ಕೊಡಗಿನಲ್ಲಿ ಗಾಳಿ -ಮಳೆಯಾರ್ಭಟ : ಮನೆ ಮೇಲೆ ಮರ ಬಿದ್ದು ಮಹಿಳೆ ಸಾವು

| Published : May 25 2025, 02:38 AM IST

ಕೊಡಗಿನಲ್ಲಿ ಗಾಳಿ -ಮಳೆಯಾರ್ಭಟ : ಮನೆ ಮೇಲೆ ಮರ ಬಿದ್ದು ಮಹಿಳೆ ಸಾವು
Share this Article
  • FB
  • TW
  • Linkdin
  • Email

ಸಾರಾಂಶ

ಮೇ ತಿಂಗಳಲ್ಲಿ ಸುರಿದ ಅತಿ ಹೆಚ್ಚು ಮಳೆ ಇದಾಗಿದೆ. ಜಿಲ್ಲೆಯ ಪ್ರಮುಖ ನದಿ ಕಾವೇರಿ ಮೈದುಂಬಿ ಹರಿಯುತ್ತಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡಗು ಜಿಲ್ಲೆಯಾದ್ಯಂತ ಶನಿವಾರ ಗಾಳಿ ಸಹಿತ ಭಾರಿ ಮಳೆ ಸುರಿದು, ಜನ ಜೀವನ ಅಸ್ತವ್ಯಸ್ತಗೊಂಡಿತು. ಇದೇ ಮೊದಲ ಬಾರಿಗೆ ಮೇ ತಿಂಗಳಲ್ಲಿ ಸುರಿದ ಅತಿ ಹೆಚ್ಚು ಮಳೆ ಇದಾಗಿದ್ದು, ಜಿಲ್ಲೆಯ ಪ್ರಮುಖ ನದಿ ಕಾವೇರಿ ಮೈದುಂಬಿ ಹರಿಯುತ್ತಿದೆ.

ಲೈನ್ ಮನೆಯ ಮೇಲೆ ಮರಬಿದ್ದು ಮಹಿಳೆ ಸಾವನಪ್ಪಿರುವ ಘಟನೆ ಜಿಲ್ಲೆಯ ವಿರಾಜಪೇಟೆ ತಾಲೂಕಿನ ಆರ್ಜಿ ಗ್ರಾಮದಲ್ಲಿ ಶನಿವಾರ ನಡೆದಿದೆ. ಗ್ರಾಮದ ಕಬ್ಬಚ್ಚಿರ ಉತ್ತಪ್ಪ ಅವರ ಲೈನ್ ಮನೆಯಲ್ಲಿ ಘಟನೆ ಸಂಭವಿಸಿದ್ದು, ಗೌರಿ (46)ಸ್ಥಳದಲ್ಲೇ ಸಾವನಪ್ಪಿದ್ದಾರೆ. ವಿರಾಜಪೇಟೆ ನಗರ ಠಾಣಾಧಿಕಾರಿ ಪ್ರಮೋದ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಹಲವು ಕಡೆಗಳಲ್ಲಿ ಭಾರಿ ಮಳೆಯಾಗಿದೆ. ತಲಕಾವೇರಿ ಭಾಗಮಂಡಲ ಸುತ್ತಮುತ್ತ ಪ್ರದೇಶದಲ್ಲೂ ಕೂಡ ಭಾರಿ ಮಳೆಯಾಗಿದೆ.

ತಲಕಾವೇರಿ ದೇವಾಲಯದ ಮೆಟ್ಟಿಲುಗಳ ಮೇಲೆ ಜಲಪಾತದಂತೆ ನೀರು ಹರಿದಿದೆ. ಶುಕ್ರವಾರ ರಾತ್ರಿಯಿಂದಲೂ ಭಾರಿ ಮಳೆಯಾಗಿದೆ. ಕೊಡಗಿನಲ್ಲಿ ಮಳೆ ಅಬ್ಬರಿಸಿದ್ದು, ಮುಂಗಾರಿನ ವಾತಾವರಣ ಜಿಲ್ಲೆಯಲ್ಲಿ ಕಂಡುಬಂದಿದೆ.

ತಲಕಾವೇರಿ ಭಾಗಮಂಡಲ ವ್ಯಾಪ್ತಿಯಲ್ಲಿ ಭಾರಿ ಮಳೆ ಹಿನ್ನೆಲೆ ಭಾಗಮಂಡಲದ ತ್ರಿವೇಣಿ ಸಂಗಮ ಭರ್ತಿಯಾಗಿದೆ. ಕಾವೇರಿ, ಕನ್ನಿಕೆ ಮತ್ತು ಸುಜ್ಯೋತಿ ನದಿಗಳು ತುಂಬಿ ಹರಿಯುತ್ತಿದೆ. ತ್ರಿವೇಣಿ ಸಂಗಮ ಸ್ನಾನಘಟ್ಟ ಮುಳುಗಡೆಯಾಗುವ ಸಾಧ್ಯತೆಯಿದೆ.

ಮಳೆ ಹೀಗೆ ಮುಂದುವರಿದಲ್ಲಿ ಮಡಿಕೇರಿ ನಾಪೋಕ್ಲು ರಸ್ತೆಗಳ ಮೇಲೆ ನೀರು ಹರಿಯುವ ಸಾಧ್ಯತೆ ಎದುರಾಗಿದೆ.

ಭಾರಿ ಮಳೆ ಹಿನ್ನೆಲೆಯಲ್ಲಿ ಸೋಮವಾರ ಬೆಳಗ್ಗೆ 6 ಗಂಟೆ ವರೆಗೆ ಎರಡು ದಿನಗಳ ಕಾಲ ಕೊಡಗು ಜಿಲ್ಲೆಗೆ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಣೆ ಮಾಡಿದೆ. 204.5 ಮಿಲಿ ಮೀಟರ್ ಗೂ ಅಧಿಕ ಮಳೆಯಾಗುವ ಸಾಧ್ಯತೆಯಿದೆ.

ನಾಪೋಕ್ಲು, ಸಂಪಾಜೆ ಸೇರಿದಂತೆ ಜಿಲ್ಲೆಯ ಬಹುತೇಕ ಕಡೆ ಧಾರಾಕಾರ ಮಳೆಯಾಗಿದೆ. ಭಾರಿ ಗಾಳಿ ಸಹಿತ ವರುಣಾರ್ಭಟಕ್ಕೆ ಹೆಚ್ಚಿನ ಪ್ರಮಾಣದ ನೀರು ಚರಂಡಿಗಳಲ್ಲಿ ಹರಿಯುತ್ತಿದೆ.

ವಿರಾಜಪೇಟೆ ತಾಲೂಕಿನ ಬಿಳುಗುಂದ ರಸ್ತೆಯಲ್ಲಿ ಮರ ಬಿದ್ದು ಸಂಚಾರಕ್ಕೆ ತೊಂದರೆಯುಂಟಾಯಿತು. ವಿರಾಜಪೇಟೆಯ ಕಲ್ಲುಬಾಣೆ ರಸ್ತೆಯಲ್ಲಿ ಮರ ಬಿದ್ದು, ಕೆಲ ಕಾಲ ರಸ್ತೆ ಸಂಪರ್ಕ ಕಡಿತಗೊಂಡಿತ್ತು. ವಿರಾಜಪೇಟೆ ತಾಲೂಕಿನ ತೋರ ಗ್ರಾಮದಲ್ಲಿ ಭಾರಿ ಮಳೆಯಾಗಿ ಮರ ಬಿದ್ದು ಸುಮಾರು 9 ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.

ಮಡಿಕೇರಿ-ಮೈಸೂರು ರಾಷ್ಟ್ರೀಯ ಹೆದ್ದಾರಿ 275ರ ಸ್ಯಾಂಡಲ್ ಕಾಡು ಬಳಿ ನಿಯಂತ್ರಣ ಕಳೆದುಕೊಂಡ ಕಾರೊಂದು ಚರಂಡಿಗೆ ಬಿದ್ದಿದೆ. ಮಡಿಕೇರಿ ಭಾಗಮಂಡಲ ರಸ್ತೆಗೆ ಅಡ್ಡಲಾಗಿ ಬಿದ್ದ ಮರವನ್ನು ಗಾಳಿ ಮಳೆ ಲೆಕ್ಕಿಸದೆ ವಾಹನ ಚಾಲಕರ ಸಹಕಾರದೊಂದಿಗೆ ಮರ ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.