12 ವರ್ಷ ಬಿಡುವಿನ ಬಳಿಕ ಪಿಯುಸಿ ಪಾಸಾದ ಮಹಿಳೆ

| Published : Apr 14 2024, 01:53 AM IST / Updated: Apr 14 2024, 11:34 AM IST

ಸಾರಾಂಶ

ಪಟ್ಟಣದ ಯಮನೂರಪ್ಪ ಹಾಗೂ ಲಕ್ಷ್ಮಿ ದಂಪತಿ ಮಗಳಾದ ಕೆ.ಎಂ. ರಾಜೇಶ್ವರಿ ಓದುವುದರಲ್ಲಿ ಆಸಕ್ತಿ ಇದ್ದರೂ ಬಡತನದ ಕಾರಣದಿಂದ 10ನೇ ತರಗತಿಗೆ ತಮ್ಮ ವಿದ್ಯಾಭ್ಯಾಸ ಮೊಟಕುಗೊಳಿಸಿದ್ದರು.

ಬಿ.ಎಚ್.ಎಂ.ಅಮರನಾಥಶಾಸ್ತ್ರಿ

ಕಂಪ್ಲಿ: ಪಟ್ಟಣದ ನಿವಾಸಿ ಕೆ.ಎಂ. ರಾಜೇಶ್ವರಿ ತಮ್ಮ ಶೈಕ್ಷಣಿಕ ಜೀವನದ 12 ವರ್ಷಗಳ ಬಿಡುವಿನ ಬಳಿಕ ದ್ವಿತೀಯ ಪಿಯುಸಿ ಪರೀಕ್ಷೆ ಬರೆದು ಮೊದಲ ಪ್ರಯತ್ನದಲ್ಲೇ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗುವ ಮೂಲಕ ಮಹಿಳೆಯರಿಗೆ ಮಾದರಿಯಾಗಿದ್ದಾರೆ.

ಪಟ್ಟಣದ ಯಮನೂರಪ್ಪ ಹಾಗೂ ಲಕ್ಷ್ಮಿ ದಂಪತಿ ಮಗಳಾದ ಕೆ.ಎಂ. ರಾಜೇಶ್ವರಿ ಓದುವುದರಲ್ಲಿ ಆಸಕ್ತಿ ಇದ್ದರೂ ಬಡತನದ ಕಾರಣದಿಂದ 10ನೇ ತರಗತಿಗೆ ತಮ್ಮ ವಿದ್ಯಾಭ್ಯಾಸ ಮೊಟಕುಗೊಳಿಸಿದ್ದರು. 2011ರಲ್ಲಿ ರಘು ಎಂಬ ವರನೊಂದಿಗೆ ವಿವಾಹವಾಗಿ ತಮ್ಮ ಆಸೆಗಳನ್ನೆಲ್ಲ ಬದಿಗೊತ್ತಿ ವೈವಾಹಿಕ ಜೀವನ ಆರಂಭಿಸಿದರು. ಆದರೆ 2023ರ ಮೇ 24 ರಂದು ರಾಜೇಶ್ವರಿಯ ಪತಿ ರಘು ಅನಾರೋಗ್ಯದಿಂದ ಮೃತಪಟ್ಟರು. ಇದರಿಂದ ಧೃತಿಗೆಡದೇ ತಮ್ಮ ಹಾಗೂ ತಮ್ಮ ಎರಡು ಮಕ್ಕಳ ಭವಿಷ್ಯ ಉಜ್ವಲದ ಕನಸು ಹೊತ್ತು ಸ್ಥಳೀಯ ಮದರ್ ತೆರೇಸಾ ಪದವಿ ಪೂರ್ವ ಕಾಲೇಜಿನಲ್ಲಿ ಕಲಾ ವಿಭಾಗ ಆಯ್ಕೆ ಮಾಡಿಕೊಂಡು ದ್ವಿತೀಯ ಪಿಯುಸಿ ವಿದ್ಯಾಭ್ಯಾಸ ಆರಂಭಿಸಿದರು. ನಿರಂತರ ಪರಿಶ್ರಮ, ಅಭ್ಯಾಸದಿಂದ ಪರೀಕ್ಷೆಯಲ್ಲಿ 600ಕ್ಕೆ 504 ಅಂಕಗಳನ್ನು ಗಳಿಸುವ ಮೂಲಕ ಪ್ರಥಮ ದರ್ಜೆಯಲ್ಲಿ ತೇರ್ಗಡೆಗೊಂಡು ಅನೇಕರಿಗೆ ಮಾದರಿಯಾಗಿದ್ದಾರೆ.

ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವೆ:  ವಿದ್ಯಾಭ್ಯಾಸ ಮುಂದುವರಿಸಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಮೂಲಕ ಸರ್ಕಾರಿ ನೌಕರಿ ಪಡೆದುಕೊಳ್ಳಬೇಕೆಂಬ ಕನಸು ಕಟ್ಟಿಕೊಂಡಿದ್ದೇನೆ. ಶಿಕ್ಷಣವಂತರಾಗಿದ್ದರೆ ಎಲ್ಲಿಯಾದರೂ ಜೀವನ ಸಾಗಿಸಬಹುದಾಗಿದ್ದು, ಪ್ರತಿಯೊಬ್ಬ ಹೆಣ್ಣು ಮಗು ಕಡ್ಡಾಯವಾಗಿ ಶಿಕ್ಷಣ ಪಡೆಯಬೇಕು ಎನ್ನುತ್ತಾರೆ ಕೆ.ಎಂ.ರಾಜೇಶ್ವರಿ.