ಮಹಿಳೆಯರು ಸ್ವಾವಲಂಬನೆ ಸಾಧಿಸಿ

| Published : Dec 28 2023, 01:45 AM IST / Updated: Dec 28 2023, 01:46 AM IST

ಸಾರಾಂಶ

ಕನಕಪುರ: ಮಹಿಳೆಯರು ಕೌಶಲ್ಯಾಧಾರಿತ ಸ್ವ ಉದ್ಯೋಗ ಸೃಷ್ಟಿಸಿಕೊಂಡು ಸ್ವಾವಲಂಬನೆ ಸಾಧಿಸುವ ಮೂಲಕ ಸಕಾಲದಲ್ಲಿ ಸಾಲ ಮರುಪಾವತಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಸ್.ರವಿ ತಿಳಿಸಿದರು.

ಕನಕಪುರ: ಮಹಿಳೆಯರು ಕೌಶಲ್ಯಾಧಾರಿತ ಸ್ವ ಉದ್ಯೋಗ ಸೃಷ್ಟಿಸಿಕೊಂಡು ಸ್ವಾವಲಂಬನೆ ಸಾಧಿಸುವ ಮೂಲಕ ಸಕಾಲದಲ್ಲಿ ಸಾಲ ಮರುಪಾವತಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಸ್.ರವಿ ತಿಳಿಸಿದರು.

ನಗರದಲ್ಲಿ ಕನಕಾಂಬರಿ ಮಹಿಳಾ ಒಕ್ಕೂಟ ಹಮ್ಮಿಕೊಂಡಿದ್ದ ಕ್ಯಾಲೆಂಡರ್ ಬಿಡುಗಡೆ, ಹೊಲಿಗೆ ತರಬೇತಿ ಪಡೆದವರಿಗೆ ಪ್ರಮಾಣ ಪತ್ರಗಳ ವಿತರಣೆ ಹಾಗೂ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹ ಧನ ವಿತರಿಸಿ ಮಾತನಾಡಿ, ಬ್ಯಾಂಕ್‌ಗಳು ನಿಮ್ಮ ಮೇಲೆ ನಂಬಿಕೆ ಇಟ್ಟು ಸಾಲ ಕೊಡುತ್ತವೆ. ಸ್ವ ಉದ್ಯೋಗ ಸೃಷ್ಟಿಸಿಕೊಂಡು ಬ್ಯಾಂಕ್ ಸಾಲ ತೀರಿಸಬೇಕೆಂದು ಸಲಹೆ ನೀಡಿದರು.

ಸಂಘದ ಗೌರವಾಧ್ಯಕ್ಷ ಶ್ರೀಕಂಠು ಮಾತನಾಡಿ, ಕನಕಾಂಬರಿ ಮಹಿಳಾ ಒಕ್ಕೂಟ ಕೇವಲ ಹಣ ಗಳಿಕೆಗೆ ಸೀಮಿತವಾಗದೆ ಮಹಿಳಾ ಸಬಲೀಕರಣವೇ ಧ್ಯೇಯವಾಗಿಟ್ಟುಕೊಂಡಿದೆ. ಪ್ರಸ್ತುತ ಸಮಾಜದಲ್ಲಿ ಮಹಿಳೆಯರು ಅಡುಗೆ ಕೋಣೆಗೆ ಸೀಮಿತವಾಗಿಲ್ಲ. ಪುರುಷರಿಗಿಂತಲೂ ಎಲ್ಲ ರಂಗದಲ್ಲೂ ಮುಂಚೂಣಿಯಲ್ಲಿದ್ದು ಮಹಿಳೆಯರಿಗೆ ಹಲವು ಅವಕಾಶದ ಬಾಗಿಲುಗಳು ತೆರೆದಿವೆ. ಅವುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಿ ಎಂದರು.

ವಿಧಾನ ಪರಿಷತ್ ಸದಸ್ಯ ಎಸ್.ರವಿ 2024ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ ಮಾಡಿ, ಮಹಿಳೆಯರಿಗೆ ಪ್ರಮಾಣ ಪತ್ರ ವಿತರಣೆ ಹಾಗೂ ಸಂಘ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹ ಧನ ವಿತರಿಸಿದರು.

ಆರ್‌ಇಎಸ್ ನಿರ್ದೇಶಕ ನಾಗರಾಜು, ಕೆನರಾ ಬ್ಯಾಂಕ್ ವ್ಯವಸ್ಥಾಪಕಿ ಉಮಾ ಮಹೇಶ್ವರಿ, ಹೊನ್ನಿಗನಹಳ್ಳಿ ಶಾಖೆ ಉಮೇಶ್ ಕುಮಾರ್, ಸಂಘದ ವ್ಯವಸ್ಥಾಪಕ ನಿರ್ದೇಶಕ ಮಾಯಣ್ಣ, ಸಂಘದ ಅಧ್ಯಕ್ಷೆ ಗಂಗಮ್ಮ, ನಿರ್ದೇಶಕರಾದ ಚಿಕ್ಕತಾಯಮ್ಮ, ಪ್ರೇಮ, ರೇಣುಕಮ್ಮ, ಚಂದ್ರಕಲಾ, ಪರಿಮಳ, ರತ್ನಮ್ಮ, ಕಾಂತಮ್ಮ, ಜಯಶೀಲ, ಮಾಯಣ್ಣ ನಾಗರತ್ನಮ್ಮ ಹಾಗೂ ಸದಸ್ಯರು ಉಪಸ್ಥಿತರಿದ್ದರು.