ವಾಟ್ಸ್‌ಆ್ಯಪ್‌ ಸ್ಟೇಟಸ್‌ನಲ್ಲಿ ಫೋಟೋ ಇಟ್ಟಿದ್ದಕ್ಕೆ ಮಹಿಳೆ ಆತ್ಮಹತ್ಯೆ

| Published : Sep 05 2025, 01:00 AM IST

ವಾಟ್ಸ್‌ಆ್ಯಪ್‌ ಸ್ಟೇಟಸ್‌ನಲ್ಲಿ ಫೋಟೋ ಇಟ್ಟಿದ್ದಕ್ಕೆ ಮಹಿಳೆ ಆತ್ಮಹತ್ಯೆ
Share this Article
  • FB
  • TW
  • Linkdin
  • Email

ಸಾರಾಂಶ

ಯಮನೂರಪ್ಪ ಓಲೇಕಾರ, ಮುದಿರಾಜ ಓಲೇಕಾರ ನನಗೆ ಬೆದರಿಕೆ ಹಾಕುತ್ತಿದ್ದರು. ಫೋನ್‌ನಲ್ಲಿ ನನ್ನ ವೀಡಿಯೋ ಮಾಡಿ ಬಿಡುತ್ತೇನೆ ಎಂದು ಭಯ ಹುಟ್ಟಿಸಿದ್ದರು. ಅಲ್ಲದೆ ನನ್ನ ಫೋಟೊ ವಾಟ್ಸ್‌ಆ್ಯಪ್‌ ಸ್ಟೇಟಸ್ ಇಟ್ಟಿದ್ದಾರೆ. ಹೀಗಾಗಿ ಮರ್ಯಾದೆಗೆ ಅಂಜಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಪಾರ್ವತಿ ಡೆತ್‌ ನೋಟ್‌ ಬರೆದು ಇಟ್ಟಿದ್ದಾರೆ.

ಯಲಬುರ್ಗಾ:

ಯುವಕನೊಬ್ಬ ಮೊಬೈಲ್‌ನಲ್ಲಿ ಮಹಿಳೆಯೊಬ್ಬಳ ಫೋಟೋ ಮತ್ತು ವೀಡಿಯೋವನ್ನು ಸ್ಟೇಟಸ್ ಹಾಕುವುದಾಗಿ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಮರ್ಯಾದೆಗೆ ಅಂಜಿದ ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಹಿರೇವಡ್ರಕಲ್ ಗ್ರಾಮದಲ್ಲಿ ಗುರುವಾರ ಬೆಳಕಿಗೆ ಬಂದಿದೆ.

ಪಾರ್ವತಿ ರಮೇಶ ವಡ್ಡರ (೨೩) ಮೃತ ಮಹಿಳೆ. ಗ್ರಾಮದಲ್ಲಿ ಪಾನ್‌ಶಾಪ್ ಇಟ್ಟುಕೊಂಡು ಜೀವನ ಮಾಡುತ್ತಿದ್ದ ಇವರ ಅಂಗಡಿಗೆ ಆ. ೩೧ರಂದು ಅದೇ ಗ್ರಾಮದ ಯಮನೂರಪ್ಪ ಓಲೇಕಾರ ಡಬ್ಬದಲ್ಲಿದ್ದ ಸ್ವೀಟ್ ತಿಂದು ದುಡ್ಡು ಕೊಡದೆ ಹಾಗೆ ಹೊರಟಾಗ, ಮಹಿಳೆ ದುಡ್ಡು ಕೇಳಿದ್ದಾಳೆ. ಆಗ ಆತ ನಿಮ್ಮನ್ನು ದುಡ್ಡಿನಲ್ಲಿ ಸುಟ್ಟುಬಿಡುತ್ತೇನೆ ಎಂದು ಜಗಳ ಮಾಡಿದ್ದಾನೆ. ಅಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಆಗ ಪಾರ್ವತಿ ಪತಿ ರಮೇಶನಿಗೆ ಫೋನ್ ಮಾಡಿ ಕರೆದಿದ್ದಾಳೆ. ಆರೋಪಿ ಸಹ ತನ್ನ ಸಂಬಂಧಿ ಮುದಿರಾಜ ಓಲೇಕಾರನನ್ನು ಕರೆಸಿಕೊಂಡು ಜಗಳ ಮಾಡಿದ್ದಾನೆ.

