ಸಾರಾಂಶ
ಚಾಮರಾಜನಗರದ ಜೆಎಸ್‌ಎಸ್ ಕಾಲೇಜಿನ ಆವರಣದಲ್ಲಿ ಹಮ್ಮಿಕೊಂಡಿದ್ದ ಜೆಎಸ್‌ಎಸ್ ಮಹಿಳಾ ಕಾಲೇಜಿನ ಸಾಂಸ್ಕೃತಿಕ ಮತ್ತು ಕ್ರೀಡಾ ವೇದಿಕೆಗಳ ಸಮಾರೋಪ ಸಮಾರಂಭದಲ್ಲಿ ಮಲೆಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ, ಎ.ಈ ರಘು ಸಮಾರೋಪ ಭಾಷಣ ಮಾಡಿದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ನಮ್ಮ ಸಾಂಸ್ಕೃತಿಕ ಪರಂಪರೆಯಲ್ಲಿ ಮಹಿಳೆಯರೇ ಒಂದು ವಿಶ್ವವಿದ್ಯಾನಿಲಯ ಇದ್ದ ರೀತಿ ಎಂದು ಮಲೆಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ, ಎ.ಈ ರಘು ಹೇಳಿದರು.ನಗರದ ಜೆಎಸ್‌ಎಸ್ ಕಾಲೇಜಿನ ಆವರಣದಲ್ಲಿ ಹಮ್ಮಿಕೊಂಡಿದ್ದ ಜೆಎಸ್‌ಎಸ್ ಮಹಿಳಾ ಕಾಲೇಜಿನ ಸಾಂಸ್ಕೃತಿಕ ಮತ್ತು ಕ್ರೀಡಾ ವೇದಿಕೆಗಳ ಸಮಾರೋಪ ಸಮಾರಂಭದಲ್ಲಿ ಸಮಾರೋಪ ಭಾಷಣ ಮಾಡಿ ಮಾತನಾಡಿದ ಅವರು, ತಾಯಿಯಾಗಿ, ಹೆಂಡತಿಯಾಗಿ, ಸೊಸೆಯಾಗಿ, ಮನೆಯ ಜವಾಬ್ದಾರಿ ಹೊತ್ತು ಆರ್ಥಿಕ ತಜ್ಞೆಯಾಗಿ ಒಬ್ಬ ಮಹಿಳೆ ನಿರ್ವಹಿಸುತ್ತಿರುವುದು ಭೌತಿಕ ವಿಶ್ವವಿದ್ಯಾನಿಲಯ ಇದ್ದ ಹಾಗೆ ಎಂದರು.ಭಾರತೀಯ ಸಂಸ್ಕೃತಿಯ ಧೀಮಂತ ಶಕ್ತಿ ಹೆಣ್ಣು, ಸಾಂಸ್ಕೃತಿಕ ಪರಂಪರೆಯಲ್ಲಿ ಮಹಿಳೆಯರಿಗೆ ಪೂಜ್ಯನೀಯ ಸ್ಥಾನ ನೀಡಲಾಗಿದೆ, ಪ್ರಸ್ತುತ ಸನ್ನಿವೇಶದಲ್ಲೂ ರಾಜಕೀಯವಾಗಿ, ಶೈಕ್ಷಣಿಕವಾಗಿ, ಸಾಹಿತ್ಯಕವಾಗಿ, ಆಡಳಿತಾತ್ಮಕವಾಗಿ ಮಹಿಳೆಯರು ಮುಂದೆ ಬರುತ್ತಿರುವುದು ಅಭಿವೃದ್ದಿಯ ಸಂಕೇತ ಎಂದರು. ಇದು ಸ್ಪರ್ಧಾತ್ಮಕ ಜಗತ್ತು ಇಲ್ಲಿ ಸ್ಪರ್ಧಾತ್ಮಕ ಪರೀಕ್ಷಗಳನ್ನು ಎದುರಿಸಬೇಕು, ಈ ನಿಟ್ಟಿನಲ್ಲಿ ಪ್ರಾಧಿಕಾರದ ವತಿಯಿಂದಲೂ ಕಾಲೇಜಿನಲ್ಲಿ ತರಬೇತಿ ಆರಂಭಿಸಿದರೆ ಸಹಕಾರ ನೀಡಲಾಗುವುದು ಎಂದರು.