ಕಾರ್ಯಕ್ರಮದಲ್ಲಿ ಶ್ರೀ ಡಾ.ನಿಶ್ಚಲಾನಂದನಾಥ ಸ್ವಾಮೀಜಿಗಳ ಪಾದಗಳಿಗೆ ಜಲಧಾರೆ ಮಾಡಿ ಪುಷ್ಪ ನಮನ ಅರ್ಪಿಸಲಾಯಿತು. ಕ್ರೀಡಾ ಹಾಗೂ ಶೈಕ್ಷಣಿಕವಾಗಿ ಸಾಧನೆ ಮಾಡಿದ ಹಲವು ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಸಮಾಜದ ಅಭಿವೃದ್ಧಿಯಲ್ಲಿ ಪುರುಷರಿಗೆ ಸರಿಸಮಾನರಾಗಿ ಕೆಲಸ ಮಾಡಲು ಮಹಿಳೆಯರಲ್ಲಿರುವ ಧೈರ್ಯ ಮತ್ತು ಶ್ರಮವೇ ಕಾರಣ ಎಂದು ಕೆಂಗೇರಿ ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿಶ್ಚಲಾನಂದನಾಥ ಸ್ವಾಮೀಜಿ ಹೇಳಿದರು.ಸಮೀಪದ ಮೆಣಸಗೆರೆ ಗ್ರಾಮದ ಜ್ಞಾನ ಮುದ್ರ ವಿದ್ಯಾ ಮಂದಿರ ಶಾಲಾ ವಾರ್ಷಿಕೋತ್ಸವದ ಅಂಗವಾಗಿ ಜ್ಞಾನ ಪರಂಪರೆ-26, ಮಣಿಕಂಠ ಮಹಿಮೋತ್ಸವ ನಾಟಕ ಪ್ರದರ್ಶನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಸ್ತ್ರೀ ಕುಲದ ಧೈರ್ಯ ಮೆಚ್ಚುವಂತೆ ಸಂಸ್ಥೆ ಸಂಸ್ಥಾಪಕರಾಗಿ ಜೋಡೆತ್ತುಗಳಂತೆ ಡಾ.ಸೌಮ್ಯ ರಾಜೇಶ್ ಮತ್ತು ಶಿವಮ್ಮ ಶಿವಕುಮಾರ್ ಕಾರ್ಯನಿರ್ವಹಿಸುತ್ತ, ಉತ್ತಮ ಶಿಕ್ಷಣ ನೀಡುತ್ತ ಅಭಿವೃದ್ಧಿಗೆ ಮುನ್ನುಡಿ ಬರೆಯುತಿದ್ದಾರೆ ಎಂದು ಶ್ಲಾಘಿಸಿದರು.ಭಾರತೀಯ ಹಿಂದೂ ಧರ್ಮದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಮಹಿಳೆಯರು ಅತ್ಯಂತ ನಿರ್ಲಕ್ಷ್ಯಕ್ಕೆ ಒಳಗಾಗಿದ್ದರು. ಆದರೆ, ಸ್ವಾತಂತ್ರ್ಯ ನಂತರ ಮಹಿಳೆಯರಿಗೆ ಗೌರವ ಹೆಚ್ಚಾಗಿದೆ. ಸಮಾಜದ ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳೆಯರು ಕೆಲಸ ಮಾಡಿ ಸಾಧನೆ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ದೇಶದ ಸಂವಿಧಾನದ ಮೂಲಕ ಮಹಿಳೆಯರಿಗೆ ಹಲವು ಅವಕಾಶಗಳು ದೊರಕುತ್ತಿವೆ. ಸ್ಥಾನಮಾನಗಳು ಸಿಗುತ್ತಿವೆ. ಇದರ ಲಾಭ ಪಡೆದು ತಮ್ಮ ಧೈರ್ಯ, ಶ್ರಮದಿಂದ ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆ ಮಾಡಲು ಸಹಕಾರಿಯಾಗಿವೆ ಎಂದು ಹೇಳಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಬಿ.ಧನಂಜಯ ಮಾತನಾಡಿ, ವಿದ್ಯಾರ್ಥಿಗಳು ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ರವರ ಆಲೋಚನೆ ಮತ್ತು ರಾಷ್ಟ್ರಕವಿ ಕುವೆಂಪುರವರ ವಿಶ್ವಮಾನವ ಚಿಂತನೆ, ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಂಸ್ಥೆ ಅಧ್ಯಕ್ಷೆ ಡಾ.ಸೌಮ್ಯ ರಾಜೇಶ್ ಮತ್ತು ಕಾರ್ಯದರ್ಶಿ ಶಿವಮ್ಮ ಶಿವಕುಮಾರ್ ಅವರು, ತಮ್ಮ ಧ್ಯೇಯ, ಶಾಲಾ ಶೈಕ್ಷಣಿಕ ಸಾಧನೆ, ವಿದ್ಯಾರ್ಥಿಗಳ ಪ್ರತಿಭೆ ಮತ್ತು ಸಂಸ್ಥೆ ಸಾಧನೆ ಪಥವನ್ನು ಸ್ಮರಿಸಿದರು. ಸಂಸ್ಥೆ ಪ್ರಾಂಶುಪಾಲರಾದ ಕೆ.ಎಸ್.ಶೃತಿ, ಮಕ್ಕಳ ಸರ್ವಾಂಗೀಣ ಬೆಳವಣಿಗೆ, ಮಹತ್ವವನ್ನು ವಿವರಿಸಿದರು.ಕಾರ್ಯಕ್ರಮದಲ್ಲಿ ಶ್ರೀ ಡಾ.ನಿಶ್ಚಲಾನಂದನಾಥ ಸ್ವಾಮೀಜಿಗಳ ಪಾದಗಳಿಗೆ ಜಲಧಾರೆ ಮಾಡಿ ಪುಷ್ಪ ನಮನ ಅರ್ಪಿಸಲಾಯಿತು. ಕ್ರೀಡಾ ಹಾಗೂ ಶೈಕ್ಷಣಿಕವಾಗಿ ಸಾಧನೆ ಮಾಡಿದ ಹಲವು ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಸಮಾರಂಭದಲ್ಲಿ ಮಣಿಕಂಠ ಮಹಿಮೋತ್ಸವ ಎಂಬ ಭಕ್ತಿ ಪ್ರಧಾನ ನಾಟಕ ಪ್ರದರ್ಶನ, ನೃತ್ಯ ಪೋಷಕರು, ಪ್ರೇಕ್ಷಕರ ಮನಸೂರೆಗೊಂಡವು. ಕಾರ್ಯಕ್ರಮದಲ್ಲಿ ಸಂಸ್ಥೆ ಟ್ರಸ್ಟಿ ತೇಜಸ್ವಿನಿ ತಿಪ್ಪಾರೆಗೌಡ, ಆಡಳಿತಾಧಿಕಾರಿ ಪ್ರಭಾವತಿ ಸೇರಿದಂತೆ ಹಲವರು ಇದ್ದರು.