25 ವರ್ಷಗಳ ಹಿಂದೆ ಕಾಣೆಯಾಗಿದ್ದ ಹೊಸಪೇಟೆ ತಾಲೂಕಿನ ಮಹಿಳೆ ಹಿಮಾಚಲ ಪ್ರದೇಶದಲ್ಲಿ ಪತ್ತೆ

| Published : Dec 24 2024, 12:45 AM IST / Updated: Dec 24 2024, 11:05 AM IST

25 ವರ್ಷಗಳ ಹಿಂದೆ ಕಾಣೆಯಾಗಿದ್ದ ಹೊಸಪೇಟೆ ತಾಲೂಕಿನ ಮಹಿಳೆ ಹಿಮಾಚಲ ಪ್ರದೇಶದಲ್ಲಿ ಪತ್ತೆ
Share this Article
  • FB
  • TW
  • Linkdin
  • Email

ಸಾರಾಂಶ

ಬರೋಬ್ಬರಿ 25 ವರ್ಷಗಳ ಹಿಂದೆ ಕಾಣೆಯಾಗಿದ್ದ ಹೊಸಪೇಟೆ ತಾಲೂಕಿನ ಡಣನಾಯಕನಕೆರೆಯ ಸಾಕಮ್ಮ ಎಂಬ ಮಹಿಳೆ ಹಿಮಾಚಲ ಪ್ರದೇಶದಲ್ಲಿ ಪತ್ತೆಯಾಗಿದ್ದು, ಬಳ್ಳಾರಿಯ ಗುಗ್ಗರಹಟ್ಟಿಯಲ್ಲಿ ವಾಸವಾಗಿರುವ ಅವರ ಕುಟುಂಬ ಸದಸ್ಯರಲ್ಲಿ ಸಂತಸ ಮನೆ ಮಾಡಿದೆ.

ಬಳ್ಳಾರಿ: ಬರೋಬ್ಬರಿ 25 ವರ್ಷಗಳ ಹಿಂದೆ ಕಾಣೆಯಾಗಿದ್ದ ಹೊಸಪೇಟೆ ತಾಲೂಕಿನ ಡಣನಾಯಕನಕೆರೆಯ ಸಾಕಮ್ಮ ಎಂಬ ಮಹಿಳೆ ಹಿಮಾಚಲ ಪ್ರದೇಶದಲ್ಲಿ ಪತ್ತೆಯಾಗಿದ್ದು, ಬಳ್ಳಾರಿಯ ಗುಗ್ಗರಹಟ್ಟಿಯಲ್ಲಿ ವಾಸವಾಗಿರುವ ಅವರ ಕುಟುಂಬ ಸದಸ್ಯರಲ್ಲಿ ಸಂತಸ ಮನೆ ಮಾಡಿದೆ.

ಸಾಕಮ್ಮ ಬಗ್ಗೆ ಹಿಮಾಚಲ ಪ್ರದೇಶದ ಮಂಡಿ ಮೂಲದ ಐಪಿಎಸ್‌ ಅಧಿಕಾರಿಯೊಬ್ಬರು ಕರ್ನಾಟಕದ ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಣಿವಣ್ಣನ್ ಅವರಿಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಬಳ್ಳಾರಿಯಿಂದ ಹಿಮಾಚಲದ ಮಂಡಿ ಜಿಲ್ಲೆಯ ಭಾಂಗ್ರೋಟ್‌ಗೆ ಮೂವರು ಅಧಿಕಾರಿಗಳ ತಂಡ ಸಾಕಮ್ಮರನ್ನು ಕರೆತರಲು ತೆರಳಿದೆ. ಸಾಕಮ್ಮ ಹಲವು ಸಂಕಷ್ಟ ಎದುರಿಸಿರುವುದರ ಕುರಿತು ಅಧಿಕಾರಿಗಳ ಬಳಿ ಅಳಲು ತೋಡಿಕೊಂಡಿದ್ದಾರೆ.

ಹೊಸಪೇಟೆಯಲ್ಲಿ 25 ವರ್ಷಗಳ ಹಿಂದೆ ನಡೆದ ತಮ್ಮ ಸಂಬಂಧಿಕರ ಮದುವೆಗೆ ಮಕ್ಕಳೊಂದಿಗೆ ಸಾಕಮ್ಮ ತೆರಳಿದ್ದರು. ಅಲ್ಲಿ ಆಕಸ್ಮಿಕವಾಗಿ ನಿಗೂಢವಾಗಿ ರೈಲೊಂದನ್ನು ಹತ್ತಿ ಚಂಢೀಗಡ ತಲುಪಿದ್ದರು. ಬಳಿಕ ಉತ್ತರ ಭಾರತದ ಎರಡು ಮೂರು ರಾಜ್ಯಗಳಲ್ಲಿ ಚಿಂದಿ ಆಯುತ್ತ ಹೊಟ್ಟೆ ಹೊರೆದಿದ್ದರು. ಅಂತಿಮವಾಗಿ ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ನಿರಾಶ್ರಿತರ ಶಿಬಿರ ಸೇರಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸಾಕಮ್ಮ ನಾಪತ್ತೆಯಾದ ಬಳಿಕ ಮರಳಿ ಬಾರದ್ದರಿಂದ ಮೃತಪಟ್ಟಿರಬಹುದೆಂದು ಕುಟುಂಬಸ್ಥರು ತಿಥಿ ಕಾರ್ಯವನ್ನೂ ಮಾಡಿದ್ದರು ಎಂದು ಹೇಳಲಾಗಿದೆ.

ಬಳ್ಳಾರಿಯ ಗುಗ್ಗರಹಟ್ಟಿಯಲ್ಲಿ ಅವರ ಮಕ್ಕಳು ಇರುವುದು ಅಧಿಕಾರಿಗಳಿಗೆ ಗೊತ್ತಾಗಿದೆ. ಮಗ ವಿರಾಟ್‌, ಲಕ್ಷ್ಮೀ ಅವರನ್ನು ವಿಡಿಯೊ ಕರೆ ಮಾಡಿಸಿ ಸಾಕಮ್ಮ ಅವರೊಂದಿಗೆ ಮಾತನಾಡಿಸಲಾಗಿದೆ. ಆದರೆ, ಅವರನ್ನು ಸಾಕಮ್ಮ ಗುರುತು ಹಿಡಿದಿಲ್ಲ ಎನ್ನಲಾಗಿದೆ. ಸಾಕಮ್ಮರನ್ನು ಬಳ್ಳಾರಿಗೆ ಕರೆತರುವ ದಿಶೆಯಲ್ಲಿ ಅಧಿಕಾರಿಗಳು ಹಿಮಾಚಲಪ್ರದೇಶಕ್ಕೆ ತೆರಳಿದ್ದಾರೆ. ಡಣನಾಯಕನಕೆರೆ ಮೂಲದ ಸಾಕಮ್ಮರನ್ನು ಅವರ ಸಂಬಂಧಿಕರ ಬಳಿ ಸೇರಿಸುವ ಕಾರ್ಯವನ್ನು ಅಧಿಕಾರಿಗಳು ಮಾಡಲಿದ್ದಾರೆ.