ಆಗಿದ್ದೇನು?:

ಯಮನೂರಪ್ಪ ಆಗಾಗ ಪಾನ್‌ಶಾಪ್‌ಗೆ ಬರುತ್ತಿದ್ದ. ಮೃತಳ ಪತಿ ರಮೇಶನ ಮೊಬೈಲ್ ನಂಬರ್ ತೆಗೆದುಕೊಂಡಿದ್ದ. ರಮೇಶ ಅಂಗಡಿಯಲ್ಲಿ ಫೋನ್ ಬಿಟ್ಟು ಹೋದಾಗ ಪತ್ನಿಯ ಕಡೆ ಇರುತ್ತಿತ್ತು. ಆಗ ಯಮನೂರಪ್ಪ ಪಾರ್ವತಿಗೆ ವೀಡಿಯೋ ಕಾಲ್ ಮಾಡಿ ಅದನ್ನು ಸ್ಕ್ರೀನ್ ಶಾಟ್ ತೆಗೆದುಕೊಂಡಿದ್ದ. ಅಲ್ಲದೆ ಯಮನೂರಪ್ಪ ತನ್ನ ಮೊಬೈಲ್‌ನಲ್ಲಿ ಪಾರ್ವತಿ ಫೋಟೋವನ್ನು ವಾರದ ಹಿಂದೆ ವಾಟ್ಸ್‌ಆ್ಯಪ್‌ ಸ್ಟೇಟಸ್ ಇಟ್ಟುಕೊಂಡಿದ್ದ. ಆಗ ಮೃತ ಪಾರ್ವತಿ ಕಡೆಯವರು ಯಮನೂರಪ್ಪನ ಮನೆಗೆ ಹೋಗಿ ಬುದ್ಧಿವಾದ ಹೇಳಿದ್ದರು. ಇಷ್ಟಾದರೂ ಯಮನೂರಪ್ಪ ಓಲೇಕಾರ, ಮುದಿರಾಜ ಓಲೇಕಾರ, ನಿರುಪಾದಿ ಚೌಡಕಿ ರಮೇಶನ ಮನೆ ಹತ್ತಿರ ಬಂದು ನೀವು ಸಾಯಬೇಕು. ಸತ್ತರೇನು ಬಿಟ್ರೇನು ಎಂದು ಬೆದರಿಕೆ ಹಾಕಿದ್ದಲ್ಲದೆ ಸಾಯುವಂತೆ ಪ್ರಚೋದನೆ ನೀಡಿದ್ದರು. ಅಲ್ಲದೆ ನಿಮ್ಮ ಫೋಟೋ ನಮ್ಮ ಹತ್ತಿರ ಇವೆ. ಅವುಗಳನ್ನು ಹರಿ ಬಿಡುತ್ತೇವೆ ಎಂದು ಬೆದರಿಕೆ ಹಾಕಿದ್ದರಿಂದ ನನ್ನ ಪತ್ನಿ ಪಾರ್ವತಿ ಅವಮಾನ ತಾಳಲಾರದೆ ಬುಧವಾರ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನನ್ನ ಪತ್ನಿ ಸಾವಿಗೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ರಮೇಶ ವಡ್ಡರ ದೂರಿನಲ್ಲಿ ತಿಳಿಸಿದ್ದಾರೆ. ಈ ಕುರಿತು ಬೇವೂರು ಠಾಣೆಯಲ್ಲಿ ಪ್ರಕರಣ ದಾಕಲಾಗಿದೆ. ಡೆತ್ ನೋಟ್‌ನಲ್ಲಿ ಏನಿದೆ:ಯಮನೂರಪ್ಪ ಓಲೇಕಾರ, ಮುದಿರಾಜ ಓಲೇಕಾರ ನನಗೆ ಬೆದರಿಕೆ ಹಾಕುತ್ತಿದ್ದರು. ಫೋನ್‌ನಲ್ಲಿ ನನ್ನ ವೀಡಿಯೋ ಮಾಡಿ ಬಿಡುತ್ತೇನೆ ಎಂದು ಭಯ ಹುಟ್ಟಿಸಿದ್ದರು. ಅಲ್ಲದೆ ನನ್ನ ಫೋಟೊ ವಾಟ್ಸ್‌ಆ್ಯಪ್‌ ಸ್ಟೇಟಸ್ ಇಟ್ಟಿದ್ದಾರೆ. ಹೀಗಾಗಿ ಮರ್ಯಾದೆಗೆ ಅಂಜಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬೆದರಿಕೆಗೆ ಕಾರಣರಾದವರ ಹೆಸರು ಬರೆದು ಪಾರ್ವತಿ ವಡ್ಡರ್ ತಮ್ಮ ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ.