.
ಕೌಟುಂಬಿಕ ಕಲಹದಿಂದ ಬೇಸತ್ತಿದ್ದ ಮಹೇಶ್ ಪತ್ನಿ ವಿಚ್ಧೇದನ ಸಹ ಕೊಟ್ಟಿದ್ದಳು. ಹೀಗಿರುವಾಗ ಒಂದೂವರೆ ವರ್ಷದ ಹಿಂದೆ ಆತನಿಗೆ ಸ್ನ್ಯಾಪ್ ಚಾಟ್‌ನಲ್ಲಿ ಸಂತ್ರಸ್ತೆಯ ಪರಿಚಯವಾಗಿದೆ. ಬಳಿಕ ನಾಜೂಕಿನ ಮಾತುಗಳ ಮೂಲಕ ಆಕೆಗೆ ಮಹೇಶ್ ಗಾಳ ಹಾಕಿದ್ದಾನೆ. ಹಲವು ಬಾರಿ ಆಕೆ ಆಹ್ವಾನದ ಮೇರೆಗೆ ನಗರಕ್ಕೆ ಬಂದು ಭೇಟಿಯಾಗಿ ಕೆಲ ಹೊತ್ತು ಆಕೆಯೊಂದಿಗೆ ಕಳೆದು ಹೋಗಿದ್ದ ಎಂದು ತಿಳಿದು ಬಂದಿದೆ.
ಬೆಟ್ಟಿಂಗ್ ಆ್ಯಪ್‌ನಲ್ಲಿ ವಿನಿಯೋಗ:ತನಗೆ ಆರ್ಥಿಕ ಸಂಕಷ್ಟವಿದೆ ನೆರವು ನೀಡುವಂತೆ ಮರಳು ಮಾಡಿ ಸಂತ್ರಸ್ತೆಯಿಂದ ಲಕ್ಷಾಂತರ ರು. ಮೌಲ್ಯದ ಆಭರಣಗಳನ್ನು ಸಂತ್ರಸ್ತೆಯನ್ನು ಮಹೇಶ್ ಪಡೆದಿದ್ದ. ಆ ಚಿನ್ನಾಭರಣಗಳನ್ನು ಅಡಮಾನವಿಟ್ಟು ಆತ ಬೆಟ್ಟಿಂಗ್ ಆ್ಯಪ್‌ನಲ್ಲಿ ಜೂಜಾಡಿ ಕಳೆದಿದ್ದ. ಅದೇ ರೀತಿ ಮತ್ತೊಂದೆಡೆ ಸಂತ್ರಸ್ತೆಯಿಂದ ಸ್ವಾಮಿ ಸಹ ಸುಲಿಗೆ ಮಾಡಿದ್ದ. ಈ ಇಬ್ಬರಿಗೆ ಪರಸ್ಪರ ಪರಿಚಯವಿರಲಿಲ್ಲ. ಆದರೆ ಇಬ್ಬರೊಟ್ಟಿಗೆ ಸಂತ್ರಸ್ತೆ ‘ಚಾಟಿಂಗ್’ ಮೂಲಕ ಸಂಪರ್ಕದಲ್ಲಿದ್ದಳು. ಆದರೆ ಸಂತ್ರಸ್ತೆಯಿಂದ ಅತಿ ಹೆಚ್ಚು ಹಣವನ್ನು ಮಹೇಶ್ ಸುಲಿಗೆ ಮಾಡಿದ್ದರೆ, ಸ್ವಾಮಿ ಕೇವಲ ₹6 ಲಕ್ಷ ವಂಚಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಶೇರ್ ಮಾಡಿದ್ದ ಅಶ್ಲೀಲಪೋಟೋ ಬ್ಲ್ಯಾಕ್‌ಮೇಲ್
ಸ್ನ್ಯಾಪ್ ಚಾಟ್‌ನಲ್ಲಿ ಚಾಟಿಂಗ್ ಮಾಡುವಾಗ ಗೆಳೆಯನಿಗೆ ಖಾಸಗಿ ಪೋಟೋವನ್ನು ಸಂತ್ರಸ್ತೆ ಶೇರ್ ಮಾಡಿದ್ದಳು. ಒಂದು ಬಾರಿ ವೀಕ್ಷಿಸಿದ ತಕ್ಷಣವೇ ಆ ಪೋಟೋ ಡಿಲೀಟ್ ಆಗುತ್ತಿತ್ತು. ಆದರೆ, ಆರೋಪಿಗಳು ಆ ಪೋಟೋವನ್ನು ಸ್ಕ್ರೀನ್ ಶಾಟ್ ತೆಗೆದಿಟ್ಟುಕೊಂಡು ಸಂತ್ರಸ್ತೆಗೆ ಬ್ಲ್ಯಾಕ್‌ಮೇಲ್ ಮಾಡಿ ಹಣ ಸುಲಿಗೆ ಮಾಡಿದ್ದ ಎಂದು ಮೂಲಗಳು ಹೇಳಿವೆ.ಡಿಪಿಯಲ್ಲಿ ಸುಂದರ, ನೋಡಲು ಕೇಡಿತಲೆಯಲ್ಲಿ ಕೂದಲು ಇಲ್ಲದೆ ಬಾಂಡ್ಲಿ ಆಗಿದ್ದ ಮಹೇಶ್ ಗಡ್ಡ ಬಿಟ್ಟುಕೊಂಡು ನೋಡುವುದಕ್ಕೆ ಅಷ್ಟೇನೂ ಚೆನ್ನಾಗಿ ಇಲ್ಲಲಿಲ್ಲ. ಆದರೆ, ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಸುರಸುಂದರನಂತೆ ಡಿಪಿ ಹಾಕಿಕೊಂಡಿದ್ದ. ಈ ಫೋಟೋ ನೋಡಿಯೇ ಸಂತ್ರಸ್ತ ವಿವಾಹಿತ ಮಹಿಳೆ ಆತನಿಗೆ ಮಾರುಹೋಗುತ್ತಿದ್ದಳು ಎನ್ನಲಾಗಿದೆ.