ಸಾರಾಂಶ
ಕನ್ನಡಪ್ರಭ ವಾರ್ತೆ ಮುಧೋಳ
ಮಹಿಳೆ ಭಾರತೀಯ ಸಂಸ್ಕೃತಿಯ ಪ್ರತೀಕ. ಮಹಿಳೆಯರ ಪ್ರತಿಯೊಂದು ಹೆಜ್ಜೆ ಭಾರತೀಯ ಸಂಸ್ಕೃತಿಯ ಹೆಗ್ಗುರುತು. ಮಹಿಳೆ ನಮ್ಮ ಸಂಸ್ಕೃತಿ ಮರೆಯದೇ ಅದರ ಅಡಿಯಲ್ಲಿ ಸ್ವಾವಲಂಬಿ ಬದುಕನ್ನು ಹೇಗೆ ಕಟ್ಟಿಕೊಳ್ಳಬೇಕು. ಅದನ್ನು ಕಟ್ಟಿಕೊಳ್ಳುವಲ್ಲಿ ಹಲವಾರು ಅಡ್ಡಿ ಆತಂಕಗಳು ಎದುರಾಗಬಹುದು. ಆದರೆ ಯಾವುದಕ್ಕೂ ತಾವು ಹಿಂಜರಿಯದೆ ನಂಬಿಕೆ ಮತ್ತು ಧೈರ್ಯದಿಂದ ಮುನ್ನುಗ್ಗಿದಾಗ ಮಾತ್ರ ಗೆಲುವು ಸದಾ ನಿಮ್ಮದಾಗುತ್ತದೆ ಎಂದು ಬೆಂಗಳೂರಿನ ಟಿಸಿಎಸ್ ಕಂಪನಿ ಉದ್ಯೋಗಿ ಶಾಂತಾ ಜಾಧವ ಹೇಳಿದರು.ಬಿವಿವಿ ಸಂಘದ ಶ್ರೀ ಎಸ್.ಆರ್. ಕಂಠಿ ಮಹಾವಿದ್ಯಾಲಯದ ವಿದ್ಯಾರ್ಥಿನಿಯರ ಒಕ್ಕೂಟ ಹಾಗೂ ಮಹಿಳಾ ಸಬಲೀಕರಣ ಘಟಕ ಹಾಗೂ ನಗರದ ಬವಿವ ದಾನಮ್ಮದೇವಿ ಮಹಿಳಾ ಮಹಾವಿದ್ಯಾಲಯ ವಿದ್ಯಾರ್ಥಿನಿಯರ ಒಕ್ಕೂಟ ಹಾಗೂ ಮಹಿಳಾ ಸಬಲೀಕರಣ ಘಟಕದ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಮಹಿಳೆ ಮತ್ತು ಸಂಸ್ಕೃತಿ ವಿಷಯ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು ಮಾತನಾಡಿ, ನಮ್ಮ ಭಾರತೀಯ ಸಂಸ್ಕೃತಿ ಮರೆಯಬೇಡಿ. ಏಕೆಂದರೆ ಮಹಿಳೆಯರ ಸ್ವಾವಲಂಬಿ ಬದುಕಿಗೆ ಸಂಸ್ಕೃತಿಯೇ ಭೂಷಣವಾಗಿದೆ ಎಂದು ಹೇಳಿದರು.
ದಾನಮ್ಮದೇವಿ ಮಹಿಳಾ ಕಾಲೇಜಿನ ಪ್ರಾಚಾರ್ಯ ಪ್ರೊ.ಎಂ.ಎಂ. ಹಿರೇಮಠ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಿಳೆ, ಸಂಸ್ಕೃತಿ ಮತ್ತು ಸಂಸ್ಕಾರದ ಕಣ್ಣು. ಮಹಿಳೆ ಭಾರತೀಯ ಪರಂಪರೆಯಲ್ಲಿ ಪೂಜ್ಯನೀಯ ಸ್ವರೂಪಳು ಹಾಗೂ ಭಾವನಾತ್ಮಕ ಜೀವಿಯಾಗಿದ್ದು, ತಾವು ಮಹಿಳೆಯರೆಂದು ಹಿಂಜರಿಯದೆ ತಮಗೆ ಸಿಕ್ಕ ಅವಕಾಶ ಮತ್ತು ವೇದಿಕೆ ಸಮರ್ಪಕವಾಗಿ ಬಳಸಿಕೊಂಡು ತಮ್ಮಲ್ಲಿರುವ ಅಘಾದ ಶಕ್ತಿ ಮತ್ತು ಪ್ರತಿಭೆ ತೋರಿಸಬೇಕೆಂದರು.ದಾನಮ್ಮದೇವಿ ಮಹಿಳಾ ಕಾಲೇಜಿನ ಡಿ.ಡಬ್ಲ್ಯೂ.ಸಿ ಮಹಿಳಾ ಸಬಲೀಕರಣ ಘಟಕದ ಕಾರ್ಯಧ್ಯಕ್ಷೆ ಪ್ರೊ.ಸರೋಜಾ ಡಿ. ಅಂಬಿಗೇರ ಸ್ವಾಗತಿಸಿದರು. ಎಸ್.ಆರ್. ಕಂಠಿ ಕಾಲೇಜಿನ ವಿದ್ಯಾರ್ಥಿನಿಯರ ಒಕ್ಕೂಟ ಹಾಗೂ ಮಹಿಳಾ ಸಬಲೀಕರಣ ಘಟಕ ಕಾರ್ಯಧ್ಯಕ್ಷೆ ಪ್ರೊ.ಜ್ಯೋತಿ ಎಂ. ಕಲಾಲ ಪರಿಚಯಿಸಿದರು. ಪ್ರೊ ಸುಷ್ಮಾ ದಿವಾನದ ನಿರೂಪಿಸಿದರು. ಪ್ರೊ.ಅನ್ನಪೂರ್ಣ ಎನ್. ಬಾಗೇವಾಡಿ ವಂದಿಸಿದರು. ವಿದ್ಯಾರ್ಥಿನಿಯರಾದ ಸೃಷ್ಟಿ ತಿಪ್ಪಿಮಠ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಎಸ್.ಆರ್.ಕಂಠಿ ಕಾಲೇಜು ಹಾಗೂ ದಾನಮ್ಮದೇವಿ ಮಹಿಳಾ ಮಹಾವಿದ್ಯಾಲಯ ವತಿಯಿಂದ ಸಂಪನ್ಮೂಲ ವ್ಯಕ್ತಿಗಳಾಗಿದ್ದ ಶಾಂತಾ ಜಾಧವ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಎಸ್.ಆರ್.ಕಂಠಿ ಕಾಲೇಜಿನ ಹಾಗೂ ದಾನಮ್ಮದೇವಿ ಮಹಿಳಾ ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು