ನರಗುಂದ: ರಾಜ್ಯದಲ್ಲಿ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ ಪ್ರಣಾಳಿಕೆ ಪ್ರಕಾರ ಎಲ್ಲ ಗ್ಯಾರಂಟಿ ಯೋಜನೆ ಜಾರಿಗೆ ತಂದಿದ್ದರಿಂದ ಸಮಾಜದಲ್ಲಿ ಮಹಿಳೆಯರು ಆರ್ಥಿಕವಾಗಿ ಸದೃಢರಾಗಿದ್ದಾರೆ ಎಂದು ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ವಿವೇಕ ಯಾವಗಲ್ ತಿಳಿಸಿದರು.

ಮಂಗಳವಾರ ತಾಲೂಕಿನ ಬನಹಟ್ಟಿ ಗ್ರಾಪಂ ಸಭಾಭವನದಲ್ಲಿ ಗ್ಯಾರಂಟಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ನಾಡಿನ ಮಹಿಳೆಯರ ಸಬಲೀಕರಣಕ್ಕೆ ಗೌರವಯುತ ಬದುಕಿಗಾಗಿ ಸರ್ಕಾರದ ಶಕ್ತಿ ಯೋಜನೆ ಹಾಗೂ ಗೃಹಲಕ್ಷ್ಮೀ ಯೋಜನೆಗಳನ್ನು ಮತ್ತು ಯುವನಿಧಿ ಯೋಜನೆಯ ಮೂಲಕ ಯುವ ಸಮುದಾಯದವರ ಆರ್ಥಿಕ ಶಕ್ತಿ ಹಾಗೂ ಜ್ಞಾನವನ್ನು ಸಂಪಾದಿಸಲು ಸಹಕಾರಿಯಾಗಿವೆ ಎಂದರು.

ಸಮಿತಿ ಕಾರ್ಯದರ್ಶಿ ಹಾಗೂ ತಾಪಂ ಅಧಿಕಾರಿ ಎಸ್.ಕೆ. ಇನಾಮದಾರ ಮಾತನಾಡಿ, ತಾಲೂಕು ಗ್ಯಾರಂಟಿ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಅನುಷ್ಠಾನ ಇಲಾಖೆಯ ಅಧಿಕಾರಿಗಳ ಮತ್ತು ಈ ಭಾಗದ ಜನರ ಸಹಕಾರದೊಂದಿಗೆ ಎಲ್ಲ ಗ್ಯಾರಂಟಿ ಯೋಜನೆಗಳಲ್ಲಿ ಶೇ. 99ರಷ್ಟು ಪ್ರಗತಿ ಸಾಧಿಸಿದ್ದೇವೆ. ಇದಕ್ಕೆ ನಮ್ಮ ಇಲಾಖಾ ಅಧಿಕಾರಿಗಳ ಕ್ರಿಯಾತ್ಮಕ ಕಾರ್ಯಶೈಲಿ ಮತ್ತು ಸಮಿತಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಆಸಕ್ತಿಯೇ ಕಾರಣ. ಅವರ ನಿರ್ಣಯದಂತೆ ಗ್ಯಾರಂಟಿ ಯೋಜನೆಗಳು ಜನರಿಗೆ ಮುಟ್ಟಿರುವ ಬಗ್ಗೆ ತಾಲೂಕಿನ ಪ್ರತಿ ಗ್ರಾಪಂನಲ್ಲಿ ಸಭೆ ಜರುಗಿಸಿ ಯೋಜನೆಗಳ ಪ್ರಗತಿ ಜತೆಗೆ ಇನ್ನುಳಿದ ಫಲಾನುಭವಿಗಳನ್ನು ಸಹ ಯೋಜನೆ ವ್ಯಾಪ್ತಿಗೊಳಪಡಿಸುವ ಪ್ರಯತ್ನ ನಡೆದಿದೆ ಎಂದರು.

ಗ್ಯಾರಂಟಿ ಸಮಿತಿ ಸದಸ್ಯ ಟಿ.ಬಿ. ಶಿರಿಯಪ್ಪಗೌಡ್ರ ಮಾತನಾಡಿ, ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಐದು ಗ್ಯಾರಂಟಿಗಳನ್ನು ಜಾರಿಗೆ ತಂದು ಜನರಪರ ಆಡಳಿತವನ್ನು ನೀಡುತ್ತಿದೆ ಎಂದರು. ಗ್ಯಾರಂಟಿ ಸಮಿತಿ ಸದಸ್ಯೆ ಉಮಾ ದ್ಯಾವನೂರ ಮಾತನಾಡಿ, ನಾಡಿನ ಮಹಿಳೆಯರ ಸಬಲೀಕರಣಕ್ಕೆ ಗೌರವಯುತ ಬದುಕಿಗಾಗಿ ಸರ್ಕಾರದ ಶಕ್ತಿ ಯೋಜನೆ ಹಾಗೂ ಗೃಹಲಕ್ಷ್ಮೀ ಯೋಜನೆಗಳನ್ನು ಮತ್ತು ಯವನಿಧಿ ಯೋಜನೆಯ ಮೂಲಕ ಯುವ ಸಮುದಾಯದವರ ಆರ್ಥಿಕ ಶಕ್ತಿ ಹಾಗೂ ಜ್ಞಾನವನ್ನು ಸಂಪಾದಿಸಲು ಸಹಕಾರಿಯಾಗುವೆ ಎಂದರು.

