ರಾಷ್ಟ್ರೀಯ ಹೆದ್ದಾರಿ ದಾಟುತ್ತಿದ್ದ ಬೈಕ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟಿದ್ದು, ಅವರ ಪತಿ ಗಂಭೀರವಾಗಿ ಗಾಯಗೊಂಡ ಘಟನೆ ನಗರದ ಹೊರವಲಯದ ಚುಕ್ಕನಕಲ್ಲು ಗ್ರಾಮದ ಬಳಿ ಭಾನುವಾರ ನಡೆದಿದೆ.
ಕೊಪ್ಪಳ: ರಾಷ್ಟ್ರೀಯ ಹೆದ್ದಾರಿ ದಾಟುತ್ತಿದ್ದ ಬೈಕ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟಿದ್ದು, ಅವರ ಪತಿ ಗಂಭೀರವಾಗಿ ಗಾಯಗೊಂಡ ಘಟನೆ ನಗರದ ಹೊರವಲಯದ ಚುಕ್ಕನಕಲ್ಲು ಗ್ರಾಮದ ಬಳಿ ಭಾನುವಾರ ನಡೆದಿದೆ.
ತಾಲೂಕಿನ ಹುಲಿಗಿ ಗ್ರಾಮದ ಪರ್ವೀನಾಬಾನು ಹಾಗೂ ಅವರ ಪತಿ ಮುತುರಜಾಸಾಬ್ ಬೈಕ್‌ನಲ್ಲಿ ಸಂಬಂಧಿಕರ ಮದುವೆ ಕಾರ್ಯಕ್ರಮಕ್ಕೆ ಚುಕ್ಕನಕಲ್ಲು ಗ್ರಾಮಕ್ಕೆ ಬಂದಿದ್ದರು. ಕಾರ್ಯಕ್ರಮ ಮುಗಿಸಿ ಹುಲಿಗಿಗೆ ಮರಳುವಾಗ ಹೆದ್ದಾರಿ ದಾಟುತ್ತಿದ್ದ ಸಂದರ್ಭದಲ್ಲಿ ಕಾರು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಪರ್ವೀನಾಬಾನು ಸ್ಥಳದಲ್ಲೇ ಮೃತಪಟ್ಟಿದ್ದು, ಗಂಭೀರವಾಗಿ ಗಾಯಗೊಂಡ ಮುತುರಜಾಸಾಬ್ ಅವರನ್ನು ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.ಘಟನೆ ಬಳಿಕ ಆಕ್ರೋಶಗೊಂಡ ಗ್ರಾಮಸ್ಥರು ಚುಕ್ಕನಕಲ್ಲು ಬಳಿ ಮೇಲುಸೇತುವೆ ನಿರ್ಮಿಸಬೇಕು ಎಂದು ಆಗ್ರಹಿಸಿ ಹೆದ್ದಾರಿ ತಡೆ ನಡೆಸಿದರು. ಟ್ರ್ಯಾಕ್ಟರ್‌ಗಳಲ್ಲಿ ಮಣ್ಣು ತಂದು ರಸ್ತೆಗೆ ಅಡ್ಡಲಾಗಿ ಸುರಿದು ಸಂಚಾರ ಸ್ಥಗಿತಗೊಳಿಸಿದರು. ಇದರಿಂದ ಹೆದ್ದಾರಿಯಲ್ಲಿ ಕಿಲೋಮೀಟರ್‌ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತವು.
ಸ್ಥಳಕ್ಕೆ ಪೊಲೀಸರು ತೆರಳಿ ಗ್ರಾಮಸ್ಥರ ಮನವೊಲಿಸಿ ಪರಿಸ್ಥಿತಿ ನಿಯಂತ್ರಿಸಿದರು. ಪದೇ ಪದೇ ಅಪಘಾತಗಳು ಸಂಭವಿಸುತ್ತಿದ್ದರೂ ಮೇಲುಸೇತುವೆ ನಿರ್ಮಾಣಕ್ಕೆ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.ಶಾಸಕ ಹಿಟ್ನಾಳ ಭೇಟಿ: ಘಟನಾ ಸ್ಥಳಕ್ಕೆ ಶಾಸಕ ರಾಘವೇಂದ್ರ ಹಿಟ್ನಾಳ ಭೇಟಿ ನೀಡಿ, ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದರು. ಈ ವೇಳೆ ಆಕ್ರೋಶಗೊಂಡ ನಾಗರಿಕರು ಶಾಸಕರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡು, ಚುಕ್ಕನಕಲ್ಲು ಬಳಿ ಮೇಲ್ಸೇತುವೆ ನಿರ್ಮಾಣಕ್ಕೆ ಕೂಡಲೇ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಶಾಸಕ ರಾಘವೇಂದ್ರ ಹಿಟ್ನಾಳ ಮಾತನಾಡಿ, ರಾಷ್ಟ್ರೀಯ ಹೆದ್ದಾರಿಯ ಹಲವು ಕಡೆಗಳಲ್ಲಿ ಸೇತುವೆ ನಿರ್ಮಿಸಲಾಗಿದೆ. ಚುಕ್ಕನಕಲ್ಲು ಬಳಿಯೂ ಮೇಲ್ಸೇತುವೆ ಅವಶ್ಯಕತೆ ಇದೆ. ಈ ಕುರಿತು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಮಾತನಾಡಿ ಸೇತುವೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲು ಪ್ರಯತ್ನಿಸಲಾಗುವುದು ಎಂದು ಹೇಳಿದರು. ಚುಕ್ಕನಕಲ್ಲು ಬಳಿ ಮೇಲ್ಸೇತುವೆ ನಿರ್ಮಾಣ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುವ ಕೆಲಸವಾಗಿದ್ದು, ಈ ನಿಟ್ಟಿನಲ್ಲಿ ಅಗತ್ಯ ಪ್ರಯತ್ನ ನಡೆಸುವುದಾಗಿ ಅವರು ತಿಳಿಸಿದರು.