ಮಹಿಳೆಯರು ಅಭಿವೃದ್ಧಿ ಹೊಂದಿದ್ದು ದೇವರಿಂದಲ್ಲ, ಸಂವಿಧಾನದಿಂದ: ಸಚಿವ ಲಾಡ್‌

| Published : Mar 12 2024, 02:01 AM IST

ಮಹಿಳೆಯರು ಅಭಿವೃದ್ಧಿ ಹೊಂದಿದ್ದು ದೇವರಿಂದಲ್ಲ, ಸಂವಿಧಾನದಿಂದ: ಸಚಿವ ಲಾಡ್‌
Share this Article
  • FB
  • TW
  • Linkdin
  • Email

ಸಾರಾಂಶ

ಭಾರತೀಯ ಮಹಿಳೆಯರು ಶಿಕ್ಷಣ, ವಿಜ್ಞಾನ, ತಂತ್ರಜ್ಞಾನ, ಆಡಳಿತ, ರಾಜಕೀಯ ಕ್ಷೇತ್ರದಲ್ಲಿ ಮುಂದೆ ಬರಲು ನಿತ್ಯ ನಾವು ಪೂಜಿಸುವ ದೇವರುಗಳಿಂದಲ್ಲ. ಈ ದೇಶದ ಸಂವಿಧಾನ ಮತ್ತು ಡಾ. ಬಿ.ಆರ್. ಅಂಬೇಡ್ಕರ್‌ ಅವರಿಂದ ಸಾಧ್ಯವಾಗಿದೆ.

ಧಾರವಾಡ:

ಭಾರತೀಯ ಮಹಿಳೆಯರು ಶಿಕ್ಷಣ, ವಿಜ್ಞಾನ, ತಂತ್ರಜ್ಞಾನ, ಆಡಳಿತ, ರಾಜಕೀಯ ಕ್ಷೇತ್ರದಲ್ಲಿ ಮುಂದೆ ಬರಲು ನಿತ್ಯ ನಾವು ಪೂಜಿಸುವ ದೇವರುಗಳಿಂದಲ್ಲ. ಈ ದೇಶದ ಸಂವಿಧಾನ ಮತ್ತು ಡಾ. ಬಿ.ಆರ್. ಅಂಬೇಡ್ಕರ್‌ ಅವರಿಂದ ಸಾಧ್ಯವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್‌ ಹೇಳಿದರು.