ಸಾರಿಗೆ ಇಲಾಖೆ ಅಧಿಕಾರಿ ಮಾತನಾಡಿ, ಸರ್ಕಾರ ಜಾರಿಗೆ ತಂದಿರುವ ಶಕ್ತಿ ಯೋಜನೆಯಲ್ಲಿ ತಾಲೂಕಿನ ಮಹಿಳೆಯರು ಸದುಪಯೋಗ ಪಡೆದುಕೊಂಡಿದ್ದಾರೆಂದರು. ಶಿಶು ಅಭಿವೃದ್ದಿ ಇಲಾಖೆ ಅಧಿಕಾರಿ ಮಾತನಾಡಿ, ಗೃಹಲಕ್ಷ್ಮೀ ಯೋಜನೆ ತಾಲೂಕಿನಲ್ಲಿ ಶೇ. 99. 9ರಷ್ಟು ಜಾರಿಗೊಂಡು 24450 ಯಜಮಾನಿಯರಿಗೆ ಪ್ರತಿ ತಿಂಗಳು ₹2000ರಂತೆ 2026ರ ಫೆಬ್ರವರಿ ಅಂತ್ಯದವರೆಗೆ ‌ಡಿಬಿಟಿ ಮೂಲಕ ಪಾವತಿಸಿದೆ ಎಂದರು. ಹೆಸ್ಕಾಂ ಇಲಾಖೆಯ ಅಧಿಕಾರಿ ಮಾತನಾಡಿ, ತಾಲೂಕಿನ ನೋಂದಾಯಿತ 25432 ವಿದ್ಯುತ್ ಸ್ಥಾವರಗಳ ಪೈಕಿ 25185 ಸ್ಥಾವರಗಳಿಗೆ ಗೃಹಜ್ಯೋತಿ ಯೋಜನೆಯಡಿ ಪ್ರತಿ ತಿಂಗಳು 200 ಯುನಿಟ್‌ನಂತೆ ಉಚಿತ ವಿದ್ಯುತ್ ಸೌಲಭ್ಯ ನೀಡಲಾಗಿದೆ. ಆ ಮೂಲಕ ಶೇ. 99.03ರಷ್ಟು ಯೋಜನೆ ಅನುಷ್ಠಾನವಾಗಿದೆ ಎಂದರು. ಆಹಾರ ನಿರೀಕ್ಷಕ ಪವಾರ ಮಾತನಾಡಿ, ಅನ್ನಭಾಗ್ಯ ಯೋಜನೆಯಡಿ 23093 ಪಡಿತರ ಚೀಟಿ ಹೊಂದಿದ ತಲಾ ಒಬ್ಬರಿಗೆ 10 ಕೆಜಿ ಅಕ್ಕಿಯಂತೆ ಒಟ್ಟು 8110ಕ್ವಿಂಟಲ್ ಅಕ್ಕಿಯನ್ನು ಫಲಾನುಭವಿಗಳಿಗೆ ಫೆಬ್ರವರಿ ಅಂತ್ಯದವರೆಗೆ ವಿತರಿಸಲಾಗಿದೆ ಎಂದರು. ಸಮಿತಿಯ ಸದಸ್ಯರಾದ ವೀರಯ್ಯ ಹುಚ್ಚಪ್ಪಯ್ಯನಮಠ, ವಿನಾಯಕ ಹಡಗಲಿ, ಹನುಮಂತ ರಾಮಣ್ಣವರ, ಶೇಖರಗೌಡ ಮದ್ನೂರ, ಚಂದ್ರಶೇಖರಗೌಡ ಪಾಟೀಲ, ಬಸನಗೌಡ ಮಲ್ಲನಗೌಡ್ರ, ಮೌಲಾಸಾಬ ಅರಬಜಮಾದಾರ, ತಮ್ಮನಗೌಡ ಮಲ್ಲನಗೌಡ, ದ್ಯಾವನಗೌಡ ಮಲ್ಲನಗೌಡರ, ಶೇರಣಪ್ಪ ಕಲ್ಲಾಪೂರ, ಅಶೋಕ ಪಾಟೀಲ, ಪಂಚಾಯಿತಿ ಆಡಳಿತಾಧಿಕಾರಿ ಬಸವರಾಜ ಬಡಿಗೇರ, ಪಿಡಿಒ ಮಂಜುನಾಥ ಗಣಿ, ಎ.ಐ. ಕುಸುಗಲ್, ಗ್ರಾಪಂ ಸಿಬ್ಬಂದಿ ತಾಲೂಕಿನ ಸಂಜೀವಿನಿ ಯೋಜನೆಯ ಸಿಬ್ಬಂದಿ ಇದ್ದರು.