ಸಾರಾಂಶ
ಗಜೇಂದ್ರಗಡ: ಬೀದಿ ನಾಯಿಗಳ ದಾಳಿಗೆ ಮಹಿಳೆಯೋರ್ವಳು ಬಲಿಯಾದ ದಾರುಣ ಘಟನೆ ಗಜೇಂದ್ರಗಡ ಪಟ್ಟಣದಲ್ಲಿ ಭಾನುವಾರ ನಡೆದಿದೆ.
ಸ್ಥಳೀಯ ೭ ಮತ್ತು ೮ನೇ ವಾರ್ಡ್‌ನ ನಡುವಿನ ಚೋಳಿನವರ ಬಡಾವಣೆಯ ನಿವಾಸಿ ಪ್ರೇಮಾ ಶರಣಪ್ಪ ಚೋಳಿನ (೫೨) ನಾಯಿಗಳ ದಾಳಿಗೆ ಬಲಿಯಾದ ದುರ್ದೈವಿ.ಈ ಘಟನೆಯಿಂದ ರೊಚ್ಚಿಗೆದ್ದ ಜನತೆ ಪುರಸಭೆಯ ನಿಷ್ಕ್ರೀಯತೆ ಖಂಡಿಸಿ ಬೆಳಗ್ಗೆ ರಾಷ್ಟ್ರೀಯ ಹೆದ್ದಾರಿ ತಡೆದು ಕೆಲಕಾಲ ಪ್ರತಿಭಟನೆ ನಡೆಸಿದರು.
ಭಾನುವಾರ ಬೆಳಗ್ಗೆ ಹೂವು ತರಲು ತೆರಳಿದ್ದ ಪ್ರೇಮಾ ಚೋಳಿನ ಮೇಲೆ ಬೀದಿ ನಾಯಿಗಳ ಏಕಾಏಕಿ ದಾಳಿ ಮಾಡಿವೆ. ಇದರಿಂದ ಅವರ ಕೈ ಕಾಲುಗಳಿಗೆ ಪೆಟ್ಟಾಗಿದೆ. ಭಯಗೊಂಡ ಅವರು ನಾಯಿಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಓಡುವ ವೇಳೆ ಆಯ ತಪ್ಪಿ ಚರಂಡಿಯಲ್ಲಿ ಬಿದ್ದಿದ್ದರು. ಚಿಕಿತ್ಸೆಗಾಗಿ ಅವರನ್ನು ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿತ್ತು. ಚಿಕಿತ್ಸೆ ನೀಡಲು ಮುಂದಾದ ಸ್ವಲ್ಪ ಹೊತ್ತಿನಲ್ಲಿಯೇ ಅವರು ಕೊನೆಯುಸಿರೆಳೆದಿದ್ದಾರೆ.ಇದರಿಂದ ಆಕ್ರೋಶಗೊಂಡ ಮೃತಳ ಸಂಬಂಧಿಕರು ಹಾಗೂ ಬಡಾವಣೆಯ ನಿವಾಸಿಗಳು ಪುರಸಭೆ ವಿರುದ್ಧ ಧಿಕ್ಕಾರ ಕೂಗಿದ್ದಲ್ಲದೇ, ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕಲು ವಿಫಲವಾದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಸರ್ಕಾರಿ ಸಮುದಾಯ ಕೇಂದ್ರದ ಹೊರಗೆ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆಗೆ ಕೈಗೊಂಡರು.
