ಸಾರಾಂಶ
ತಲೆಮರೆಸಿಕೊಂಡಿದ್ದ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಿಗೆ ಬಲೆ ಬೀಸಿದ್ದ ಗ್ರಾಮಾಂತರ ಠಾಣೆ ಪೊಲೀಸರು, ಎ 1ಆರೋಪಿ ರವಿಕುಮಾರ್ ಈತನ ಪತ್ನಿ ಎ 2 ಆರೋಪಿ ಆಶಾ, ಇಬ್ಬರನ್ನು ಭಾನುವಾರ ಬೆಂಗಳೂರಿನ ರೈಲ್ವೆ ನಿಲ್ದಾಣದಲ್ಲಿ ಬಂಧಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಕನಕಪುರ
ಸಾಲ ಪಡೆದಿದ್ದ ಹಣ ವಾಪಸ್ ಕೊಡುವುದಾಗಿ ಕರೆದು ಮಹಿಳೆಯನ್ನು ಕೊಲೆ ಮಾಡಿದ್ದ ಪ್ರಕರಣದ ಪ್ರಮುಖ ಇಬ್ಬರು ಆರೋಪಿಗಳನ್ನು ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದಾರೆ.ತಾಲೂಕಿನ ಶ್ರೀನಿವಾಸನಹಳ್ಳಿ ರವಿಕುಮಾರ್(40) ಈತನ ಪತ್ನಿ ಆಶಾ (30) ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.
ಕಳೆದ ಜೂನ್ 4 ರಂದು ಮಂಗಳವಾರ ಕಾಣೆಯಾಗಿದ್ದ ಕೋಡಿಹಳ್ಳಿ ಹೋಬಳಿಯ ಟಿ. ಗೊಲ್ಲಹಳ್ಳಿ ಮಹಿಳೆ ಸುನಂದಮ್ಮ (55) ಶವ ಮರುದಿನ ಬೆಳಗ್ಗೆ ಚೌಕಸಂದ್ರ ಗ್ರಾಮದ ರೇಷ್ಮೆ ತೋಟದಲ್ಲಿ ಗುಂಡಿ ತೋಡಿ ಹೂತಿಟ್ಟಿದ್ದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮೃತರ ಮಗ ವಿದ್ಯಾನಂದ ನೀಡಿದ ದೂರಿನ ಮೇರೆಗೆ ಎ1 ಶ್ರೀನಿವಾಸನ ಹಳ್ಳಿ ರವಿಕುಮಾರ್,ಎ 2 ಈತನ ಪತ್ನಿ ಆಶಾ,ಎ 3 ಆಶಾ ಅವರ ತಂದೆ ನಾಗರಾಜು,ಇವರ ತಾಯಿ ರತ್ನಮ್ಮ ಸೇರಿ ನಾಲ್ವರು ಆರೋಪಿಗಳ ಮೇಲೆ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದ ಗ್ರಾಮಾಂತರ ಠಾಣಾ ಪೊಲೀಸರು, ಪ್ರಕರಣದ ಎ 2 ಆರೋಪಿ ಆಶಾ ಅವರ ತಂದೆ ಎ 3 ಆರೋಪಿ ತುಂಗಣಿ ಗ್ರಾಮದ ನಾಗರಾಜು ಅವರನ್ನು ಬಂಧಿಸಿ, ಉಳಿದ ಆರೋಪಿಗಳಿಗಾಗಿ ಶೋಧ ಕಾರ್ಯ ಕೈಗೊಂಡಿದ್ದರು.ತಲೆಮರೆಸಿಕೊಂಡಿದ್ದ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಿಗೆ ಬಲೆ ಬೀಸಿದ್ದ ಗ್ರಾಮಾಂತರ ಠಾಣೆ ಪೊಲೀಸರು, ಎ 1ಆರೋಪಿ ರವಿಕುಮಾರ್ ಈತನ ಪತ್ನಿ ಎ 2 ಆರೋಪಿ ಆಶಾ, ಇಬ್ಬರನ್ನು ಭಾನುವಾರ ಬೆಂಗಳೂರಿನ ರೈಲ್ವೆ ನಿಲ್ದಾಣದಲ್ಲಿ ಬಂಧಿಸಿದ್ದಾರೆ.
ವಿಪರೀತ ಸಾಲ ಮಾಡಿಕೊಂಡು ಸಾಲ ತೀರಿಸಲು ಸಾಧ್ಯವಾಗಲಿಲ್ಲ, ಸುನಂದಮ್ಮ ಅವರ ಬಳಿ ಹಣ ಸಾಲ ಪಡೆದಿದ್ದೆ, ಅದನ್ನು ವಾಪಸ್ ಕೊಡುತ್ತೇವೆ ಎಂದು ಕಳೆದ ಜೂನ್ 4 ರಂದು ಮಂಗಳವಾರ ಬೆಳಗ್ಗೆ ಸುನಂದಮ್ಮ ಅವರನ್ನು ಚೌಕಸಂದ್ರ ಗ್ರಾಮದ ಬಳಿ ಗುತ್ತಿಗೆಗೆ ಮಾಡಿಕೊಂಡಿದ್ದ ರೇಷ್ಮೆ ತೋಟಕ್ಕೆ ಕರೆಸಿಕೊಂಡು, ರೇಷ್ಮೆ ಹುಳು ಸಾಕಾಣಿಕೆ ಮನೆಯಲ್ಲಿ ಸುನಂದಮ್ಮ ಅವರ ಕುತ್ತಿಗೆಗೆ ಟವಲ್ ಬಿಗಿದು ಕೊಲೆ ಮಾಡಿ, ಶವವನ್ನು ಒಂದು ದಿನ ಅಲ್ಲೇ ಇರಿಸಿ ಮಂಗಳವಾರ ಮುಂಜಾನೆ ಮೂರು ಗಂಟೆ ಸಮಯದಲ್ಲಿ ರೇಷ್ಮೆ ತೋಟದಲ್ಲಿ ಗುಂಡಿ ತೆಗೆದು ಹೂತಿಟ್ಟಿದ್ದೆವು. ಆಕೆ ಮೈ ಮೇಲಿದ್ದ ಚಿನ್ನಾಭರಣವನ್ನು ಅಡಮಾನ ವಿಟ್ಟು 1.44 ಸಾಲ ಪಡೆದಿದ್ದೆ ಎಂದು ವಿಚಾರಣೆ ವೇಳೆ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸೋಮವಾರ ಘಟನಾ ಸ್ಥಳಕ್ಕೆ ಆರೋಪಿಗಳನ್ನು ಕರೆತಂದು ಸ್ಥಳ ಮಹಜರು ನಡೆಸಿರುವ ಪೊಲೀಸರು, ಮುಂದಿನ ಕ್ರಮ ಕೈಗೊಂಡಿದ್ದಾರೆ.