ಮಹಿಳೆಯರಿಗಾಗಿ ಆಯೋಜಿಸಿರುವ ಉಚಿತ ಆರೋಗ್ಯ ತಪಾಸಣೆ ಶಿಬಿರ ಮತ್ತು ಜನಪ್ರಿಯ ‘ನೆಸ್ಟಿಂಗ್ ಪ್ಯಾಕೇಜ್’ ಕಾರ್ಯಕ್ರಮವನ್ನು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸದುಪಯೋಗಪಡಿಸಿಕೊಳ್ಳಬೇಕು. ಈ ರೀತಿಯ ಆರೋಗ್ಯ ಸೇವೆಗಳು ಮಹಿಳೆಯರ ಆರೋಗ್ಯವನ್ನು ಕಾಪಾಡುವಲ್ಲಿ ಮಹತ್ವದ ಪಾತ್ರವಹಿಸುತ್ತವೆ.

ಕನ್ನಡಪ್ರಭ ವಾರ್ತೆ ಹಾಸನ

ಕುಟುಂಬದ ವೈದ್ಯೆಯಂತೆ ಕಾರ್ಯ ನಿರ್ವಹಿಸುವ ಮಹಿಳೆಯರ ಆರೋಗ್ಯದ ಬಗ್ಗೆ ಸಮಾಜದಲ್ಲಿ ಹೆಚ್ಚಿನ ಜಾಗೃತಿ ಮೂಡಬೇಕಾದ ಅಗತ್ಯವಿದೆ ಎಂದು ಸಾಹಿತಿ ರೂಪಾ ಹಾಸನ ಹೇಳಿದರು.

ನಗರದ ಕೆ.ಆರ್. ಪುರಂನಲ್ಲಿರುವ ಜನಪ್ರಿಯ ಆಸ್ಪತ್ರೆಯಲ್ಲಿ ಬರ್ತ್ ಆ್ಯಂಡ್ ಬ್ಲೂಮ್ ವಿಭಾಗದ ವತಿಯಿಂದ ಬುಧವಾರ ಹಮ್ಮಿಕೊಳ್ಳಲಾಗಿದ್ದ ಮಹಿಳಾ ದಿನಾಚರಣೆಯ ಅಂಗವಾಗಿ ಮಹಿಳೆಯರು ಮತ್ತು ಹೆಣ್ಣು ಮಕ್ಕಳಿಗಾಗಿ ಆಯೋಜಿಸಲಾಗಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಾಗೂ ಜನಪ್ರಿಯ ‘ನೆಸ್ಟಿಂಗ್ ಪ್ಯಾಕೇಜ್’ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹಿಳೆ ಎಂದರೆ ಕೇವಲ ಕುಟುಂಬದ ಸದಸ್ಯೆಯಷ್ಟೇ ಅಲ್ಲ, ಅವಳು ಕುಟುಂಬದ ಆರೋಗ್ಯವನ್ನು ಕಾಪಾಡುವ ವೈದ್ಯೆಯಂತೆ ಕಾರ್ಯ ನಿರ್ವಹಿಸುತ್ತಾಳೆ. ಮನೆಯಲ್ಲಿರುವ ಎಲ್ಲರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು, ಅವರ ಆಹಾರ ಪದ್ಧತಿ, ಬಟ್ಟೆ, ದಿನನಿತ್ಯದ ಅವಶ್ಯಕತೆಗಳು ಎಲ್ಲವನ್ನೂ ಗಮನಿಸಿ ನೋಡಿಕೊಳ್ಳುವ ಜವಾಬ್ದಾರಿಯನ್ನು ಮಹಿಳೆಯೇ ಹೊರುತ್ತಾಳೆ. ಈ ನಿಟ್ಟಿನಲ್ಲಿ ಮಹಿಳೆಯರ ಆರೋಗ್ಯದ ಬಗ್ಗೆ ಹೆಚ್ಚು ಗಮನ ಕೊಡುವುದು ಸಮಾಜದ ಪ್ರತಿಯೊಬ್ಬರ ಕರ್ತವ್ಯವಾಗಬೇಕು ಎಂದು ಅವರು ಹೇಳಿದರು. ನಮ್ಮ ಭಾರತೀಯ ಸಾಮಾಜಿಕ ವ್ಯವಸ್ಥೆಯಲ್ಲಿ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ಕೊಡದೆ ಕುಟುಂಬದ ಎಲ್ಲ ಸದಸ್ಯರ ಅಗತ್ಯಗಳನ್ನು ಮೊದಲು ಪೂರೈಸಲು ಮುಂದಾಗುತ್ತಾರೆ. ಬಹುತೇಕ ಮನೆಗಳಲ್ಲಿ ಹಿರಿಯರು ಮತ್ತು ಇತರರು ಊಟ ಮಾಡಿದ ನಂತರವೇ ಮಹಿಳೆಯರು ಊಟ ಮಾಡುವ ಪದ್ಧತಿ ಇಂದಿಗೂ ಕಾಣಿಸುತ್ತಿದೆ. ಇದರಿಂದಾಗಿ ತಮ್ಮ ಆರೋಗ್ಯವನ್ನು ನಿರ್ಲಕ್ಷಿಸುವವರಲ್ಲಿ ಮಹಿಳೆಯರೇ ಮೊದಲಿಗರಾಗಿದ್ದಾರೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.

