ಹೆಣ್ಣುಮಕ್ಕಳಿಗೆ ವನಿತಾ, ಮಹಿಳಾ ಸಮಾಜಗಳು ಆಸರೆ

| Published : Mar 10 2025, 12:22 AM IST

ಸಾರಾಂಶ

ವನಿತಾ ಸಮಾಜ ಸೇರಿದಂತೆ ಹಲವಾರು ಮಹಿಳಾ ಸಮಾಜಗಳು ಹೆಣ್ಣುಮಕ್ಕಳ ಅಭ್ಯುದಯಕ್ಕೆ ಶ್ರಮಿಸುತ್ತಿವೆ. ಶೈಕ್ಷಣಿಕ, ಸಾಮಾಜಿಕ, ಆರ್ಥಿಕವಾಗಿ ಅಂತಹ ಮಹಿಳೆಯರಿಗೆ ಆಸರೆಯಾಗಿವೆ ಎಂದು ಬಾಪೂಜಿ ವಿದ್ಯಾಸಂಸ್ಥೆ ಉಪಾಧ್ಯಕ್ಷೆ ಕಿರುವಾಡಿ ಗಿರಿಜಮ್ಮ ದಾವಣಗೆರೆಯಲ್ಲಿ ಹೇಳಿದ್ದಾರೆ.

- ಹಿರಿಯ ಸಮಾಜ ಸೇವಕಿ ಕಿರುವಾಡಿ ಗಿರಿಜಮ್ಮ ಅವರಿಗೆ ವನಿತಾ ಸೇವಾ ಪ್ರಶಸ್ತಿ ಪ್ರದಾನ - - - ಕನ್ನಡಪ್ರಭ ವಾರ್ತೆ ದಾವಣಗೆರೆ

ವನಿತಾ ಸಮಾಜ ಸೇರಿದಂತೆ ಹಲವಾರು ಮಹಿಳಾ ಸಮಾಜಗಳು ಹೆಣ್ಣುಮಕ್ಕಳ ಅಭ್ಯುದಯಕ್ಕೆ ಶ್ರಮಿಸುತ್ತಿವೆ. ಶೈಕ್ಷಣಿಕ, ಸಾಮಾಜಿಕ, ಆರ್ಥಿಕವಾಗಿ ಅಂತಹ ಮಹಿಳೆಯರಿಗೆ ಆಸರೆಯಾಗಿವೆ ಎಂದು ಬಾಪೂಜಿ ವಿದ್ಯಾಸಂಸ್ಥೆ ಉಪಾಧ್ಯಕ್ಷೆ ಕಿರುವಾಡಿ ಗಿರಿಜಮ್ಮ ಹೇಳಿದರು.

ನಗರದ ಪಿ.ಜೆ. ಬಡಾವಣೆಯ ವನಿತಾ ಸಮಾಜದಲ್ಲಿ ಶನಿವಾರ ವಿಶ್ವ ಮಹಿಳಾ ದಿನಾಚರಣೆ ಹಾಗೂ ವನಿತಾ ಸಮಾಜದ ವಾರ್ಷಿಕೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ವನಿತಾ ಉತ್ಸವದಲ್ಲಿ ವನಿತಾ ಸೇವಾ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು. ವನಿತಾ ಸಮಾಜ, ಮಹಿಳಾ ಸಮಾಜಗಳು ಅನೇಕ ಮಹಿಳೆಯರು ವಿದ್ಯಾಂತರಾಗಿ ಜೀವನ ಸಾಗಿಸಲು, ಮುಖ್ಯವಾಹಿನಿಗೆ ಬರಲು ಅನುವು ಮಾಡಿಕೊಟ್ಟಿವೆ ಎಂದರು.

ಮಹಿಳಾ ಮೀಸಲಾತಿ ಇನ್ನೇನು ಕೆಲವೇ ವರ್ಷಗಳಲ್ಲೇ ಅನುಷ್ಠಾನಕ್ಕೂ ಬರುತ್ತದೆ. ಗ್ರಾ.ಪಂ.ನಿಂದ ದೆಹಲಿವರೆಗೆ ಮಹಿಳಾ ಮೀಸಲಾತಿ ಸಿಕ್ಕೇ ಸಿಗುತ್ತದೆ. ವನಿತಾ ಸಮಾಜದ ಸಂಸ್ಥಾಪಕಿ, ಮಾಜಿ ಸಚಿವೆ ನಾಗಮ್ಮ ಕೇಶವಮೂರ್ತಿ ಸಾಕಷ್ಟು ಸೇವೆ ಮಾಡಿದವರು. ವನಿತಾ ಸಮಾಜವನ್ನು ಕಟ್ಟಿ, ಬೆಳೆಸಿದ್ದಷ್ಟೇ ಅಲ್ಲ, ನಿಜಕ್ಕೂ ಪುರುಷರ ಸರಿಸಮಾನವಾಗಿ ಬೆಳೆಸಿದರು. ಲೀಲಾದೇವಿ ಆರ್.ಪ್ರಸಾದ್ದ ಬಳ್ಳಾರಿ ಸಿದ್ದಮ್ಮ, ನಾಗಮ್ಮ ಕೇಶವಮೂರ್ತಿ ಸಾಹಸದಿಂದ ಜೀವನ ಸಾಗಿಸಿದ ವನಿತೆಯರು ಎಂದು ಅವರು ಸ್ಮರಿಸಿದರು.

ವೈದ್ಯಕೀಯ ಕ್ಷೇತ್ರದಲ್ಲಿ ಡಾ.ಶಾಂತಾ ಭಟ್ ಮೂಲೆಗೆ ಸೇರಬೇಕಾದ ಮಕ್ಕಳಿಗೆ ಆರೋಗ್ಯ ಸುಧಾರಣೆ ಮಾಡಿ, ರೆಡ್ ಕ್ರಾಸ್ ಸಂಸ್ಥೆ, ಹಿಮೋಫಿಲಿಯಾ ಸೊಸೈಟಿ ಮೂಲಕ ಬದುಕನ್ನು ಕಟ್ಟಿಕೊಳ್ಳಲು ನೆರವಾಗಿದ್ದಾರೆ. ಇದು ಶ್ಲಾಘನೀಯ ಕಾರ್ಯವಾಗಿದೆ. ಇಂತಹವರು ನಮ್ಮ ಸುತ್ತಮುತ್ತಲಲ್ಲೇ ಇರುತ್ತಾರೆ. ಇದೇ ರೀತಿ ಹಲವಾರು ಸಾಧಕ ಮಹಿಳೆಯರು ತಾವೂ ಬೆಳೆದು, ಇತರರಿಗೂ ಬೆಳೆಯಲು ಆಸರೆಯಾದವರು. ಅಂತಹವರ ಸೇವಾ ಮನೋಭಾವ ನಮ್ಮ ಮಹಿಳೆಯರು, ವಿದ್ಯಾರ್ಥಿನಿಯರು, ಯುವತಿಯರಿಗೆ ಪ್ರೇರಣೆಯಾಗಬೇಕು ಎಂದು ಕಿರುವಾಡಿ ಗಿರಿಜಮ್ಮ ಸಲಹೆ ನೀಡಿದರು.

ಹಿರಿಯ ಸಮಾಜ ಸೇವಕರೂ ಆಗಿರುವ ಕಿರುವಾಡಿ ಗಿರಿಜಮ್ಮ ಅವರಿಗೆ ಹಿರಿಯ ದಾನಿ ಚನ್ನಗಿರಿ ಕೃಷ್ಣಮೂರ್ತಿ ಪ್ರಶಸ್ತಿ ನೀಡಿ ಗೌರವಿಸಿದರು. ದಯಾಮರಣ ಹೋರಾಟಗಾರ್ತಿ ಕರಿಬಸಮ್ಮ ಅವರನ್ನು ಸನ್ಮಾನಿಸಲಾಯಿತು. ವನಿತಾ ಸಮಾಜದ ಅಧ್ಯಕ್ಷೆ ಪದ್ಮಾ ಪ್ರಕಾಶ ಅಧ್ಯಕ್ಷತೆ ವಹಿಸಿದ್ದರು,

ಎಸ್‌.ಎಸ್‌. ವೈದ್ಯಕೀಯ ಮಹಾ ವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದ ಪೆಥಾಲಜಿ ವಿಭಾಗ ಮುಖ್ಯಸ್ಥೆ, ಹಿರಿಯ ಲೇಖಕಿ ಡಾ.ಶಶಿಕಲಾ ಪಿ.ಕೃಷ್ಣಮೂರ್ತಿ, ಕಾರ್ಯದರ್ಶಿ ಸುಷ್ಮಾ ಮೋಹನ್ ಪ್ರಾಸ್ತಾವಿಕ ಮಾತನಾಡಿದರು. ಉಪನ್ಯಾಸಕಿ ಅರುಣಾಕುಮಾರಿ ಬಿರಾದಾರ್, ನಾಗರತ್ನ ಜಗದೀಶ, ಸತ್ಯಭಾಮ ಮಂಜುನಾಥ ಇತರರು ಇದ್ದರು.

- - -

ಕೋಟ್‌

ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. ಮುಖ್ಯವಾಗಿ ಸಮಾಜದ ಏಳಿಗೆಗಾಗಿ ದುಡಿಯುತ್ತಿದ್ದಾರೆ. ರಾಷ್ಟ್ರಪತಿ ಮುರ್ಮು ಸೇರಿದಂತೆ ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಸಹ ರಾಜಕೀಯಕ್ಕೆ ಬಂದು, ಗುರುತರ ಕಾರ್ಯಗಳನ್ನು ಮಾಡಲು ಶ್ರಮಿಸುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಪ್ರಥಮ ಮಹಿಳಾ ಶಾಸಕಿಯಾಗಿದ್ದ ಬಳ್ಳಾರಿ ಸಿದ್ದಮ್ಮ, ಮಾಜಿ ಸಚಿವ ಲೀಲಾದೇವಿ ಆರ್.ಪ್ರಸಾದ್ ರಾಜಕೀಯದಲ್ಲಿ ಹೆಸರು ಮಾಡಿದವರು

- ಕಿರುವಾಡಿ ಗಿರಿಜಮ್ಮ, ಹಿರಿಯ ಸಮಾಜ ಸೇವಕಿ

- - - -8ಕೆಡಿವಿಜಿ6.ಜೆಪಿಜಿ:

ದಾವಣಗೆರೆ ವನಿತಾ ಸಮಾಜದಲ್ಲಿ ವಿಶ್ವ ಮಹಿಳಾ ದಿನಾಚರಣೆಯಲ್ಲಿ ಹಿರಿಯ ದಾನಿ ಚನ್ನಗಿರಿ ಕೃಷ್ಣಮೂರ್ತಿ ಅವರು ಬಿಇಎ ಉಪಾಧ್ಯಕ್ಷೆ ಕಿರುವಾಡಿ ಗಿರಿಜಮ್ಮ ಅವರಿಗೆ ವನಿತಾ ಸೇವಾ ಪ್ರಶಸ್ತಿ ಪ್ರದಾನ ಮಾಡಿ, ಗೌರವಿಸಿದರು.