ಸೋಮವಾರ ಇಲ್ಲಿಯ ಕವಿವಿಯ ಡಾ. ಬಿ.ಆರ್. ಅಂಬೇಡ್ಕರ್‌ ಅವರ ಅಧ್ಯಯನ ವಿಭಾಗದಲ್ಲಿ ನಿರ್ಮಾಣವಾಗುವ ಡಾ. ಬಿ. ಆರ್. ಅಂಬೇಡ್ಕರ್‌ ಹೈಟೆಕ್ ಮಾದರಿಯ ಫೋಟೋ ಗ್ಯಾಲರಿ ಅಡಿಗಲ್ಲು ಸಮಾರಂಭ ನೆರವೇರಿಸಿದ ಅವರು, ರಾಜ್ಯ ಸರ್ಕಾರವು ಧಾರವಾಡ ಜಿಲ್ಲೆಗೆ ನೀಡಿದ ₹ 2 ಕೋಟಿ ಅನುದಾನದಲ್ಲಿ ₹ 1.16 ಕೋಟಿ ವೆಚ್ಚದಲ್ಲಿ ಈ ಗ್ಯಾಲರಿ ನಿರ್ಮಾಣ ಆಗಲಿದೆ. ವಿದ್ಯಾರ್ಥಿಗಳು ಪಠ್ಯದೊಂದಿಗೆ ಬುದ್ಧ, ಬಸವ ಹಾಗೂ ಅಂಬೇಡ್ಕರ್‌ ಅವರ ತತ್ವ-ಸಿದ್ಧಾಂತಗಳನ್ನು ಅಧ್ಯಯನ ಮಾಡಬೇಕು ಎಂದರು.ಅಂಬೇಡ್ಕರ್‌ ಜಗತ್ತಿನ ಮೂವರು ಪ್ರಮುಖ ಚಿಂತಕರಲ್ಲಿ ಮೊದಲಿಗರು, ಭಾರತೀಯ ಮಹಿಳೆಯರ ಪಿತ್ರಾರ್ಜಿತ ಆಸ್ತಿಯಲ್ಲಿ ಮಹಿಳೆಯರಿಗೂ ಸಮಪಾಲು ನೀಡುವ ಉದ್ದೇಶ ಹೊಂದಿದ ಹಿಂದೂ ಕೋಡ್ ಬಿಲ್ ಜಾರಿಗೆ ತರಲು ವಿರೋಧಿಸಿದ್ದಕ್ಕಾಗಿ ತಮ್ಮ ಕಾನೂನು ಮಂತ್ರಿಯ ಸ್ಥಾನವನ್ನೇ ತ್ಯಜಿಸಿದ ಭಾರತೀಯ ಏಕೈಕ ನಾಯಕ ಅಂಬೇಡ್ಕರ್‌. ಅಲ್ಲದೇ ಅವರು ಭಾರತದ ಸಂವಿಧಾನ ರಚಿಸಲು ಜಗತ್ತಿನ 60 ರಾಷ್ಟ್ರಗಳ ಸಂವಿಧಾನವನ್ನು ಸಮಗ್ರವಾಗಿ ಅಧ್ಯಯನ ಮಾಡಿ ಅವುಗಳಲ್ಲಿನ ಉತ್ತಮ ಅಂಶ ಸಂಗ್ರಹಿಸಿ ಭಾರತದ ಸಂವಿಧಾನ ರಚಿಸಿದ್ದಾರೆ ಎಂದು ಹೇಳಿದರು.ಜಿಲ್ಲಾಧಿಕಾರಿ ದಿವ್ಯಾ ಪ್ರಭು ಮಾತನಾಡಿ, ನಾನು ಧಾರವಾಡ ಜಿಲ್ಲಾಧಿಕಾರಿಯಾಗಲು ಭಾರತೀಯ ಸಂವಿಧಾನವೇ ಕಾರಣ. ಮಹಿಳೆಯರಿಗೆ ಅಂಬೇಡ್ಕರ್‌ ಮತ್ತು ಸಂವಿಧಾನದ ಕೊಡುಗೆ ಆಗಾಧ ಎಂದರು. ಅಧ್ಯಕ್ಷತೆ ವಹಿಸಿದ್ದ ಶಾಸಕ ಅರವಿಂದ ಬೆಲ್ಲದ ಮಾತನಾಡಿ, ಅಂಬೇಡ್ಕರ್‌ ಕೇವಲ ದಲಿತರ ನಾಯಕರಲ್ಲ. ಇಡೀ ಭಾರತದ ಎಲ್ಲ ಜಾತಿ, ಜನಾಂಗಗಳ ನಾಯಕರು. ಅವರು ಬಾಲ್ಯದಲ್ಲಿ ಅನೇಕ ಕಷ್ಟಗಳನ್ನು ಅನುಭವಿಸಿ ಸಂವಿಧಾನವನ್ನು ರಚಿಸುವಾಗ ತಮಗಾದ ನೋವುವನ್ನು ಬದಿಗಿಟ್ಟು ಸರ್ವರಿಗೂ ಕಲ್ಯಾಣವಾಗುವಂತಹ ಸಂವಿಧಾನವನ್ನು ನಮಗೆ ನೀಡಿದ್ದಾರೆ ಎಂದು ಸ್ಮರಿಸಿದರು.ಕುಲಪತಿ ಪ್ರೊ. ಕೆ.ಬಿ. ಗುಡಸಿ, ಮೌಲ್ಯಮಾಪನ ಕುಲಸಚಿವ ಡಾ. ಎನ್.ವೈ. ಮಟ್ಟಿಹಾಳ, ಹಣಕಾಸು ಅಧಿಕಾರಿ ಡಾ. ಸಿ. ಕೃಷ್ಣಮೂರ್ತಿ, ಸಮಾಜ ಕಲ್ಯಾಣ ಇಲಾಖೆಯ ಅಪರ ನಿರ್ದೇಶಕ ಡಾ. ಅಲ್ಲಾಭಕ್ಷ, ಡಾ. ಬಿ. ಆರ್. ಅಂಬೇಡ್ಕರ್‌ ಅಧ್ಯಯನ ವಿಭಾಗದ ಸಂಯೋಜಕ ಡಾ. ಸುಭಾಶ್ಚಂದ್ರ ನಾಟೀಕಾರ, ಪ್ರಾಧ್ಯಾಪಕರಾದ ಡಾ. ಸಂಗೀತಾ ಮಾನೆ, ಡಾ. ಶ್ಯಾಮಲಾ ರತ್ನಾಕರ, ಡಾ. ಎಸ್.ವೈ. ಮುಗಳಿ, ಡಾ. ಎಸ್.ಕೆ. ಪವಾರ ಇದ್ದರು.

ಕವಿವಿ ಇಂದು ಆರ್ಥಿಕವಾಗಿ ಸಂಕಷ್ಟದ ಸ್ಥಿತಿಯಲ್ಲಿದೆ. ಶಿಕ್ಷಕರಿಗೆ-ಶಿಕ್ಷಕೇತರ ನೌಕರರಿಗೆ, ಗುತ್ತಿಗೆದಾರ ನೌಕರರಿಗೆ ಹಾಗೂ ನಿವೃತ್ತಿ ನೌಕರರಿಗೆ ವೇತನ ಸಹ ನೀಡಲು ಸಹ ವಿಶ್ವವಿದ್ಯಾಲಯದಲ್ಲಿ ಹಣವಿಲ್ಲ. ಸಚಿವ ಸಂತೋಷ ಲಾಡ್‌, ಶಾಸಕ ಅರವಿಂದ ಬೆಲ್ಲದ ಅವರು ರಾಜ್ಯ ಸರ್ಕಾರ ಆರ್ಥಿಕ ಸಂಕಷ್ಟದಿಂದ ವಿವಿಯನ್ನು ಪಾರು ಮಾಡಲು ಪ್ರಯತ್ನಿಸಬೇಕು ಎಂದು ಡಾ. ಬಿ.ಆರ್. ಅಂಬೇಡ್ಕರ್‌ ಅಧ್ಯಯನ ವಿಭಾಗದ ಸಂಯೋಜಕ ಡಾ. ಸುಭಾಶ್ಚಂದ್ರ ನಾಟೀಕಾರ ಹೇಳಿದರು.