ಮಹಿಳೆಯರು ಸ್ವಾಭಿಮಾನದ ಸಂಕೇತ: ಸಾಹಿತಿ ಸಂಕಮ್ಮ ಸಂಕಣ್ಣನವರ್

| Published : Mar 14 2025, 12:34 AM IST

ಸಾರಾಂಶ

ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ. ಎಲ್ಲಿ ನೋಡಿದರೂ ದೌರ್ಜನ್ಯ, ಶೋಷಣೆ, ಹಲ್ಲೆ, ಮಾನಭಂಗ ಹೀಗೆ ಮಹಿಳೆಯರ ಮೇಲೆ ಶೋಷಣೆ ನಡೆಯುತ್ತಲೇ ಇದೆ.

ಹಿರೇಕೆರೂರು: ಮಹಿಳೆಯರು ಸಮಾಜದ ಸ್ವಾಭಿಮಾನದ ಸಂಕೇತವಾಗಿದ್ದು, ಪ್ರತಿ ಕ್ಷೇತ್ರದಲ್ಲಿ ಮಹಿಳೆಯರು ಗುರುತಿಸಿಕೊಂಡು ಸಮಾಜದ ಮತ್ತು ಮನೆಯ ಪ್ರಗತಿಯ ಪ್ರಮುಖ ಭಾಗವಾಗಿದ್ದಾರೆ ಎಂದು ಸಾಹಿತಿ ಸಂಕಮ್ಮ ಸಂಕಣ್ಣನವರ್ ತಿಳಿಸಿದರು.ತಾಲೂಕಿನ ಹಂಸಭಾವಿ ಗ್ರಾಮದ ಹಾಲೆವಾಡಿಮಠ ಸಂಸ್ಥಾನದ ಶಾಲೆಯ ಆವರಣದಲ್ಲಿ ಆಯೋಜಿಸಿದ್ದ 2025ರ ಕರ್ನಾಟಕ ನುಡಿ ವೈಭವ, ಮಠದ ನವೋದಯ ಟುಟೋರಿಯಲ್ 24ನೇ ವರ್ಷದ ವಾರ್ಷಿಕೋತ್ಸವ, ಪ್ರಾಥನಾ ಕಿರಿಯ ಪ್ರಾಥಮಿಕ ಶಾಲೆಯ 11ನೇ ವಾರ್ಷಿಕೋತ್ಸವ, ಮಕ್ಕಳ ಪಾಲಕರ ಪಾದಪೂಜೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ. ಎಲ್ಲಿ ನೋಡಿದರೂ ದೌರ್ಜನ್ಯ, ಶೋಷಣೆ, ಹಲ್ಲೆ, ಮಾನಭಂಗ ಹೀಗೆ ಮಹಿಳೆಯರ ಮೇಲೆ ಶೋಷಣೆ ನಡೆಯುತ್ತಲೇ ಇದೆ ಎಂದು ಬೇಸರ ವ್ಯಕ್ತಪಡಿಸಿದರು.ವಿಶೇಷ ಸನ್ಮಾನಿತ ಅಹ್ವಾನಿತರಾದ ಜಿಲ್ಲಾ ರೈತ ಸಂಘದ ಅಧ್ಯಕ್ಷ ರಾಮಣ್ಣ ಕೆಂಚಳ್ಳೆರ ಮಾತನಾಡಿ, ಕೇವಲ ವಿದ್ಯೆ ಇದ್ದರೆ ಸಾಲದು. ಜೀವನಕ್ಕೆ ಜ್ಞಾನವು ಬಹಳ ಮುಖ್ಯ. ರೈತನಿಗೆ ವಿದ್ಯೆ ಇಲ್ಲದಿದ್ದರೂ ಜ್ಞಾನದಿಂದ ಬದುಕಿ ಇನ್ನೊಬ್ಬರಿಗೆ ಅನ್ನ ನೀಡುತ್ತಾನೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜೆಎಸ್‌ಯು ಅಕಾಡೆಮಿ ಅಧ್ಯಕ್ಷರಾದ ಜ್ಯೋತಿ ಹಾಲೆವಾಡಿಮಠ ಮಾತನಾಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಪ್ರಭುಗೌಡ ಪಾಟೀಲ್, ಅಂತಾರಾಷ್ಟ್ರೀಯ ಖೋಖೋ ಆಟಗಾರ್ತಿ ಚೈತ್ರ ಬಿ., ಸಂಗೀತಗಾರ ಮೆಹಬೂಬ ಹರ್ಲಾಪುರ, ಮಹಾಲಕ್ಷ್ಮಿ, ಕಸಾಪ ಜಿಲ್ಲಾ ಅಧ್ಯಕ್ಷ ಲಿಂಗಯ್ಯ ಹಿರೇಮಠ್, ಕಸಾಪ ತಾಲೂಕು ಅಧ್ಯಕ್ಷ ಎನ್. ಸುರೇಶ್‌ಕುಮಾರ್, ಮಹೇಂದ್ರ ಬಡಳಿ, ಎಂ.ಎಂ. ಮತ್ತೂರ, ಪಿ.ಎಸ್. ಸಾಲಿ, ಷಣ್ಮುಖ ಮಳೆಮಠ, ಮೃತ್ಯುಂಜಯ ಬಾಸೂರ, ಮೋಹನ ಗೌಡ ಪಾಟೀಲ, ದಾದಾಪಿರ್ ಪಠಾಣ, ಪ್ರಭು ಹಾಲೆವಾಡಿಮಠ್ ಹಾಗೂ ಮುಖಂಡರು ವಿದ್ಯಾಥಿಗಳು ಇದ್ದರು.

