ಜಗತ್ತಿನ ಎಲ್ಲಾ ಚಟುವಟಿಕೆಗಳ ಕೇಂದ್ರಬಿಂದು ಸ್ತ್ರೀ: ಎಸ್ಪಿ

| Published : Oct 06 2024, 01:20 AM IST

ಜಗತ್ತಿನ ಎಲ್ಲಾ ಚಟುವಟಿಕೆಗಳ ಕೇಂದ್ರಬಿಂದು ಸ್ತ್ರೀ: ಎಸ್ಪಿ
Share this Article
  • FB
  • TW
  • Linkdin
  • Email

ಸಾರಾಂಶ

ಮಹಿಳಾ ದಸರಾ ಅಂಗವಾಗಿ ನಗರದಲ್ಲಿ ಮಹಿಳೆಯರಿಗೆ ಆಯೋಜಿಸಲಾಗಿದ್ದ ಬಕೆಟ್ ಮತ್ತು ಬಾಲ್ ಸ್ಪರ್ಧೆ ಲೆಮನ್ ಇನ್ ದ ಸ್ಪೂನ್, ಮ್ಯೂಸಿಕಲ್ ಚೇರ್, ಮಡಕೆ ಒಡೆಯುವ ಸ್ಪರ್ಧೆ, ಒಲೆರಹಿತ ಅಡುಗೆ ಸ್ಪರ್ಧೆಗಳಿಗೆ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರು ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಮಹಿಳಾ ದಸರಾ ಅಂಗವಾಗಿ ನಗರದಲ್ಲಿ ಮಹಿಳೆಯರಿಗೆ ಆಯೋಜಿಸಲಾಗಿದ್ದ ಬಕೆಟ್ ಮತ್ತು ಬಾಲ್ ಸ್ಪರ್ಧೆ ಲೆಮನ್ ಇನ್ ದ ಸ್ಪೂನ್, ಮ್ಯೂಸಿಕಲ್ ಚೇರ್, ಮಡಕೆ ಒಡೆಯುವ ಸ್ಪರ್ಧೆ, ಒಲೆರಹಿತ ಅಡುಗೆ ಸ್ಪರ್ಧೆ ಸ್ಪರ್ಧೆಗಳಿಗೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಚಾಲನೆ ನೀಡಿದರು.

ನಗರದ ಡಾ.ರಾಜ್‌ಕುಮಾರ್ ಜಿಲ್ಲಾ ರಂಗಮಂದಿರದ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಮಹಿಳೆಯರಿಗೆ ಹಾಗೂ ಮಹಿಳಾ ವಿಕಲಚೇತನರಿಗೆ ಪೂರ್ವಭಾವಿಯಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಬಕೆಟ್‌ಗೆ ಬಾಲ್ ಎಸೆಯುವ ಮೂಲಕ ಜಿಲ್ಲಾಧಿಕಾರಿಯವರು ವಿವಿಧ ಸ್ಪರ್ಧೆಗಳನ್ನು ಉದ್ಘಾಟಿಸಿದರು.

ವೇದಿಕೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು, ಚೆಲುವ ಚಾಮರಾಜನಗರ ದಸರಾ ಮಹೋತ್ಸವದ ಪ್ರಯುಕ್ತ ಅ.7, 8, 9ರಂದು ಮೂರು ದಿನಗಳ ಕಾಲ ಮುಖ್ಯ ಕಾರ್ಯಕ್ರಮಗಳು ನಡೆಯಲಿವೆ. ದಸರಾ ಇದೊಂದು ಸಂದರವಾದ ಹಬ್ಬ. ಮನೆಯಲ್ಲಿ ಎಲ್ಲರೂ ಒಟ್ಟಿಗೆ ಸೇರಿ ಹಬ್ಬ ಆಚರಿಸುವಂತೆ ಜಿಲ್ಲಾ ದಸರಾವನ್ನು ಹಬ್ಬದ ಮಾದರಿಯಲ್ಲಿ ಸಂತೋಷ, ಸಂಭ್ರಮದಿಂದ ಆಚರಿಸೋಣ. ಸ್ಪರ್ಧೆಗಳಲ್ಲಿ ಮಹಿಳೆಯರು ಹೆಚ್ಚು ಉತ್ಸಾಹದಿಂದ ಭಾಗವಹಿಸಬೇಕು ಎಂದರು.ಮಹಿಳೆಯರು, ಆಶಾ, ಅಂಗನವಾಡಿ ಕಾಯಕರ್ತೆಯರು, ಸ್ವಸಹಾಯ ಗುಂಪುಗಳ ಸದಸ್ಯರು ಸರ್ಕಾರದ ಅಭಿವೃದ್ಧಿ ಯೋಜನೆಗಳ ಶಕ್ತಿಯಾಗಿದ್ದಾರೆ. ಕಳೆದ ಬಾರಿಯ ದಸರಾದಲ್ಲಿ ಹೊಗೆರಹಿತ ಅಡುಗೆ ಹಾಗೂ ರಂಗೋಲಿ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಬಕೆಟ್ ಮತ್ತು ಬಾಲ್ ಸ್ಪರ್ಧೆ ಲೆಮನ್ ಇನ್ ದ ಸ್ಪೂನ್, ಮ್ಯೂಸಿಕಲ್ ಚೇರ್, ಮಡಕೆ ಒಡೆಯುವ ಸ್ಪರ್ಧೆಗಳನ್ನು ಈ ಬಾರಿ ಹೆಚ್ಚುವರಿಯಾಗಿ ಸೇರ್ಪಡೆಗೊಳಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತ ಅವರು ‘ಆಕಾಶದ ನೀಲಿಯಲ್ಲಿ, ಚಂದ್ರ ತಾರೆ ತೊಟ್ಟಿಲಲ್ಲಿ, ಬೆಳಕನಿಟ್ಟು ತೂಗಿದಾಕೆ, ನಿನಗೆ ಬೇರೆ ಹೆಸರು ಬೇಕೆ?, ಸ್ತ್ರೀ... ಎಂದರೇ ಅಷ್ಟೇ ಸಾಕೆ!’ ಕವಿ ಜಿ.ಎಸ್.ಶಿವರುದ್ರಪ್ಪ ಅವರ ಕಾವ್ಯದ ಸಾಲುಗಳನ್ನು ಉಲ್ಲೇಖಿಸಿ ಮಾತನಾಡಿ, ಈ ಜಗತ್ತಿನ ಎಲ್ಲಾ ಚಟುವಟಿಕೆಗಳ ಕೇಂದ್ರಬಿಂದು ಸ್ತ್ರೀ ಆಗಿದ್ದಾಳೆ. ಯಾವುದೇ ಪ್ರಾಣಿ-ಪಕ್ಷಿಯಾಗಿರಲಿ, ಎಲ್ಲಾ ಜೀವಿಗಳ ಕೇಂದ್ರಬಿಂದು ಮಹಿಳೆಯಾಗಿದ್ದಾಳೆ. ಈ ನಿಟ್ಟಿನಲ್ಲಿ ದಸರಾ ಕಾರ್ಯಕ್ರಮಗಳಿಗೆ ಮಹಿಳೆಯರ ಸಹಯೋಗ ಅವಶ್ಯವಾಗಿದೆ ಎಂದರು.

ಜಿಪಂ ಸಿಇಒ ಮೋನಾರೋತ್ ಮಾತನಾಡಿ, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಮಂಜುನಾಥ್, ನಿರೂಪಣಾಧಿಕಾರಿ ದಿನೇಶ್, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಸಕಲೇಶ್ವರ, ಇತರರು ಇದ್ದರು.