ವಿಷಯ ತಿಳಿದು ಸ್ಥಳಕ್ಕೆ ಪುರಸಭೆ ಅಧ್ಯಕ್ಷ ಸುಭಾಸ ಮ್ಯಾಗೇರಿ, ತಹಸೀಲ್ದಾರ್ ಕಿರಣಕುಮಾರ ಕುಲಕರ್ಣಿ ಆಗಮಿಸಿದರು. ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕುವಂತೆ ಅನೇಕ ಬಾರಿ ಪುರಸಭೆ ಅಧಿಕಾರಿಗಳಿಗೆ ತಿಳಿಸಿದರೂ ಸಹ ಪ್ರಯೋಜನವಾಗಿಲ್ಲ. ಬೀದಿ ನಾಯಿ ಹಾವಳಿಯಿಂದ ಅನೇಕರು ಗಾಯಗೊಂಡಿದ್ದು, ಇಂದು ಅಮಾಯಕ ಮಹಿಳೆ ಸಾವನ್ನಪ್ಪಿದ್ದಾಳೆ. ಹೀಗಾಗಿ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು ಹಾಗೂ ಬೀದಿ ನಾಯಿ, ಬೀದಿ ದನಗಳಿಗೆ ಕಡಿವಾಣ ಹಾಕಲು ಆಡಳಿತ ಮುಂದಾಗಬೇಕು ಎಂದು ಒತ್ತಾಯಿಸಿದರು.ಪ್ರತಿಭಟನಾಕಾರರ ಅಹವಾಲು ಆಲಿಸಿದ ತಹಸೀಲ್ದಾರ್ ಕಿರಣಕುಮಾರ ಕುಲಕರ್ಣಿ, ಘಟನೆ ಕುರಿತು ಶಾಸಕ ಜಿ.ಎಸ್. ಪಾಟೀಲರಿಗೆ ತಿಳಸಿದ್ದು, ಅವರು ಆಘಾತ ವ್ಯಕ್ತ ಪಡಿಸಿ ಕುಟುಂಬಸ್ಥರಿಗೆ ಸಾಂತ್ವನ ತಿಳಿಸಿದ್ದಾರೆ. ₹೨ ಲಕ್ಷ ಪರಿಹಾರ ಜತೆಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಮತ್ತಷ್ಟು ಪರಿಹಾರ ಕೊಡಿಸುವದಾಗಿ ತಿಳಿಸಿದ್ದಾರೆ ಎಂದರು. ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಗೂ ಬೀದಿ ದಿನಗಳನ್ನು ಸ್ಥಳಾಂತರಿಸಲು ತಕ್ಷಣವೇ ಕಾರ್ಯ ಪ್ರವೃತ್ತರಾಗಲು ಪುರಸಭೆ ಅಧಿಕಾರಿಗಳಿಗೆ ಆದೇಶಿಸಿದರು. ಪುರಸಭೆ ನಿಧಿಯಿಂದ ಮೃತ ಮಹಿಳೆ ಕುಟುಂಬಕ್ಕೆ ₹೩ ಲಕ್ಷ ನೀಡುವುದಾಗಿ ಪುರಸಭೆ ಅಧ್ಯಕ್ಷ ಸುಭಾಸ ಮ್ಯಾಗೇರಿ ತಿಳಿಸಿದರು.
ಈ ವೇಳೆ ಪುರಸಭೆ ಪ್ರಭಾರಿ ಮುಖ್ಯಾಧಿಕಾರಿ ಬಸವರಾಜ ಬಳಗಾನೂರ, ಪಿಎಸ್‌ಐ ಸೋಮನಗೌಡ ಗೌಡ್ರ, ಸಿದ್ದಪ್ಪ ಬಂಡಿ, ಅಶೋಕ ವನ್ನಾಲ, ಎಚ್.ಎಸ್. ಸೋಂಪುರ, ಬಿ.ಎಸ್. ಶೀಲವಂತರ, ಅಮರೇಶ ಬಳಿಗೇರ, ಪ್ರಭು ಚವಡಿ, ರಾಜು ಸಾಂಗ್ಲೀಕರ, ಎಂ.ಎಸ್. ಹಡಪದ, ಬಸವರಾಜ ಕೊಟಗಿ, ಉಮೇಶ ರಾಠೋಡ, ಸುರೇಶ ಚವಡಿ, ರಾಜು ಹೊಸಂಗಡಿ, ಸುಭಾಸ ಚೋಳಿನ ಸೇರಿ ಇತರರು ಇದ್ದರು.