ಸಾರಾಂಶ
ಬೆಳಗಾವಿ ತಾಲೂಕಿನ ಹೊಸ ವಂಟಮೂರಿಯಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ ಪ್ರಕರಣದ ಕುರಿತು ಸಿಐಡಿ ಡಿಐಜಿ ಸುಧೀರಕುಮಾರ ರೆಡ್ಡಿ ನೇತೃತ್ವದ ಅಧಿಕಾರಿಗಳ ತಂಡ ಸೋಮವಾರ ತನಿಖೆ ಆರಂಭಿಸಿದೆ.
ಕನ್ನಡಪ್ರಭ ವಾರ್ತೆ ಬೆಳಗಾವಿ
ಬೆಳಗಾವಿ ತಾಲೂಕಿನ ಹೊಸ ವಂಟಮೂರಿಯಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ ಪ್ರಕರಣದ ಕುರಿತು ಸಿಐಡಿ ಡಿಐಜಿ ಸುಧೀರಕುಮಾರ ರೆಡ್ಡಿ ನೇತೃತ್ವದ ಅಧಿಕಾರಿಗಳ ತಂಡ ಸೋಮವಾರ ತನಿಖೆ ಆರಂಭಿಸಿದೆ.ಈ ಪ್ರಕರಣವನ್ನು ಸಿಐಡಿ ತನಿಖೆಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ಭಾನುವಾರ ರಾತ್ರಿಯೇ ಸಿಐಡಿ ಅಧಿಕಾರಿಗಳ ತಂಡ ಬೆಳಗಾವಿಗೆ ಆಗಮಿಸಿದೆ. ಸೋಮವಾರ ಬೆಳಗ್ಗೆ ಬಿಮ್ಸ್ ಆಸ್ಪತ್ರೆಗೆ ತೆರಳಿದ ಸಿಐಡಿ ಅಧಿಕಾರಿಗಳ ತಂಡ ಸಂತ್ರಸ್ತ ಮಹಿಳೆಯನ್ನು ಭೇಟಿಯಾಗಿ, ಆರೋಗ್ಯ ವಿಚಾರಿಸಿತು. ನಂತರ ಘಟನೆ ಕುರಿತು ಮಾಹಿತಿ ಕಲೆಹಾಕಿತು. ಅವರ ಕುಟುಂಬಸ್ಥರಿಂದಲೂ ಮಾಹಿತಿ ಕಲೆ ಹಾಕಲಾಯಿತು.
ಸಿಐಡಿ ಡಿಐಜಿ ಸುಧೀರಕುಮಾರ ರೆಡ್ಡಿ ನೇತೃತ್ವದ ತಂಡದಲ್ಲಿ ಎಸ್ಪಿ ಪೃಥ್ವಿಕ, ರಶ್ಮಿ ಪರಡ್ಡಿ, ಡಿವೈಎಸ್ಪಿ ಅಂಜುಮಳ ನಾಯಕ ಸೇರಿ 6 ಅಧಿಕಾರಿಗಳು ಇದ್ದಾರೆ. ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡಿರುವ ಸಿಐಡಿ ಅಧಿಕಾರಿಗಳು ಬೆಳಗಾವಿಯ ಹಿಂಡಾಲ್ಕೋ ಕಂಪನಿ ಅತಿಥಿ ಗೃಹ, ಬೆಳಗಾವಿ ಪ್ರವಾಸಿ ಮಂದಿರದಲ್ಲಿ ಕಾಕತಿ ಪೊಲೀಸರೊಂದಿಗೆ ಪ್ರತ್ಯೇಕವಾಗಿ ಸಭೆ ನಡೆಸಿದರು. ವಂಟಮೂರಿ ಘಟನೆಯ ಸಂಪೂರ್ಣ ವಿವರವನ್ನು ಸಿಐಡಿ ಡಿಐಜಿ ಸುಧೀರಕುಮಾರ ರೆಡ್ಡಿ ಅವರು ಪೊಲೀಸರಿಂದ ಪಡೆದರು. ಕಾಕತಿ ಠಾಣೆ ಪಿಎಸ್‌ಐ ಮಂಜುನಾಥ ಘಟನೆ ಕುರಿತು ಮಾಹಿತಿ ನೀಡಿದರು. ಅಲ್ಲದೇ, ಈ ಪ್ರಕರಣ ಸಂಬಂಧ ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ನೀಡಿದರು.ಮಾನವ ಹಕ್ಕುಗಳ ಆಯೋಗ ಭೇಟಿ:
ವಂಟಮೂರಿಯಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ ಪ್ರಕರಣದ ಹಿನ್ನೆಲೆಯಲ್ಲಿ ಘಟನಾ ಸ್ಥಳಕ್ಕೆ ಸೋಮವಾರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಡಿಐಜಿ ಸುನೀಲಕುಮಾರ ಮೀನಾ ಭೇಟಿ ನೀಡಿದರು.ಸಂತ್ರಸ್ತ ಮಹಿಳೆಯ ಕುಟುಂಬಸ್ಥರಿಗೆ ಧೈರ್ಯ ತುಂಬಿದ ಮೀನಾ ಅವರು ಕುಟುಂಬಸ್ಥರು ಹಾಗೂ ಗ್ರಾಮಸ್ಥರಿಂದ ಘಟನೆ ಕುರಿತು ಮಾಹಿತಿ ಕಲೆಹಾಕಿದರು. ಬಿಮ್ಸ್ ಆಸ್ಪತ್ರೆಗೂ ಭೇಟಿ ನೀಡಿ ಸಂತ್ರಸ್ತ ಮಹಿಳೆಯ ಆರೋಗ್ಯ ವಿಚಾರಿಸಿ, ಧೈರ್ಯ ತುಂಬಿದರು. ಈ ಸಂದರ್ಭದಲ್ಲಿ ಬೆಳಗಾವಿ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಲಕ್ಷ್ಮಣ ಬಬಲಿ ಉಪಸ್ಥಿತರಿದ್ದರು.
-------------