ಗರ್ಭಿಣಿಯರು, ಬಾಣಂತಿಯರ ಆರೋಗ್ಯ ಅತ್ಯಂತ ಪ್ರಮುಖವಾದದ್ದು. ಮಹಿಳೆ ಕೇವಲ ವ್ಯಕ್ತಿಯಲ್ಲ, ಅವಳು ಮತ್ತೊಂದು ಜೀವಕ್ಕೆ ಜೀವ ನೀಡುವಂತಹ ಅಪರೂಪದ ಶಕ್ತಿ ಹೊಂದಿದ್ದಾಳೆ. ಆದ್ದರಿಂದ ಮಹಿಳೆಯರ ಆರೋಗ್ಯದ ಕಡೆ ಕುಟುಂಬದ ಸದಸ್ಯರು ಮತ್ತು ಸಮಾಜ ಎರಡೂ ಹೆಚ್ಚಿನ ಕಾಳಜಿ ವಹಿಸಬೇಕು. ಈ ಹಿನ್ನೆಲೆಯಲ್ಲಿ ಜನಪ್ರಿಯ ಆಸ್ಪತ್ರೆ ಕಡಿಮೆ ವೆಚ್ಚದಲ್ಲಿ ಗರ್ಭಿಣಿ, ಬಾಣಂತಿಯರಿಗಾಗಿ ವಿಶೇಷ ಪ್ಯಾಕೇಜ್ ಪರಿಚಯಿಸಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ರೂಪಾ ಹಾಸನ್ ಹೇಳಿದರು.

‘ನೆಸ್ಟಿಂಗ್’ ಎಂಬ ಪದದ ಬಳಕೆ ಸಹ ಅತ್ಯಂತ ಅರ್ಥಪೂರ್ಣವಾಗಿದ್ದು, ತಾಯಿ ಮತ್ತು ಮಗುವಿನ ಆರೈಕೆಯನ್ನು ಸೂಚಿಸುವ ಸುಂದರ ಪರಿಕಲ್ಪನೆ ಎಂದು ಅವರು ಅಭಿಪ್ರಾಯಪಟ್ಟರು.

ಜನಪ್ರಿಯ ಆಸ್ಪತ್ರೆ ಹಾಗೂ ಸಮೂಹ ಶಿಕ್ಷಣ ಸಂಸ್ಥೆಗಳ ಚೇರ್ಮನ್ ಡಾ. ವಿ.ಕೆ. ಅಬ್ದುಲ್ ಬಶೀರ್ ಪ್ರಾಸ್ತಾವಿಕವಾಗಿ ಮಾತನಾಡಿ, ಮನೆಯಲ್ಲಿನ ಮಹಿಳೆಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು.

ಪ್ರತಿ ಗಂಡಿನ ಯಶಸ್ಸಿನ ಹಿಂದೆ ಮಹಿಳೆಯ ಪ್ರೇರಣೆ ಮತ್ತು ಬೆಂಬಲ ಇರುವುದನ್ನು ನಾವು ಅನೇಕ ಸಂದರ್ಭಗಳಲ್ಲಿ ಕಾಣುತ್ತೇವೆ. ನಾನು ಎಂಬಿಬಿಎಸ್ ಪೂರೈಸಿ ಮದುವೆಯಾದ ನಂತರ ನನ್ನ ಮುಂದಿನ ಬೆಳವಣಿಗೆ ಮತ್ತು ಸಾಧನೆಗೆ ನನ್ನ ಪತ್ನಿಯೇ ಪ್ರಮುಖ ಕಾರಣರಾಗಿದ್ದಾರೆ ಎಂದು ಅವರು ಹೇಳಿದರು.

ಗಂಡ- ಹೆಂಡತಿಯ ನಡುವೆ ಕೆಲವೊಮ್ಮೆ ಭಿನ್ನಾಭಿಪ್ರಾಯಗಳು ಉಂಟಾಗುವುದು ಸಹಜ. ಆದರೆ ಪರಸ್ಪರ ಸಮನ್ವಯತೆ, ಸಹನೆ ಮತ್ತು ತಾಳ್ಮೆ ಇದ್ದರೆ ಆ ಕುಟುಂಬದ ಜೀವನ ಸುಖಮಯವಾಗಿರುತ್ತದೆ. ದಾಂಪತ್ಯ ಜೀವನದಲ್ಲಿ ಪರಸ್ಪರ ಅರ್ಥೈಸಿಕೊಳ್ಳುವ ಗುಣ ಮುಖ್ಯ ಎಂದು ಅವರು ಕಿವಿಮಾತು ಹೇಳಿದರು. ನಮ್ಮ ಮನೆಯ ಅಭಿವೃದ್ಧಿಯಷ್ಟೇ ಅಲ್ಲ, ದೇಶದ ಸಮಗ್ರ ಅಭಿವೃದ್ಧಿಯಲ್ಲಿಯೂ ಮಹಿಳೆಯರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಎಲ್ಲೆಲ್ಲಿ ಮಹಿಳೆಯರು ಅಧಿಕಾರಿಗಳಾಗಿ ಅಥವಾ ಆಡಳಿತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಾರೋ ಅಲ್ಲಿ ಉತ್ತಮ ಆಡಳಿತ ಮತ್ತು ಶಿಸ್ತು ಕಾಣಿಸಿಕೊಳ್ಳುತ್ತದೆ. ಮಹಿಳೆಯರು ಸಮಾಜದ ಪ್ರಗತಿಯಲ್ಲಿ ಪ್ರಮುಖ ಶಕ್ತಿಯಾಗಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟರು.

ಮಹಿಳೆಯರಿಗಾಗಿ ಆಯೋಜಿಸಿರುವ ಉಚಿತ ಆರೋಗ್ಯ ತಪಾಸಣೆ ಶಿಬಿರ ಮತ್ತು ಜನಪ್ರಿಯ ‘ನೆಸ್ಟಿಂಗ್ ಪ್ಯಾಕೇಜ್’ ಕಾರ್ಯಕ್ರಮವನ್ನು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸದುಪಯೋಗಪಡಿಸಿಕೊಳ್ಳಬೇಕು. ಈ ರೀತಿಯ ಆರೋಗ್ಯ ಸೇವೆಗಳು ಮಹಿಳೆಯರ ಆರೋಗ್ಯವನ್ನು ಕಾಪಾಡುವಲ್ಲಿ ಮಹತ್ವದ ಪಾತ್ರವಹಿಸುತ್ತವೆ ಎಂದು ಅವರು ಹೇಳಿದರು.

ಜನಪ್ರಿಯ ಆಸ್ಪತ್ರೆ ವೈಸ್ ಚೇರ್ಮನ್ ಫಾತೀಮ ನಸ್ರೀನ್ ಬಶೀರ್, ಆಸ್ಪತ್ರೆ ಆಡಳಿತ ನಿರ್ದೇಶಕ ಡಾ. ಶಾರೂಖ್ ಅಬ್ದುಲ್, ಸಾಮಾಜಿಕ ಹೋರಾಟಗಾರ್ತಿ ಕೆ.ಟಿ. ಜಯಶ್ರೀ, ಭಾನುಮತಿ, ಪತ್ರಕರ್ತೆ ಭವ್ಯ ನಾಗರಾಜು, ಶ್ವೇತಾ ಮಂಜು, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಉಪಾಧ್ಯಕ್ಷೆ ಶೋಭಾ ಮಹೇಶ್, ವೈದ್ಯರಾದ ಪವಿತ್ರ, ಡಾ. ಸಂಜನಾ, ಡಾ. ಪ್ರವಿಣ್ ಇತರರು ಉಪಸ್ಥಿತರಿದ್ದರು.