ಮೈಕ್ರೋ ಫೈನಾನ್ಸ್‌ ಹಾವಳಿಗೆ ಮಹಿಳೆ ಬಲಿ

| Published : Mar 02 2025, 01:16 AM IST

ಸಾರಾಂಶ

ಮೈಕ್ರೋ ಫೈನಾನ್ಸ್ ಸಾಲ ವಸೂಲಿ ಹಾವಳಿಗೆ ಮನನೊಂದು ಮಹಿಳೆಯೊಬ್ಬರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶನಿವಾರ ಜರುಗಿದೆ.

ಕನ್ನಡಪ್ರಭ ವಾರ್ತೆ ಹೂವಿನಹಡಗಲಿ

ಮೈಕ್ರೋ ಫೈನಾನ್ಸ್ ಸಾಲ ವಸೂಲಿ ಹಾವಳಿಗೆ ಮನನೊಂದು ಮಹಿಳೆಯೊಬ್ಬರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶನಿವಾರ ಜರುಗಿದೆ.

ತಾಲೂಕಿ ಮೈಲಾರ ಗ್ರಾಮದ ರತ್ನಮ್ಮ ತಳವಾರ (36) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ ಮಹಿಳೆ. ಅವರು 3- 4 ಫೈನಾನ್ಸ್‌ ಕಂಪನಿಗಳಲ್ಲಿ ಸುಮಾರು ₹3 ಲಕ್ಷದಷ್ಟು ಸಾಲ ತೆಗೆದಿದ್ದರು. ಸಾಲದ ಕಂತನ್ನು ಪ್ರತಿವಾರವೂ ತಪ್ಪದೆ ಪಾವತಿ ಮಾಡುತ್ತಿದ್ದರು. ಶನಿವಾರ ಹಾವೇರಿ ಜಿಲ್ಲೆಯ ಮೈಕ್ರೋ ಫೈನಾನ್ಸ್ ಕಂಪನಿಯ ಇಬ್ಬರು ಸಿಬ್ಬಂದಿ ಹಣ ಕಟ್ಟಿಸಿಕೊಳ್ಳಲು ರತ್ನಮ್ಮರ ಮನೆಗೆ ಬಂದಿದ್ದಾರೆ. ಈ ಸಮಯದಲ್ಲಿ ರತ್ನಮ್ಮ ಸದ್ಯ ಹಣದ ಅಡಚಣೆ ಇದ್ದು ಪಾವತಿ ಮಾಡಲು 2-3 ದಿನ ಕಾಲಾವಧಿ ಕೇಳಿದ್ದಾರೆ. ಆದರೆ ಇದಕ್ಕೆ ಒಪ್ಪದ ಫೈನಾನ್ಸ್ ಸಿಬ್ಬಂದಿ ಸಾಲದ ಕಂತನ್ನು ಪಾವತಿ ಮಾಡಬೇಕೆಂದು ಪಟ್ಟು ಹಿಡಿದು ಮನೆ ಮುಂದೆ ಕುಳಿತಾಗ ದಿಢೀರನೇ ಮನೆಯೊಳಗೆ ಹೋದ ಮಹಿಳೆ ನೇಣಿಗೆ ಶರಣಾಗಿದ್ದಾರೆ.

ಆ ಸಮಯದಲ್ಲಿ ಬಾಗಿಲಲ್ಲೆ ಕುಳಿತಿದ್ದ ಫೈನಾನ್ಸ್ ಕಂಪನಿಯ ಸಿಬ್ಬಂದಿಗಳನ್ನು ಕರೆದು, ನನ್ನ ಮಗಳು ನೇಣು ಹಾಕಿಕೊಂಡಿದ್ದಾಳೆ ದಯಮಾಡಿ ಸಹಾಯ ಮಾಡಿ ಅವಳನ್ನು ಉಳಿಸಿ ಎಂದು ರತ್ನಮ್ಮರ ತಾಯಿ ನೀಲಮ್ಮ ಪರಿ ಪರಿಯಾಗಿ ಬೇಡಿಕೊಂಡಿದ್ದಾಳೆ. ಆದರೆ ಈ ವಿಷಯ ತಿಳಿಯುತ್ತಲೆ ಫೈನಾನ್ಸ್‌ ಸಿಬ್ಬಂದಿ ಕೂಡಲೇ ಅಲ್ಲಿಂದ ಬೈಕ್ ಏರಿ ಹೋದರು ಎಂದು ತಿಳಿದು ಬಂದಿದೆ.

ಎರಡು ದಿನದ ಹಿಂದೆ ಇದೇ ಮಹಿಳೆಯ ಮನೆಗೆ ಗುತ್ತಲದ ಫೈನಾನ್ಸ್ ಕಂಪನಿಯ ಸಿಬ್ಬಂದಿ ಹೋಗಿ ಕೂಡಲೇ ಸಾಲ ಕಟ್ಟುವಂತೆ ತಾಕೀತು ಮಾಡಿದ್ದರಲ್ಲದೆ ನಿಮ್ಮ ಆಧಾರ್‌ ಕಾರ್ಡನ್ನು ಬ್ಯಾನ್ ಮಾಡುತ್ತೇವೆ, ಕೋರ್ಟಿನಿಂದ ನೋಟೀಸ್ ಕಳಿಸುತ್ತೇವೆ ಎಂದು ಹೆದರಿಸಿದ್ದರು ಎಂದು ತಿಳಿದು ಬಂದಿದೆ.

ಈ ಕುರಿತು ಮೃತ ಮಹಿಳೆಯ ಪತಿ ಸುಭಾಸ ಹಿರೇಹಡಗಲಿ ಪೊಲೀಸ್ ಠಾಣೆಯಲ್ಲಿ ಕಿರುಕುಳ ನೀಡಿದ ಫೈನಾನ್ಸ್ ಗಳ ವಿರುದ್ಧ ದೂರು ದಾಖಲಿಸಿದ್ದಾರೆ.