ಎರಡು ರಾಟ್ ವೀಲರ್ ನಾಯಿಗಳ ದಾಳಿಗೆ ಸಿಲುಕಿದ ದಾರಿಹೋಕ ಮಹಿಳೆಯೊಬ್ಬಳು ಗಾಯಗೊಂಡು, ನಂತರ, ಆಸ್ಪತ್ರೆಯಲ್ಲಿ ಅಸುನೀಗಿದ ಘಟನೆ ತಾಲೂಕಿನ ಹೊನ್ನೂರು ಗೊಲ್ಲರಹಟ್ಟಿ ಗ್ರಾಮದಲ್ಲಿ ಗುರುವಾರ ತಡರಾತ್ರಿ ವರದಿಯಾಗಿದೆ.

ಕನ್ನಡಪ್ರಭ ವಾರ್ತೆ, ದಾವಣಗೆರೆ

ಎರಡು ರಾಟ್ ವೀಲರ್ ನಾಯಿಗಳ ದಾಳಿಗೆ ಸಿಲುಕಿದ ದಾರಿಹೋಕ ಮಹಿಳೆಯೊಬ್ಬಳು ಗಾಯಗೊಂಡು, ನಂತರ, ಆಸ್ಪತ್ರೆಯಲ್ಲಿ ಅಸುನೀಗಿದ ಘಟನೆ ತಾಲೂಕಿನ ಹೊನ್ನೂರು ಗೊಲ್ಲರಹಟ್ಟಿ ಗ್ರಾಮದಲ್ಲಿ ಗುರುವಾರ ತಡರಾತ್ರಿ ವರದಿಯಾಗಿದೆ.

ತಾಲೂಕಿನ ಮಲ್ಲಶೆಟ್ಟಿಹಳ್ಳಿ ಗ್ರಾಮದ ನಿವಾಸಿ ಅನಿತಾ (38) ಮೃತ ಮಹಿಳೆ. ಗುರುವಾರ ರಾತ್ರಿ ಸುಮಾರು 11.30ರ ವೇಳೆ ಮನೆಯಲ್ಲಿ ಮಕ್ಕಳೊಂದಿಗೆ ಜಗಳ ಮಾಡಿಕೊಂಡ ಅನಿತಾ, ಕತ್ತಲ ದಾರಿಯಲ್ಲಿ ತನ್ನ ತವರೂರಿಗೆ ನಡೆದುಕೊಂಡು ಹೊರಟಿದ್ದರು. ಈ ವೇಳೆ, ಹೊನ್ನೂರು ಗೊಲ್ಲರಹಟ್ಟಿ ಹೊರವಲಯದಲ್ಲಿ ಯಾರೋ ಅಪರಿಚಿತರು ಬಿಟ್ಟು ಹೋಗಿದ್ದ ಎರಡು ರಾಟ್‌ ವೀಲರ್ ನಾಯಿಗಳು ಏಕಾಏಕಿ ಬೊಗಳುತ್ತಾ ಬಂದು, ಇವರ ಮೇಲೆ ದಾಳಿ ನಡೆಸಿದವು. ಈ ವೇಳೆ, ಅವರು ಜೋರಾಗಿ ಕಿರುಚಿಕೊಂಡರಾದರೂ, ಯಾರಿಗೂ ಕೇಳಿಸಿಲ್ಲ. ಸಮೀಪದ ಮನೆಯವರಿಗೆ ನಾಯಿ ಬೊಗಳಿದ ಶಬ್ದ ಕೇಳಿಸಿತಾದರೂ, ಏನಕ್ಕೋ ಕೂಗುತ್ತಿರಬಹುದು ಎಂದು ಸುಮ್ಮನಾದರು.

ನಾಯಿಗಳು ಅವರ ದೇಹದ ಮೇಲೆ ಸುಮಾರು 50ಕ್ಕೂ ಹೆಚ್ಚು ಕಡೆ ಗಂಭೀರವಾಗಿ ಕಚ್ಚಿ ಗಾಯಗೊಳಿಸಿದ್ದರಿಂದ, ಅನಿತಾ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಬೆಳಗಿನ ಜಾವ 3.30ರ ವೇಳೆ ಹೊಲಕ್ಕೆ ನೀರು ಹಾಯಿಸಲು ಹೊರಟಿದ್ದ ರೈತನೊಬ್ಬ ಇದನ್ನು ಗಮನಿಸಿದ್ದು, ಗ್ರಾಮಸ್ಥರಿಗೆ ವಿಷಯ ತಿಳಿಸಿದ. ಗ್ರಾಮಸ್ಥರು ಆಗಮಿಸಿ, ಗ್ರಾಮದ ಜಮೀನಿನಲ್ಲೇ ಬೀಡು ಬಿಟ್ಟಿದ್ದ ನಾಯಿಗಳನ್ನು ಹಿಡಿದು, ಹಗ್ಗದಿಂದ ಒಂದೆಡೆ ಅವುಗಳನ್ನು ಕಟ್ಟಿ ಹಾಕಿದ್ದಾರೆ.

ಗಂಭೀರವಾಗಿ ಗಾಯಗೊಂಡು ಬಿದ್ದಿದ್ದ ಅನಿತಾರನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಮಾರ್ಗ ಮಧ್ಯೆ ಅವರು ಸಾವನ್ನಪ್ಪಿದ್ದಾರೆ. ಶಿರಾ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ, ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರಿಸಲಾಗಿದೆ.ಈ ನಾಯಿಗಳು ಯಾರವು ಎಂಬುದು ಇನ್ನೂ ತಿಳಿದು ಬಂದಿಲ್ಲ. ಯಾರೋ ಪ್ರತಿಷ್ಠಿತರು ಈ ನಾಯಿಗಳನ್ನು ಮನೆಯಲ್ಲಿ ಸಾಕಿದ್ದು, ಈ ಜೋಡಿ ನಾಯಿಗಳ ಹುಚ್ಚಾಟ ತಡೆಯಲಾರದೆ ಹೊನ್ನೂರು ಗೊಲ್ಲರಹಟ್ಟಿ ಬಳಿ ಬಿಟ್ಟು ಹೋಗಿರುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.