ಬೆಳಗಾವಿ : ಸಾರ್ವಜನಿಕರೆದುರೇ ಮಹಿಳೆ ಬಟ್ಟೆ ಹರಿದು ಅಮಾನುಷವಾಗಿ ಹಲ್ಲೆ - ಮೂವರ ಬಂದನ

| Published : Nov 17 2024, 01:19 AM IST / Updated: Nov 17 2024, 09:07 AM IST

ಬೆಳಗಾವಿ : ಸಾರ್ವಜನಿಕರೆದುರೇ ಮಹಿಳೆ ಬಟ್ಟೆ ಹರಿದು ಅಮಾನುಷವಾಗಿ ಹಲ್ಲೆ - ಮೂವರ ಬಂದನ
Share this Article
  • FB
  • TW
  • Linkdin
  • Email

ಸಾರಾಂಶ

ವಂಟಮೂರಿ ಗ್ರಾಮದಲ್ಲಿ ಮಹಿಳೆಯನ್ನು ಬೆತ್ತಲೆಗೊಳಿಸಿ ಕಂಬಕ್ಕೆ ಕಟ್ಟಿಹಾಕಿ ಅಮಾನುಷವಾಗಿ ಹಲ್ಲೆ ನಡೆದ ಘಟನೆ ಜನಮಾನಸದಿಂದ ಮಾಸುವ ಮುನ್ನವೇ ಈಗ ಅಂತಹದ್ದೇ ಮತ್ತೊಂದು ಅಮಾನವೀಯ ಕೃತ್ಯ ನಡೆದಿರುವುದು ಬೆಳಕಿಗೆ ಬಂದಿದೆ. ಅಲ್ಲದೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.

 ಬೆಳಗಾವಿ : ವಂಟಮೂರಿ ಗ್ರಾಮದಲ್ಲಿ ಮಹಿಳೆಯನ್ನು ಬೆತ್ತಲೆಗೊಳಿಸಿ ಕಂಬಕ್ಕೆ ಕಟ್ಟಿಹಾಕಿ ಅಮಾನುಷವಾಗಿ ಹಲ್ಲೆ ನಡೆದ ಘಟನೆ ಜನಮಾನಸದಿಂದ ಮಾಸುವ ಮುನ್ನವೇ ಈಗ ಅಂತಹದ್ದೇ ಮತ್ತೊಂದು ಅಮಾನವೀಯ ಕೃತ್ಯ ನಡೆದಿರುವುದು ಬೆಳಕಿಗೆ ಬಂದಿದೆ. ಅಲ್ಲದೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.

ನಗರದ ವಡ್ಡರವಾಡಿಯಲ್ಲಿ ವೇಶ್ಯಾವಾಟಿಕೆಯ ಆರೋಪ ಹೊರಿಸಿ ಸಾರ್ವಜನಿಕವಾಗಿ ಮಹಿಳೆಯೊಬ್ಬರನ್ನು ಎಳೆದಾಡಿ ಬಟ್ಟೆ ಹರಿದು ಅಮಾನುಷವಾಗಿ ಹಲ್ಲೆ ಮಾಡಿರುವ ಘಟನೆ ನಡೆದಿದೆ. ನೆರೆಯ ಮನೆಯವರೇ ಮನೆಗೆ ನುಗ್ಗಿ ತಾಯಿ, ಮಗಳನ್ನು ಹೊರಗೆ ಎಳೆದು ತಂದು ಸಾರ್ವಜನಿಕವಾಗಿ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಈ ಘಟನೆಯಿಂದಾಗಿ ಇಡೀ ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ. ಕೃತ್ಯದ ವಿಡಿಯೋ ಕೂಡ ಮೊಬೈಲ್‌ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವೈರಲ್‌ ಕೂಡ ಆಗಿದೆ.

ಇಂತಹ ಅಮಾನವೀಯ ಘಟನೆ ನಡೆದಿದ್ದರೂ ದೂರು ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ದ ಮಾಳಮಾರುತಿ ಪೊಲೀಸರು ವಿಡಿಯೋ ಮಾಧ್ಯಮಗಳಲ್ಲಿ ಬಿತ್ತರಗೊಂಡು ಗಂಭೀರ ಸ್ವರೂಪ ಪಡೆಯುತ್ತಿದ್ದಂತೆಯೇ ದೂರು ದಾಖಲಿಸಿಕೊಂಡಿದ್ದಾರೆ ಎಂದು ಸಂತ್ರಸ್ತ ಮಹಿಳೆ ಆರೋಪಿಸಿದರು.