ಬಸವಣ್ಣನವರ ಕಾಯಕ ದಾಸೋಹ ಪರಂಪರೆಯನ್ನು ಮಠ ಮಾನ್ಯಗಳು, ಮಾಡುತ್ತಿವೆ, ರಾಜ್ಯದ ಬಹುತೇಕ ದೇವಸ್ಥಾನಗಳಲ್ಲಿ ದಾಸೋಹದ ವ್ಯವಸ್ಥೆ ಇದೆ, ಜೆಎಸ್‌ಎಸ್ ಸಂಸ್ಥೆ ಅನ್ನ ದಾಸೋಹದ ಜೊತೆ ಉತ್ತಮ ಶಿಕ್ಷಣವನ್ನು ನೀಡುತ್ತಾ ಬಂದಿದೆ. ಇಂತಹ ಸಂಸ್ಥೆಯಲ್ಲಿ ಕಲಿಯುತ್ತಿರುವ ನೀವೆ ಪುಣ್ಯವಂತರು, ಒಳ್ಳೆಯ ಶಿಕ್ಷಣ ಪಡೆದು, ಉತ್ತಮ ಅಧಿಕಾರಿಗಳಾಗಿ, ಉತ್ತಮ ವ್ಯಕ್ಷಿಗಳಾಗಿ ಸಂಸ್ಥೆಗೂ, ಪೋಷಕರಿಗೂ ಒಳ್ಳೆಯ ಹೆಸರು ತನ್ನಿ ಎಂದು ಶುಭ ಹಾರೈಸಿದರು.ಸಾಧಕರು ನಿಮಗೆ ಪ್ರೇರಣೆ ಆದಾಗ ಸಂಸ್ಕೃತಿಗೆ ಅರ್ಥ ಬರಲಿದೆ, ಕ್ರೀಡಾ ಮನೋಧರ್ಮವನ್ನು ಬೆಳೆಸಿಕೊಂಡು, ಒಳ್ಳೆಯ ಸಂಸ್ಕೃತಿಯ ವಾರಸುದಾರರಾಗಿ ಬದುಕನ್ನು ಕಟ್ಟಿಕೊಳ್ಳಿ ಎಂದರು. ಮುಖ್ಯ ಅತಿಥಿಯಾಗಿದ್ದ ಅಂತಾರಾಷ್ಟ್ರೀಯ ಕುಸ್ತಿಪಟು ಮೈಸೂರಿನ ರೀಟಾ ಪ್ರಿಯಾಂಕ ಮಾತನಾಡಿ, ಮಾನಸಿಕ ಮತ್ತು ದೈಹಿಕ ದೃಢತೆಗೆ ಕ್ರೀಡೆ ಮತ್ತು ಸಾಂಸ್ಕ್ಥತಿಕ ಚಟುವಟಿಕೆಗಳು ಮುಖ್ಯವಾಗಿದೆ ಎಂದರು. ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಮಹದೇವಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.
ಇದೇ ಸಂದರ್ಭದಲ್ಲಿ ವಿವಿಧ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು. ಪೌರಾಯುಕ್ತ .ವಿ ಎಸ್ ರಾಮದಾಸ್, ಪ್ರಾಂಶುಪಾಲ ದೇವರಾಜಮೂರ್ತಿ, ಸಾಂಸ್ಕೃತಿಕ ವೇದಿಕೆ ಸಂಚಾಲಕರಾದ ಜಮುನಾ, ಜೆಎಸ್ ಎಸ್, ದೈಹಿಕ ಶಿಕ್ಷಣ ನಿರ್ದೇಶಕ ಉಮೇಶ್, ಸಾಂಸ್ಕೃತಿಕ ವೇದಿಕೆ ಅಧ್ಯಕ್ಷೆ ಕ. ಕೃತಿಕಾ ಉಪಸ್ಥಿತರಿದ್ದರು.