ಫೆಬ್ರವರಿ, ಮಾರ್ಚ್ ತಿಂಗಳ ಪಡಿತರ ಹಂಚಿಕೆ

ಹಾವೇರಿ: ಆದ್ಯತಾ ಪಡಿತರ ಚೀಟಿಯ ಫಲಾನುಭವಿಗಳಿಗೆ ರಾಷ್ಟ್ರೀಯ ಭದ್ರತಾ ಕಾಯ್ದೆ ಅನ್ವಯ ಫೆಬ್ರವರಿ ಹಾಗೂ ಮಾರ್ಚ್ ತಿಂಗಳ ಪಡಿತರ ಹಂಚಿಕೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ತಿಳಿಸಿದ್ದಾರೆ.

ಕೇಂದ್ರ ಸರ್ಕಾರದ 5 ಕೆಜಿ ಆಹಾರ ಧಾನ್ಯದೊಂದಿಗೆ ರಾಜ್ಯ ಸರ್ಕಾರದ ವತಿಯಿಂದ ಹೆಚ್ಚುವರಿಯಾಗಿ 5 ಕೆಜಿ ಅಹಾರ ಧಾನ್ಯದ ಬದಲಾಗಿ ಪ್ರತಿ ಕೆಜಿಗೆ ₹34ರಂತೆ ಪಡಿತರ ಚೀಟಿಯಲ್ಲಿನ ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಡಿಬಿಟಿ ಮೂಲಕ ₹170 ಹಣ ವರ್ಗಾಯಿಸಲಾಗುತ್ತಿತ್ತು. ಆದರೆ ಫೆಬ್ರವರಿ ತಿಂಗಳಿನಿಂದ ಜಾರಿಗೆ ಬರುವಂತೆ ನೇರ ನಗದು ವರ್ಗಾವಣೆ ಬದಲಾಗಿ ಅನ್ಯಭಾಗ್ಯ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ 5 ಕೆಜಿ ಅಕ್ಕಿ ವಿತರಿಸಲು ಆದೇಶಿಸಲಾಗಿದೆ.ಫೆಬ್ರವರಿ ಮತ್ತು ಮಾರ್ಚ್ ತಿಂಗಳಿನ ಅಂತ್ಯೋದಯ(ಎಎವೈ) ಪಡಿತರ ಚೀಟಿಗೆ 35 ಕೆಜಿ ಅಕ್ಕಿ, (4 ಮತ್ತು 4ಕ್ಕಿಂತ ಹೆಚ್ಚಿನ ಸದಸ್ಯರ ಪಡಿತರ ಚೀಟಿಗಳಲ್ಲಿನ ಪ್ರತಿ ಫಲಾನುಭವಿಗೆ 5 ಕೆಜಿಯಂತೆ) ಹಾಗೂ ಆದ್ಯತಾ ಪಡಿತರ ಚೀಟಿ(ಬಿಪಿಎಲ್)ಗೆ ಪ್ರತಿ ಪ್ರತಿ ಸದಸ್ಯರಿಗೆ 5 ಕೆಜಿಯಂತೆ ಬಿಡುಗಡೆ ಮಾಡಲಾಗಿದೆ.ಫೆಬ್ರವರಿ ತಿಂಗಳದ ವಿತರಣೆ ಪ್ರಸ್ತುತ ಪೂರ್ಣಗೊಂಡಿರುವುದರಿಂದ ಫೆಬ್ರವರಿ ತಿಂಗಳಿನ 5 ಕೆಜಿ ಹೆಚ್ಚುವರಿ ಅಕ್ಕಿಯನ್ನು ಮಾರ್ಚ್ ತಿಂಗಳು ವಿತರಣೆ ಸಮಯದಲ್ಲಿ ಸೇರಿಸಿ ಒಟ್ಟು 15 ಕೆಜಿ ಅಕ್ಕಿಯನ್ನು ಪಿಎಚ್‌ಎಚ್(ಬಿಪಿಎಲ್)ನ ಪ್ರತಿ ಫಲಾನುಭವಿಗೆ ವಿತರಣೆ ಮಾಡಲಾಗುತ್ತದೆ.