ವೇಶ್ಯಾವಾಟಿಕೆ ಆರೋಪ:

ಸಂಬಂಧ ಇಲ್ಲದವರೆಲ್ಲರೂ ಮಹಿಳೆಯರ ಮನೆಗೆ ಬಂದು ಹೋಗುತ್ತಾರೆ. ಮಹಿಳೆಯರು ವೇಶ್ಯಾವಾಟಿಕೆ ದಂಧೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ನೆರೆ ಮನೆಯವರು ತಾಯಿ ಮತ್ತು ಮಗಳನ್ನು ಮನೆ ಬಿಡುವಂತೆ ಜಗಳ ತೆಗೆದರು. ಜಗಳ ವಿಕೋಪಕ್ಕೆ ಹೋಗಿದ್ದು, ಬಳಿಕ ಸಾರ್ವಜನಿಕವಾಗಿ ಮಹಿಳೆಯನ್ನು ಎಳೆದಾಡಿ ಬಟ್ಟೆ ಹರಿದು ಹಲ್ಲೆ ನಡೆಸಲಾಗಿದೆ. ಹಲ್ಲೆಗೊಳಗಾದ ಬಳಿಕ ಸಂತ್ರಸ್ತ ಮಹಿಳೆ ದೂರು ನೀಡಲು ಮಾಳಮಾರುತಿ ಪೊಲೀಸ್‌ ಠಾಣೆಗೆ ತೆರಳಿದ್ದರು.ಆದರೆ, ಎರಡು ದಿನ ಠಾಣೆಗೆ ಅಲೆದರೂ ಪೊಲೀಸರು ದೂರು ಸ್ವೀಕರಿಸಲಿಲ್ಲ. ಹಾಗಾಗಿ, ನಮಗೆ ಜೀವ ಭಯ ಇದೆ ರಕ್ಷಣೆ ಕೊಡುವಂತೆ ಸಂತ್ರಸ್ತ ಮಹಿಳೆ ಪೊಲೀಸ್‌ ಆಯುಕ್ತರಿಗೆ ಮನವಿ ನೀಡಿದ ಬಳಿಕ ಶುಕ್ರವಾರ ರಾತ್ರಿ ಬಿಎನ್​ಎಸ್ ಕಾಯ್ದೆಯ ಸೆಕ್ಷನ್ 115(2), 3(5), 331, 352 ಹಾಗೂ 74 ರ ಅಡಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.

ಸಂತ್ರಸ್ತೆ ಹೇಳಿದ್ದೇನು?:

