ಸಾರಾಂಶ
ನರಗುಂದ: ಜೀವನದ ಪ್ರತಿಯೊಂದು ಹಂತದಲ್ಲೂ ಮಹಿಳೆಯರ ಪಾತ್ರ ಅಗಾಧ. ಆ ಜೀವವೇ ಇಲ್ಲದೇ ಹೋದರೆ ಈ ಜೀವಕ್ಕೆ ಹಾಗೂ ಜೀವನಕ್ಕೆ ಅಸ್ತಿತ್ವವಿಲ್ಲ. ಮನೆಗೆ ಬೆಳಗುವ ಬೆಳಕಾಗಿ ಮಹಿಳೆ ಮಿಂಚುವಳು ಎಂದು ಗ್ರಾಪಂ ಸದಸ್ಯ ಭೀಮಪ್ಪ ಹೊರಕೇರಿ ಹೇಳಿದರು. ಅವರು ತಾಲೂಕಿನ ಕೊಣ್ಣೂರ ಗ್ರಾಪಂದಲ್ಲಿ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಅಮೆರಿಕಾದ ನ್ಯೂಯಾರ್ಕ್‌ನಲ್ಲಿ 1908ರ ಗಾರ್ಮೆಂಟ್ಸ್ ಕಾರ್ಮಿಕರ ಮುಷ್ಕರದ ನೆನಪಿಗಾಗಿ ಮೊದಲ ರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಯಿತು. ಅದರ ಸ್ಮರಣಾರ್ಥ ಪ್ರತಿ ವರ್ಷ ಮಾರ್ಚ್ 8ರಂದು ಈ ದಿನವನ್ನು ಆಚರಿಸಲಾಗುತ್ತಿದೆ. ಇದರ ಮುಖ್ಯ ಉದ್ದೇಶ ಲಿಂಗ ಸಮಾನತೆ ಎತ್ತಿ ಹಿಡಿಯುವುದು, ಜೊತೆಗೆ ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಒತ್ತು ನೀಡುವುದು. ಅಪ್ರತಿಮ ಸಾಧನೆ ಮಾಡಿದ ಮಹಿಳಾ ಸಾಧಕಿಯರಿಗೆ ಗೌರವ ಸಲ್ಲಿಸುವ ಮೂಲಕ ಮತ್ತಷ್ಟು ಸಾಧನೆಯನ್ನು ಮಾಡಲು ಪ್ರೋತ್ಸಾಹವನ್ನು ನೀಡಲಾಗುತ್ತದೆ. ಮಹಿಳೆಯರಿಗೆ ಈ ಜಗತ್ತನ್ನು ಉತ್ತಮ ಮತ್ತು ಸುರಕ್ಷಿತ ಸ್ಥಳವನ್ನಾಗಿ ಬದಲಾಯಿಸಬೇಕಾಗಿದೆ ಎಂದು ಹೇಳಿದರು. ಪಿಡಿಒ ಮಂಜುನಾಥ ಗಣಿ ಮಾತನಾಡಿ, ಸಮಾಜದಲ್ಲಿ ಮಹಿಳೆಯರು ತಮ್ಮ ಮಕ್ಕಳಿಗೆ ಉತ್ತಮವಾದ ಶಿಕ್ಷಣ, ಆರೋಗ್ಯ, ಸಂಸ್ಕಾರ ನೀಡುವಲ್ಲಿ ತಮ್ಮ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು. ಪ್ರಾರ್ಚಾರ್ಯ ಕೆ.ಎಂ.ಮಾಕ್ಕಣ್ಣವರ ಮಹಿಳಾ ದಿನಾಚರಣೆ ಮಹಿಳೆಯರ ಸಾಧನೆ ಗುರುತಿಸುವ ವೇದಿಕೆಯಾಗಿದೆ. ಅಲ್ಲದೆ ಲಿಂಗ ಸಮಾನತೆಯ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಮಹಿಳಾ ಸಬಲೀಕರಣವನ್ನು ಬೆಂಬಲಿಸಲು ವಿಶ್ವದಾದ್ಯಂತ ಮಹಿಳೆಯರ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಸಾಧನೆಗಳ ಬಗ್ಗೆ ಜಾಗೃತಿ ಮೂಡಿಸಲು ಶಿಕ್ಷಣ ಮತ್ತು ಉದ್ಯೋಗಾವಕಾಶದ ಸಮಾನ ಪ್ರವೇಶ ಸೇರಿದಂತೆ ಮಹಿಳೆಯರು ಎದುರಿಸುತ್ತಿರುವ ನಿರಂತರ ಸವಾಲುಗಳು ಮತ್ತು ಮಹಿಳೆಯರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವುದು ಈ ದಿನಾಚರಣೆಯ ಗುರಿಯಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಜೈ ಕಿಸಾನ್ ಕಲಾ ತಂಡದಿಂದ ಹಲವು ಜಾನಪದ ಗೀತೆ ಅಲ್ಲದೆ ವಿವಿಧ ಏಕಪಾತ್ರಾಭಿನಯ ಹಾಗೂ ಜೋಗದ ಸಿರಿ ಬೆಳಕಿನಲ್ಲಿ ತುಂಗೆಯ ತೆನೆ ಬಳುಕಿನಲ್ಲಿ ಗೀತೆಗಳು ಮೂಡಿಬಂದವು.ಕಾರ್ಯಕ್ರಮದಲ್ಲಿ ಗ್ರಾಪಂ ಸದಸ್ಯರಾದ ಗೂಳಪ್ಪ ಹುಜರತ್ತಿ, ಕೋಟ್ರೇಶ ಕೊಟ್ರೆಶೆಟ್ಟಿ, ಮುಮ್ತಾಜ್ ಬೇಗಂ ಕುರ್ಲಗೇರಿ, ಹುಸೇನಬಿ ಬುರಡಿ, ಪ್ರಕಾಶ ಚಂದಣ್ಣವರ, ತಾಲೂಕು ಕಾರ್ಯಕ್ರಮ ಸಂಯೋಜಕ ಮೋಹನಕೃಷ್ಣ, ಸಂಜೀವಿನಿ ಘಟಕದ ಅಧ್ಯಕ್ಷೆ ಶಂಕ್ರಮ್ಮ ಹೂಲಗೇರಿ, ಮೋಹನ ಉಪವಾಸೆ, ಚಂದ್ರಗೌಡ ಲಿಂಗನಗೌಡ್ರ ಪ್ರದೀಪ ಕದಂ, ಲಕ್ಷ್ಮಣ ಪೂಜಾರ, ಹಾಗೂ ಸಿಬ್ಬಂದಿಗಳು ಇದ್ದರು.