ವಡ್ಡರವಾಡಿಯಲ್ಲಿರುವ ನಮ್ಮ ಮನೆಯ ಜಾಗವನ್ನು ದೇವಸ್ಥಾನಕ್ಕೆ ಬರೆಸಿಕೊಳ್ಳುವ ದುರುದ್ದೇಶದಿಂದ ನಮ್ಮ ಕುಟುಂಬದ ಮೇಲೆ ಅನವಶ್ಯಕವಾಗಿ ವೇಶ್ಯಾವಾಟಿಕೆ ಆರೋಪ ಮಾಡಲಾಗುತ್ತಿದೆ. ನಮ್ಮ ನೆರೆಹೊರೆಯವರೇ ನನ್ನ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ಮಾಡಿದ್ದಾರೆ ಎಂದು ಸಂತ್ರಸ್ತ ಯುವತಿ ಆರೋಪಿಸಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ಮನೆಗೆ ಪ್ರತಿದಿನ 50 ಜನರು ಬರುತ್ತಾರೆ ಎಂದು ಗೂಬೆ ಕೂರಿಸಿ ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ. ದೇವಸ್ಥಾನ ಮುಂದೆಯೇ ಸಿಸಿಟಿವಿ ಕ್ಯಾಮೆರಾ ಇದೆ. ಯಾರಾದರೂ ಮನೆಗೆ ಬಂದಿದ್ದಾರೆಯೇ ಎಂಬುದನ್ನು ತೆಗೆದು ನೋಡಿ. ನಮಗೆ ನ್ಯಾಯ ಕೊಡಿಸಬೇಕಾದ ಪೊಲೀಸರು ರಾಜೀ ಪಂಚಾಯಿತಿ ಮೂಲಕ ಪ್ರಕರಣ ಇತ್ಯರ್ಥಪಡಿಸಿಕೊಳ್ಳುವಂತೆ ಹೇಳುತ್ತಾರೆ. ನಾಲ್ಕು ದಿನ ಮಾಳಮಾರುತಿ ಠಾಣೆಗೆ ಅಲೆದರೂ ನ್ಯಾಯ ಸಿಕ್ಕಿಲ್ಲ. ಪೊಲೀಸ್‌ ಆಯುಕ್ತರ ಮೊರೆ ಹೋದ ಬಳಿಕ ಪ್ರಕರಣ ದಾಖಲಾಗಿದೆ. ನಮ್ಮ ಪಕ್ಕದ ಮನೆಯ ಇಂದ್ರಾ ಅಷ್ಟೇಕರ, ಹೂವಪ್ಪ ಅಷ್ಟೇಕರ, ಮಣಿಕಂಠ ಅಷ್ಟೇಕರ ಮನೆಗೆ ನುಗ್ಗಿ ನಮ್ಮನ್ನು ಹೊರಗೆಳೆದು ತಂದು ಸಾರ್ವಜನಿಕವಾಗಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದರು.

ಮಹಾರಾಷ್ಟ್ರದ ಯುವಕನೊಂದಿಗೆ ನನ್ನ ವಿವಾಹ ಮಾಡಿಕೊಡಲಾಗಿತ್ತು. ನನಗೆ ಇಬ್ಬರು ಮಕ್ಕಳಿದ್ದಾರೆ. ಗಂಡನ ಮನೆಯವರ ಕಿರುಕುಳದ ಕಾರಣ ತಾಯಿಯ ಜೊತೆಗೆ ವಾಸವಾಗಿದ್ದೇನೆ. ಆದರೆ, ಅಷ್ಟೇಕರ ಕುಟುಂಬದವರು ಪದೇ ಪದೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ಮಾಡಿದ್ದಾರೆ ಎಂದು ದೂರಿದರು.

ಶಾಸಕ ರಾಜು ಸೇಠ್‌ ಭೇಟಿ

ಮಹಿಳೆ ಮೇಲೆ ಅಮಾನವೀಯ ಹಲ್ಲೆ ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಮಹಿಳೆಯ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ರಾಜು ಸೇಠ್‌ ಘಟನೆ ಕುರಿತಂತೆ ಸಂಬಂಧಿಕರಿಂದ ಮಾಹಿತಿ ಪಡೆದರು.

ಸಾರ್ವಜನಿಕವಾಗಿ ತಾಯಿ ಮತ್ತು ಮಗಳ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಕರಣದ ತನಿಖೆ ನಡೆಯುತ್ತಿದೆ. ಸಂತ್ರಸ್ತ ಮಹಿಳೆಯರಿಗೆ ರಕ್ಷಣೆ ಒದಗಿಸಲಾಗುವುದು.

- ಯಡಾಮಾರ್ಟಿನ್‌ ಮಾರ್ಬನ್ಯಾಂಗ್‌, ಬೆಳಗಾವಿ ನಗರ ಪೊಲೀಸ್‌ ಆಯುಕ್ತಸಾರ್ವಜನಿಕವಾಗಿ ತಾಯಿ ಮತ್ತು ಮಗಳ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಕರಣದ ತನಿಖೆ ನಡೆಯುತ್ತಿದೆ. ಸಂತ್ರಸ್ತ ಮಹಿಳೆಯರಿಗೆ ರಕ್ಷಣೆ ಒದಗಿಸಲಾಗುವುದು.

- ಯಡಾಮಾರ್ಟಿನ್‌ ಮಾರ್ಬನ್ಯಾಂಗ್‌, ಬೆಳಗಾವಿ ನಗರ ಪೊಲೀಸ್‌ ಆಯುಕ್ತ